48 ಸಿಕ್ಸ್, 459 ರನ್ಸ್: ಅನ್ವಯ್ ದ್ರಾವಿಡ್ ಆರ್ಭಟಕ್ಕೆ ಸಿಕ್ತು ಪ್ರಶಸ್ತಿ
Rahul Dravid Son Anvay Dravid: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಅಂಡರ್-16 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. 2024 ರಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಮಿಂಚಿದ್ದ ಅನ್ವಯ್ ಇದೀಗ ಮತ್ತೊಮ್ತೆ ಕೆಎಸ್‌ಸಿಎ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಟೀಮ್ ಇಂಡಿಯಾ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಸುಪುತ್ರ ಅನ್ವಯ್ ದ್ರಾವಿಡ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಭರ್ಜರಿ ಪ್ರದರ್ಶನ. ಈ ಪ್ರದರ್ಶನದೊಂದಿಗೆ 16 ವರ್ಷದ ಅನ್ವಯ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ವಿಶೇಷ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
ಅಕ್ಟೋಬರ್ 5 ರಂದು ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಅನ್ವಯ್ ದ್ರಾವಿಡ್ ಅತ್ಯುತ್ತಮ ಕಿರಯ ಬ್ಯಾಟರ್ ಪ್ರಶಸ್ತಿ ಪಡೆದಿದ್ದಾರೆ. ಅಂಡರ್ 16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ಪರ ಅತಿ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಕೆಎಸ್‌ಸಿಎ ಅನ್ವಯ್ಗೆ ಈ ಪ್ರಶಸ್ತಿ ನೀಡಿದೆ.
ಈ ಬಾರಿಯ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ಅಂಡರ್-16 ತಂಡದ ಪರ ಕಣಕ್ಕಿಳಿದ ಅನ್ವಯ್ ಎಂಟು ಇನಿಂಗ್ಸ್ಗಳಿಂದ ಒಟ್ಟು 459 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ ಎರಡು ಭರ್ಜರಿ ಶತಕಗಳು ಮೂಡಿಬಂದಿವೆ. ಇದರ ನಡುವೆ 48 ಸಿಕ್ಸ್ ಹಾಗೂ ಫೋರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ 91.80 ಸರಾಸರಿಯಲ್ಲಿ ರನ್ಗಳಿಸಿ ಈ ಬಾರಿಯ ವಿಜಯ ಮರ್ಚೆಂಟ್ ಟೂರ್ನಿಯಲ್ಲಿ ಕರ್ನಾಟಕ ಪರ ಅತ್ಯಧಿಕ ರನ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ಭರ್ಜರಿ ಪ್ರದರ್ಶನ ಫಲವಾಗಿ ಇದೀಗ ಕರ್ನಾಟಕದ ಅತ್ಯುತ್ತಮ ಕಿರಿಯ ಬ್ಯಾಟರ್ ಪ್ರಶಸ್ತಿ ಅನ್ವಯ್ ಪಾಲಾಗಿದೆ. ಅಂದಹಾಗೆ ಅನ್ವಯ್ ದ್ರಾವಿಡ್ ಈ ಪ್ರಶಸ್ತಿ ಪಡೆಯುತ್ತಿರುವುದು ಇದೇ ಮೊದಲೇನಲ್ಲ. 2024 ರಲ್ಲಿ ನಡೆದ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ಒಟ್ಟು 357 ರನ್ಗಳಿಸಿ ಕಳೆದ ವರ್ಷವೇ ಈ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಮತ್ತೊಮ್ಮೆ ಕರ್ನಾಟಕದ ಕಿರಿಯ ಬ್ಯಾಟರ್ ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.
ಮಯಾಂಕ್, ಸ್ಮರಣ್ಗೆ ಪ್ರಶಸ್ತಿ:
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಮಯಾಂಕ್ ಅಗರ್ವಾಲ್ ಏಕದಿನ ಬ್ಯಾಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಮಯಾಂಕ್ 93 ರ ಸರಾಸರಿಯಲ್ಲಿ ಒಟ್ಟು 651 ರನ್ ಗಳಿಸಿ ಮಿಂಚಿದ್ದರು.
ರಣಜಿ ಟ್ರೋಫಿಯಲ್ಲಿನ ಪ್ರದರ್ಶನಕ್ಕಾಗಿ ಯುವ ಆಟಗಾರ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ಪ್ರಶಸ್ತಿ ಪಡೆದಿದ್ದಾರೆ. ಸ್ಮರಣ್ ಈ ಬಾರಿಯ ರಣಜಿ ಟೂರ್ನಿಯಲ್ಲಿ ಎರಡು ಶತಕಗಳೊಂದಿಗೆ 64.50 ರ ಸರಾಸರಿಯಲ್ಲಿ 516 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್
ಹಾಗೆಯೇ ಸೈಯದ್ಯ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಕರ್ನಾಟಕದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆ.ಎಲ್. ಶ್ರೀಜಿತ್ ಅವರು ಈ ಬಾರಿಯ ಟಿ20 ಬ್ಯಾಟರ್ ಪ್ರಶಸ್ತಿ ಪಡೆದಿದ್ದಾರೆ.
Published On - 9:03 am, Mon, 6 October 25
