ಮುಂಬೈನ ಬ್ರಬೋರ್ನ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಐಪಿಎಲ್ ಸೀಸನ್ 15 ರ (IPL 2022) 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (MI vs DC) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡರು. ವಿಶೇಷ ಎಂದರೆ ಟಾಸ್ ಬಳಿಕ ಪ್ಲೇಯಿಂಗ್ 11 ಘೋಷಿಸುವ ಮೂಲಕ ಪಂತ್ ಅಚ್ಚರಿ ಮೂಡಿಸಿದ್ದರು. ಹೌದು, ರಿಷಭ್ ಪಂತ್ ತಮ್ಮ ಪ್ಲೇಯಿಂಗ್ ಇಲೆವೆನ್ ಘೋಷಿಸಿದಾಗ ತಂಡದಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರು ಮಾತ್ರ ಇದ್ದರು. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮೆಗಾ ಹರಾಜಿನ ಮೂಲಕ 6 ವಿದೇಶಿ ಆಟಗಾರರನ್ನು ಖರೀದಿಸಿತ್ತು. ಅಲ್ಲದೆ ಒಬ್ಬ ವಿದೇಶಿ ಆಟಗಾರನನ್ನು ರಿಟೈನ್ ಮಾಡಿಕೊಂಡಿತ್ತು.
ಆದರೆ ಇದೀಗ ಬಹುತೇಕ ಆಟಗಾರರು ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಡೆಲ್ಲಿ ತಂಡದಲ್ಲಿರುವ ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಪಾಕಿಸ್ತಾನ್ ವಿರುದ್ದ ಸರಣಿ ಆಡುತ್ತಿದ್ದಾರೆ. ಇನ್ನು ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಸೌತ್ ಆಫ್ರಿಕಾ ವಿರುದ್ದ ಸರಣಿ ಆಡುತ್ತಿದ್ದಾರೆ. ಹಾಗೆಯೇ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್‌ಗಿಡಿ ಬಾಂಗ್ಲಾ ವಿರುದ್ದದ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ಗಾಯಗೊಂಡಿರುವ ಅನ್ರಿಕ್ ನೋಕಿಯಾ ಈ ಪಂದ್ಯದಲ್ಲಿ ಆಡುತ್ತಿಲ್ಲ. ಐದು ಆಟಗಾರರು ನಾನಾ ಕಾರಣಗಳಿಂದ ಹೊರಗುಳಿದಿರುವ ಕಾರಣ ಉಳಿದದ್ದು ನ್ಯೂಜಿಲೆಂಡ್ ಆಟಗಾರ ಟಿಮ್ ಸೀಫರ್ಟ್ ಹಾಗೂ ವೆಸ್ಟ್ ಇಂಡೀಸ್ ಆಟಗಾರ ರೊವ್ಮನ್ ಪೊವೆಲ್ ಮಾತ್ರ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಇಬ್ಬರು ಆಟಗಾರರೊಂದಿಗೆ ಕಣಕ್ಕಿಳಿಯಬೇಕಾಯಿತು. ಕಳೆದ 14 ಸೀಸನ್ ಐಪಿಎಲ್ ಇತಿಹಾಸದಲ್ಲಿ ಹೀಗೆ ಇಬ್ಬರು ವಿದೇಶಿ ಆಟಗಾರರೊಂದಿಗೆ ತಂಡವೊಂದು ಕಣಕ್ಕಿಳಿಯುತ್ತಿರುವುದು ಇದು ಎರಡನೇ ಬಾರಿ.
ಒಂದು ತಂಡದಲ್ಲಿ ನಾಲ್ಕು ವಿದೇಶಿ ಆಟಗಾರರು ಆಡುವ ಅವಕಾಶವಿದ್ದರೂ, ಈ ಹಿಂದೆ 3 ಆಟಗಾರರು ಆಡಿದ ಹಲವು ನಿದರ್ಶನಗಳಿವೆ. ಆದರೆ ಇಬ್ಬರು ಆಟಗಾರರೊಂದಿಗೆ ಕಣಕ್ಕಿಳಿದ ಏಕೈಕ ತಂಡವೆಂದರೆ ಕೊಲ್ಕತ್ತಾ ನೈಟ್ ರೈಡರ್ಸ್. 2011 ರಲ್ಲಿ ಕೆಕೆಆರ್ ತಂಡವು ಸಿಎಸ್ಕೆ ವಿರುದ್ದ ಜಾಕ್ ಕಾಲಿಸ್ ಹಾಗೂ ಇಯಾಮ್ ಮೋರ್ಗನ್ ಜೊತೆ ಕಣಕ್ಕಿಳಿದಿತ್ತು. ಇದೀಗ ಬರೋಬ್ಬರಿ ಒಂದು ದಶಕದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಕೇವಲ ಇಬ್ಬರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿಯುವ ಮೂಲಕ ಕೆಕೆಆರ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ರಿಷಭ್ ಪಂತ್ (ನಾಯಕ), ಪೃಥ್ವಿ ಶಾ, ಟಿಮ್ ಸೀಫರ್ಟ್, ಮನದೀಪ್ ಸಿಂಗ್,ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ
ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ:
ರಿಷಭ್ ಪಂತ್ (ನಾಯಕ), ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ಕೆಎಸ್ ಭರತ್, ಮನದೀಪ್ ಸಿಂಗ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಕ್ ನೋಕಿಯಾ, ಕಮಲೇಶ್ ನಾಗರಕೋಟಿ, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಅಶ್ವಿನ್ ಹೆಬ್ಬಾರ್, ಅಶ್ವಿನ್ ಹೆಬ್ಬಾರ್ , ಯಶ್ ಧುಲ್, ವಿಕ್ಕಿ ಓಸ್ಟ್ವಾಲ್, ಲುಂಗಿ ಎನ್‌ಗಿಡಿ, ಟಿಮ್ ಸೀಫರ್ಟ್, ಪ್ರವೀಣ್ ದುಬೆ, ರೋವ್‌ಮನ್ ಪೊವೆಲ್, ಲಲಿತ್ ಯಾದವ್.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು