ಆಗಸ್ಟ್‌ ‘ತಿಂಗಳ ಆಟಗಾರ’ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಜಸ್ಪ್ರೀತ್ ಬುಮ್ರಾ! ರೇಸ್​ನಲ್ಲಿ ರೂಟ್, ಅಫ್ರಿದಿ

ICC Player of the Month: ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಆಗಸ್ಟ್‌ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಜಸ್ಪ್ರೀತ್ ಬುಮ್ರಾ! ರೇಸ್​ನಲ್ಲಿ ರೂಟ್, ಅಫ್ರಿದಿ
ಜಸ್ಪ್ರೀತ್ ಬುಮ್ರಾ, ಜೋ ರೂಟ್
Updated By: ಪೃಥ್ವಿಶಂಕರ

Updated on: Sep 06, 2021 | 10:08 PM

ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನಾಮನಿರ್ದೇಶನಗಳು ಆಗಸ್ಟ್‌ ತಿಂಗಳಿಗೆ ಸಂಬಂಧಿಸಿವೆ ಎಂದು ಐಸಿಸಿ ಹೇಳಿದೆ. ಬುಮ್ರಾ ಜೊತೆಗೆ ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಮತ್ತು ಇಂಗ್ಲೆಂಡ್ ನಾಯಕ ಜೋ ರೂಟ್ ಕೂಡ ಐಸಿಸಿ ಪುರುಷರ ಆಟಗಾರ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ 9 ವಿಕೆಟ್ ಪಡೆದ ಟೀಂ ಇಂಡಿಯಾ ಬೌಲರ್ ಬುಮ್ರಾ ಲಾರ್ಡ್ಸ್ ಟೆಸ್ಟ್​ನಲ್ಲಿ ಬ್ಯಾಟಿಂಗ್​ನಲ್ಲಿಯೂ ಮಿಂಚಿದ್ದರು. ಇನ್ನೊಬ್ಬ ವೇಗಿ, ಮೊಹಮ್ಮದ್ ಶಮಿ ಜೊತೆಗೂಡಿ ಒಂಬತ್ತನೇ ವಿಕೆಟ್​ಗೆ 89 ರನ್​ಗಳ ಜೊತೆಯಾಟ ನೀಡಿದರು. ಈ ಟೆಸ್ಟ್​ನಲ್ಲಿ ಭಾರತಕ್ಕೆ ಭರ್ಜರಿ ಜಯ ಸಿಕ್ಕಿತು.

ಇಂಗ್ಲೆಂಡ್ ನಾಯಕ ಜೋ ರೂಟ್ ಭಾರತದ ವಿರುದ್ಧ ನಡೆಯುತ್ತಿರುವ ಐದು ಟೆಸ್ಟ್ ಸರಣಿಯಲ್ಲಿ ಶತಕಗಳ ಸಸರಮಾಲೆ ಧರಿಸಿದ್ದಾರೆ. ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ರೂಟ್ ಮೊದಲ ಮೂರು ಟೆಸ್ಟ್​ಗಳಲ್ಲಿ ಮೂರು ಶತಕ ಗಳಿಸಿದ್ದರು. 105.81 ಸರಾಸರಿಯಲ್ಲಿ 528 ರನ್ ಗಳಿಸಿದ್ದಾರೆ.

ಇನ್ನೊಂದೆಡೆ ಶಾಹಿನ್ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಸರಣಿಯಲ್ಲಿ ಮಿಂಚಿದರು. ಆ ಸರಣಿಯಲ್ಲಿ ಅವರು 18 ವಿಕೆಟ್ ಪಡೆದರು. ಎರಡನೇ ಟೆಸ್ಟ್‌ನಲ್ಲಿ 10 ವಿಕೆಟ್ ಪಡೆದರು.

ಪುರುಷರ ಜೊತೆಗೆ ಮೂವರು ಮಹಿಳಾ ಕ್ರಿಕೆಟಿಗರು ಐಸಿಸಿ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಆದಾಗ್ಯೂ, ಅವರಲ್ಲಿ ಇಬ್ಬರು ಐರ್ಲೆಂಡ್‌ನವರು. ಇನ್ನೊಬ್ಬರು ಥೈಲ್ಯಾಂಡ್‌ನ ಆಟಗಾರ್ತಿ. ಗ್ಯಾಬಿ ಲೂಯಿಸ್, ಎಮಿರ್ ರಿಚರ್ಡ್ಸನ್ ಮತ್ತು ನಟ್ಟಾಯ ಬುಚಾಥಮ್ ಅವರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.