Tilak Varma: ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಐಪಿಎಲ್ಗೆ ಪದಾರ್ಪಣೆ ಮಾಡಿದ ಬಡ ಪ್ರತಿಭೆ
IPL 2022: ತಿಲಕ್ ವರ್ಮಾ ಅವರನ್ನು ಈ ಬಾರಿ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು 1.7 ಕೋಟಿ ನೀಡಿ ಖರೀದಿಸಿತ್ತು. ಅಷ್ಟೇ ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಪಂದ್ಯದಲ್ಲಿ ತಿಲಕ್ ವರ್ಮಾ ಪದಾರ್ಪಣೆ ಮಾಡಿದ್ದಾರೆ.
ಅದೃಷ್ಟ ಯಾರಿಗೆ ಹೇಗೆ ಬರುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ ಪಟ್ಟ ಪರಿಶ್ರಮಕ್ಕೆ ಒಂದಲ್ಲ ಒಂದು ದಿನ ಬೆಲೆ ಸಿಕ್ಕೇ ಸಿಗುತ್ತೆ ಎಂಬುದಕ್ಕೆ ತಾಜಾ ಉದಾಹರಣೆ ಹೈದರಾಬಾದ್ನ ತಿಲಕ್ ವರ್ಮಾ. ಈ ಹೆಸರು ಈ ಹಿಂದೆ ಕೂಡ ನೀವು ಕ್ರಿಕೆಟ್ ಅಂಗಳದಲ್ಲಿ ಕೇಳಿರಬಹುದು. ಏಕೆಂದರೆ ತಿಲಕ್ ಈ ಹಿಂದೆ ಅಂಡರ್ 19 ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. 2020ರ ಅಂಡರ್ 19 ವಿಶ್ವಕಪ್ ರನ್ನರ್ ಅಪ್ ತಂಡದ ಭಾಗವಾಗಿದ್ದರು. ಈ ವೇಳೆ ಜೊತೆಗಿದ್ದ ಹಲವು ಆಟಗಾರರಿಗೆ ಐಪಿಎಲ್ 2020 ಮತ್ತು 2021 ರಲ್ಲಿ ಅವಕಾಶ ಸಿಕ್ಕಿತ್ತು. ಆದರೆ ತಿಲಕ್ ವರ್ಮಾ ಮಾತ್ರ ತನ್ನ ಟೈಮ್ಗಾಗಿ ಕಾಯುತ್ತಿದ್ದರು.
ಅತ್ತ ಕಳೆದ ಎರಡು ವರ್ಷಗಳಲ್ಲಿ ಐಪಿಎಲ್ ಅವಕಾಶ ಸಿಗದಿದ್ದಾಗ ಇತ್ತ ಕುಟುಂಬಸ್ಥರು ಕೂಡ ದುಖಃಕ್ಕೀಡಾಗಿದ್ದರು. ಏಕೆಂದರೆ ತಿಲಕ್ನ ಕ್ರಿಕೆಟ್ ಕನಸಿಗಾಗಿ ಕುಟುಂಬಸ್ಥರು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿದ್ದರು. ಅದರಲ್ಲೂ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ತಿಲಕ್ ವರ್ಮಾ ಅವರ ತಂದೆಯ ಕಷ್ಟಗಳನ್ನು ನೋಡಿ ಆ ಬಳಿಕ ಖುದ್ದು ಕೋಚ್ ಕೂಡ ಯುವ ಕ್ರಿಕೆಟಿಗನ ಸಹಾಯಕ್ಕೆ ನಿಂತರು.
