WTC ಫೈನಲ್​ಗೇರಲು ಭಾರತ ತಂಡ ಇನ್ನೆಷ್ಟು ಪಂದ್ಯ ಗೆಲ್ಲಬೇಕು?

|

Updated on: Oct 27, 2024 | 7:00 AM

India vs New Zealand: ಪುಣೆಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 113 ರನ್​ಗಳಿಂದ ಸೋಲನುಭವಿಸಿದೆ. ಈ ಹೀನಾಯ ಸೋಲಿನ ಪರಿಣಾಮ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಅಂಕ ಪಟ್ಟಿಯಲ್ಲಿ ಭಾರತದ ಶೇಕಡಾವಾರು ಅಂಕ ಇಳಿಕೆಯಾಗಿದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಮುಂದಿನ ಪಂದ್ಯಗಳು ನಿರ್ಣಾಯಕವಾಗಿ ಮಾರ್ಪಟ್ಟಿದೆ.

WTC ಫೈನಲ್​ಗೇರಲು ಭಾರತ ತಂಡ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
WTC
Follow us on

ಬೆಂಗಳೂರು ಟೆಸ್ಟ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಪುಣೆಯಲ್ಲೂ ಮುಗ್ಗರಿಸಿದೆ. ಈ ಸತತ ಸೋಲುಗಳಿಂದ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಏಕೆಂದರೆ ಇದೀಗ ಫೈನಲ್ ರೇಸ್​ನಲ್ಲಿ ಭಾರತ, ಆಸ್ಟ್ರೇಲಿಯಾ ಜೊತೆ ನ್ಯೂಝಿಲೆಂಡ್, ಶ್ರೀಲಂಕಾ ಹಾಗೂ ಸೌತ್ ಆಫ್ರಿಕಾ ತಂಡಗಳು ಕಾಣಿಸಿಕೊಂಡಿವೆ.

ಒಂದು ವೇಳೆ ಟೀಮ್ ಇಂಡಿಯಾ ಮುಂದಿನ 6 ಪಂದ್ಯಗಳಲ್ಲಿ ಸತತ ಜಯ ಸಾಧಿಸಿದರೆ ನೇರವಾಗಿ ಫೈನಲ್​ಗೇರುವುದು ಖಚಿತ. ಆದರೆ ಇಲ್ಲಿ ಭಾರತ ತಂಡವು ಒಂದು ಪಂದ್ಯವನ್ನು ನ್ಯೂಝಿಲೆಂಡ್ ವಿರುದ್ಧ ಆಡಿದರೆ, ಉಳಿದ ಐದು ಪಂದ್ಯಗಳನ್ನು ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಡಬೇಕಿದೆ. ಹೀಗಾಗಿಯೇ ಮುಂದಿನ 6 ಪಂದ್ಯಗಳ ಲೆಕ್ಕಾಚಾರ ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು.

ಟೀಮ್ ಇಂಡಿಯಾ WTC ಫೈನಲ್​ಗೇರುವುದು ಹೇಗೆ?

  • ಭಾರತ ತಂಡವು ಮುಂದಿನ 6 ಟೆಸ್ಟ್ ಪಂದ್ಯಗಳಲ್ಲಿ 5 ಜಯ ಹಾಗೂ 1 ಡ್ರಾ ಸಾಧಿಸಿದರೂ ನೇರವಾಗಿ ಫೈನಲ್​ಗೇರಲಿದೆ. ಅಂದರೆ ಇಲ್ಲಿ ಟೀಮ್ ಇಂಡಿಯಾದ ಶೇಕಡಾವಾರು ಅಂಕ 71.05% ಆಗಲಿದೆ. ಈ ಮೂಲಕ ಟೀಮ್ ಇಂಡಿಯಾ ಡೈರೆಕ್ಟ್ ಆಗಿ ಫೈನಲ್​ಗೆ ಎಂಟ್ರಿ ಕೊಡಬಹುದು.
  • ಟೀಮ್ ಇಂಡಿಯಾ 6 ಪಂದ್ಯಗಳಲ್ಲಿ 4 ಜಯ ಸಾಧಿಸಿದರೂ ಫೈನಲ್​ಗೆ ಅರ್ಹತೆ ಪಡೆಯಬಹುದು. ಆದರೆ ಇಲ್ಲಿ ಉಳಿದ ತಂಡಗಳ ಫಲಿತಾಂಶ ಕೂಡ ಗಣನೆಗೆ ಬರಲಿದೆ. ಅಂದರೆ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಗೆದ್ದು, ಆಸ್ಟ್ರೇಲಿಯಾ ವಿರುದ್ಧ 3-2 ಅಂತರದಿಂದ ಜಯ ಸಾಧಿಸಿದರೆ ಶೇಕಡಾವಾರು ಅಂಕ 64.04% ಆಗಲಿದೆ. ಆದರೆ ಇಲ್ಲಿ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧ 2-0 ಅಂತರದಿಂದ ಗೆಲ್ಲುವುದನ್ನು ಟೀಮ್ ಇಂಡಿಯಾ ಎದುರು ನೋಡಬೇಕು.
  • ಒಂದು ವೇಳೆ ಭಾರತ ತಂಡವು ಮುಂದಿನ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದರೂ, ಅತ್ತ ನ್ಯೂಝಿಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯ ಸೋಲುವುದನ್ನು ಭಾರತ ತಂಡ ನಿರೀಕ್ಷಿಸಬೇಕಾಗುತ್ತದೆ. ಏಕೆಂದರೆ ಕಿವೀಸ್ ಪಡೆ ಮುಂದಿನ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಶೇಕಡಾವಾರು ಅಂಕ 64.29% ಆಗಲಿದೆ. ಇದರಿಂದ ಟೀಮ್ ಇಂಡಿಯಾದ ಫೈನಲ್​ ಹಾದಿ ಮತ್ತಷ್ಟು ದುರ್ಗಮವಾಗಲಿದೆ. ಅಂದರೆ 6 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವು ಕನಿಷ್ಠ 5 ರಲ್ಲಿ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.
  • ಟೀಮ್ ಇಂಡಿಯಾ ಕೊನೆಯ ಆರು ಪಂದ್ಯಗಳಲ್ಲಿ 5 ಕ್ಕಿಂತ ಕಡಿಮೆ ಮ್ಯಾಚ್ ಗೆದ್ದರೂ, ಅತ್ತ ಸೌತ್ ಆಫ್ರಿಕಾ ಮುಂದಿನ ಎಲ್ಲಾ ಮ್ಯಾಚ್​ಗಳನ್ನು ಗೆಲ್ಲಬಾರದು. ಏಕೆಂದರೆ ಸೌತ್ ಆಫ್ರಿಕಾ ಮುಂದಿನ 5 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಶೇಕಡಾವಾರು ಅಂಕ 69.44% ಆಗಲಿದೆ. ಇದರಿಂದ ಭಾರತ ತಂಡವು ಫೈನಲ್​ ರೇಸ್​ನಿಂದ ಹೊರಬೀಳಬಹುದು.
  • ಹೀಗಾಗಿ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ನೇರವಾಗಿ ಅರ್ಹತೆ ಪಡೆಯಲು ಮುಂದಿನ 6 ಪಂದ್ಯಗಳನ್ನು ಗೆಲ್ಲಬೇಕು ಅಥವಾ 5 ಜಯ ಹಾಗೂ 1 ಡ್ರಾ ಸಾಧಿಸಲೇಬೇಕು. ಇದರ ಹೊರತಾಗಿ 4 ಗೆಲುವು ಸಾಧಿಸಿದರೆ ಶ್ರೀಲಂಕಾ, ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳ ಫಲಿತಾಂಶಗಳ ಮೇಲೆ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಭವಿಷ್ಯ ನಿರ್ಧಾರವಾಗಲಿದೆ.