Asia Cup 2025: ಏಷ್ಯಾಕಪ್ಗೆ ಭಾರತದ ಸಂಭಾವ್ಯ ತಂಡ
Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

ಏಷ್ಯಾಕಪ್ ಟಿ20 ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಈ ಟೂರ್ನಿಗಾಗಿ ಆಗಸ್ಟ್ ಮೂರನೇ ವಾರದಲ್ಲಿ ತಂಡವನ್ನು ಪ್ರಕಟಿಸಲು ಬಿಸಿಸಿಐ ನಿರ್ಧರಿಸಿದೆ. ಏಷ್ಯನ್ ರಾಷ್ಟ್ರಗಳ ನಡುವಣ ಈ ಕ್ರಿಕೆಟ್ ಕದನಕ್ಕಾಗಿ ಯುವ ಪಡೆಯನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು, ಹೀಗಾಗಿ ಈ ಬಾರಿಯ ಟೀಮ್ ಇಂಡಿಯಾದಲ್ಲಿ ಹಿರಿಯ ಆಟಗಾರರಿಗೆ ಅವಕಾಶ ಸಿಗುವುದಿಲ್ಲ. ಅಲ್ಲದೆ ಕಳೆದ ಫೆಬ್ರವರಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ವೇಳೆ ಹೊರಗುಳಿದಿದ್ದ ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಮತ್ತೆ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅದರಂತೆ ಏಷ್ಯಾಕಪ್ನಲ್ಲಿ ಭಾರತ ತಂಡದ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಅಭಿಷೇಕ್ ಶರ್ಮಾ ಆಯ್ಕೆಯಾಗುವುದು ಖಚಿತ. ಇನ್ನು ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ಶುಭ್ಮನ್ ಗಿಲ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಹಾಗೆಯೇ ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳುವುದು ಖಚಿತ.
ಇನ್ನು ವಿಕೆಟ್ ಕೀಪರ್ ಬ್ಯಾಟರ್ಗಳಾಗಿ ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಾಯಗೊಂಡಿರುವ ಪಂತ್ ಸಂಪೂರ್ಣ ಫಿಟ್ ಆಗದಿದ್ದರೆ, ಜಿತೇಶ್ ಶರ್ಮಾಗೆ ಚಾನ್ಸ್ ಸಿಗಬಹುದು. ಹಾಗೆಯೇ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾಗಿ ತಿಲಕ್ ವರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಬಹುದು.
ಆಲ್ರೌಂಡರ್ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿಗೆ ಅವಕಾಶ ನೀಡಲಿದ್ದಾರೆ. ಹಾಗೆಯೇ ವೇಗಿಗಳಾಗಿ ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಕಾಣಿಸಿಕೊಳ್ಳಲಿದ್ದಾರೆ. ಅತ್ತ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ ಈ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಹರ್ಷಿತ್ ರಾಣಾಗೆ ತಂಡದಲ್ಲಿ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ. ಅದರಂತೆ ಏಷ್ಯಾಕಪ್ಗೆ ಸಂಭಾವ್ಯ ಟೀಮ್ ಇಂಡಿಯಾ ಕೆಳಗಿನಂತಿರಲಿದೆ…
- ಯಶಸ್ವಿ ಜೈಸ್ವಾಲ್
- ಅಭಿಷೇಕ್ ಶರ್ಮಾ
- ಶುಭ್ಮನ್ ಗಿಲ್
- ಸೂರ್ಯಕುಮಾರ್ ಯಾದವ್ (ನಾಯಕ)
- ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
- ಶ್ರೇಯಸ್ ಅಯ್ಯರ್
- ರಿಷಭ್ ಪಂತ್ (ವಿಕೆಟ್ ಕೀಪರ್)
- ಅಕ್ಷರ್ ಪಟೇಲ್
- ತಿಲಕ್ ವರ್ಮಾ
- ಹಾರ್ದಿಕ್ ಪಾಂಡ್ಯ
- ವಾಷಿಂಗ್ಟನ್ ಸುಂದರ್
- ವರುಣ್ ಚಕ್ರವರ್ತಿ
- ಅರ್ಷದೀಪ್ ಸಿಂಗ್
- ಮೊಹಮ್ಮದ್ ಸಿರಾಜ್
- ಹರ್ಷಿತ್ ರಾಣಾ
ಭಾರತದ ಪಂದ್ಯ ಯಾವಾಗ?
ಏಷ್ಯಾಕಪ್ ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದ್ದು, ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಆಡಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯುಎಇ ತಂಡವನ್ನು ಎದುರಿಸಲಿದೆ. ಇನ್ನು ಸೆಪ್ಟೆಂಬರ್ 14 ರಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಸೆಣಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 19 ರಂದು ಭಾರತ-ಒಮಾನ್ ಮುಖಾಮುಖಿಯಾಗಲಿದೆ.
ಈ ಮೂರು ಪಂದ್ಯಗಳ ಮೂಲಕ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಂಡರೆ, ಸೂಪರ್ ಫೋರ್ ಹಂತಕ್ಕೇರಲಿದೆ. ಸೂಪರ್ ಫೋರ್ನಲ್ಲಿ ಒಟ್ಟು ನಾಲ್ಕು ತಂಡಗಳು ಅರ್ಹತೆ ಪಡೆಯಲಿದ್ದು, ಈ ತಂಡಗಳ ನಡುವೆ ಪಂದ್ಯಗಳು ಜರುಗಲಿದೆ. ಈ ಹಂತದ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್ ಆಡಲಿದೆ.
ಇದನ್ನೂ ಓದಿ: ಮೊಹಮ್ಮದ್ ಸಿರಾಜ್ಗೆ ಬರೋಬ್ಬರಿ 80 ಲಕ್ಷ ರೂ..!
ಭಾರತದ ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ:
- ಭಾರತ vs ಯುಎಇ – ಸೆಪ್ಟೆಂಬರ್ 10 (ದುಬೈ)
- ಭಾರತ vs ಪಾಕಿಸ್ತಾನ್ – ಸೆಪ್ಟೆಂಬರ್ 14 (ದುಬೈ)
- ಭಾರತ vs ಒಮಾನ್ – ಸೆಪ್ಟೆಂಬರ್ 19 (ಅಬುಧಾಬಿ)
Published On - 2:53 pm, Wed, 6 August 25