ಹೀಗಾಗಿಯೇ ನನ್ನ ಮಗನ ಸಾಧನೆಯಲ್ಲಿ ನನ್ನ ಬಗ್ಗೆ ನೀವು ಏನೂ ಬರೆಯದಿದ್ದರೂ ಪರವಾಗಿಲ್ಲ. ಆದರೆ ಅವನಿಗೆ ಕೋಚಿಂಗ್ ನೀಡಿದ ಸಲಾಮ್ ಅವರ ಬಗ್ಗೆ ಬರೆಯಲೇಬೇಕು. ಏಕೆಂದರೆ ನನ್ನ ಮಗ ಇಂದು ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಕಾರಣ ಕೋಚ್ ಸಲಾಮ್. ಅವನ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಿ ಆರ್ಥಿಕ ಸಹಾಯ ಮಾಡಿದ್ದಾರೆ. ಅಲ್ಲದೆ ಅವರೇ ಕ್ರಿಕೆಟ್ ಅಕಾಡೆಮಿಯ ಫೀಸ್ ಭರಿಸಿ ತರಬೇತಿ ನೀಡಿದ್ದಾರೆ. ಇದೀಗ ಅವರಿಂದಾಗಿ ನನ್ನ ಮಗ ಐಪಿಎಲ್ವರೆಗೂ ಬೆಳೆದು ನಿಂತಿದ್ದಾನೆ. ಇದಕ್ಕೆಲ್ಲಾ ಕಾರಣ ಸಲಾಮ್. ಹೀಗಾಗಿ ಮಗನ ಸಾಧನೆ ಬಗ್ಗೆ ಬರೆಯುವಾಗ ನನ್ನ ಹೆಸರು ಬರದಿದ್ದರೂ ಅಡ್ಡಿಯಿಲ್ಲ, ಆದರೆ ಸಲಾಮ್ ಭಾಯಿ ಅವರ ಬಗ್ಗೆ ಬರೆಯಲೇಬೇಕು ಎಂದು ತಿಲಕ್ ವರ್ಮಾ ತಂದೆ ನಂಬೂರಿ ನಾಗರಾಜ ತಿಳಿಸಿದ್ದರು.
ಅಂದಹಾಗೆ ತಿಲಕ್ ವರ್ಮಾ ಅವರನ್ನು ಈ ಬಾರಿ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು 1.7 ಕೋಟಿ ನೀಡಿ ಖರೀದಿಸಿತ್ತು. ಅಷ್ಟೇ ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಪಂದ್ಯದಲ್ಲಿ ತಿಲಕ್ ವರ್ಮಾ ಪದಾರ್ಪಣೆ ಮಾಡಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಮೊದಲ ಪಂದ್ಯದಲ್ಲಿ ಒಂದಷ್ಟು ಹೊತ್ತ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರೂ ಅದನ್ನು ದೊಡ್ಡ ಮೊತ್ತವಾಗಿಸುವಲ್ಲಿ ಎಡವಿದ್ದಾರೆ. ಇದಾಗ್ಯೂ 15 ಎಸೆತಗಳಲ್ಲಿ 3 ಭರ್ಜರಿ ಬೌಂಡರಿ ಬಾರಿಸುವ ಚೊಚ್ಚಲ ಪಂದ್ಯದಲ್ಲೇ 22 ರನ್ಗಳಿಸಿ ಗಮನ ಸೆಳೆದಿದ್ದಾರೆ.
ಒಟ್ಟಿನಲ್ಲಿ ತಿಲಕ್ ವರ್ಮಾ ಅವರ ಕನಸು, ಕುಟುಂಬಸ್ಥರ ಕಣ್ಣೀರು ಹಾಗೂ ಕೋಚ್ ಸಲಾಮ್ ಭಾಯಿ ಅವರ ನಂಬಿಕೆ ಕೊನೆಗೂ ಹುಸಿಯಾಗಿಲ್ಲ. ನಿರೀಕ್ಷೆಯಂತೆ ಯುವ ಪ್ರತಿಭೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹ ಬಡಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಸಲಾಮ್ ಭಾಯಿ ಅವರಂತಹ ಮತ್ತಷ್ಟು ಕೋಚ್ ಬರಲಿ, ಇನ್ನಷ್ಟು ಬಡ ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಆಶಿಸೋಣ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು
(Tilak Varma Debut for Mumbai Indians in IPL 2022 of DC vs MI Match)