
ಭಾರತ ಮತ್ತು ಪಾಕಿಸ್ತಾನ್ ನಡುವಣ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಸಖತ್ ಸುದ್ದಿಯಾಗಿದ್ದು ಇಬ್ಬರೇ… ಒಬ್ಬರು ವಿರಾಟ್ ಕೊಹ್ಲಿ. ಮತ್ತೊಬ್ಬರು ಅಬ್ರಾರ್ ಅಹ್ಮದ್. ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಸುದ್ದಿಯಾದರೆ, ಅಬ್ರಾರ್ ಅಹ್ಮದ್ ವಿಚಿತ್ರ ಶೈಲಿಯ ಸಂಭ್ರಮದೊಂದಿಗೆ ಎಲ್ಲರ ಗಮನ ಸೆಳೆದಿದ್ದರು. ಆದರೆ ಈ ಸಂಭ್ರಮವೇ ಅವರ ಪಾಲಿಗೆ ಮುಳುವಾಗಿ ಮಾರ್ಪಟ್ಟಿತ್ತು.
ಶುಭ್ಮನ್ ಗಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ ಅಬ್ರಾರ್ ಅಹ್ಮದ್, ಹೋಯ್ತಾ ಇರು ಎಂಬಾರ್ಥದಲ್ಲಿ ಕಣ್ಸನ್ನೆ ಮಾಡಿ ಸಂಭ್ರಮಿಸಿದ್ದರು. ಆದರೆ ಈ ಸಂಭ್ರಮಕ್ಕೆ ಪಾಕಿಸ್ತಾನದ ಮಾಜಿ ಆಟಗಾರರು ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು.
ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ವಿಪರೀತ ಟ್ರೋಲ್ಗೆ ಒಳಗಾಗಿದ್ದ ಅಬ್ರಾರ್ ಅಹ್ಮದ್ ಇದೀಗ ತಮ್ಮ ನಡೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಬ್ರಾರ್ ಅಹ್ಮದ್, ಶುಭ್ಮನ್ ಗಿಲ್ ಅವರನ್ನು ಔಟ್ ಮಾಡಿ ನಾನು ಸಂಭ್ರಮಿಸಿದ್ದು ನನ್ನ ಶೈಲಿಯಾಗಿತ್ತು. ಅಂದರೆ ನಾನು ವಿಕೆಟ್ ಸಿಕ್ಕಾಗ ಸಂಭ್ರಮಿಸುವುದೇ ಹಾಗೆ. ಆದರೆ ಇದರಿಂದ ಯಾರಿಗಾದರೂ ನೋವುಂಟಾಗಿದ್ದರೆ, ಅದಕ್ಕಾಗಿ ನಾನು ವಿಷಾದಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಹೀಗಾಗಿ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಪಾಕಿಸ್ತಾನ್ ಸ್ಪಿನ್ನರ್ ಹೇಳಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಅಬ್ರಾರ್ ಅಹ್ಮದ್ 10 ಓವರ್ಗಳಲ್ಲಿ ಕೇವಲ 28 ರನ್ ನೀಡಿ 1 ವಿಕೆಟ್ ಕಬಳಿಸಿ ಮಿಂಚಿದ್ದರು. ಅಬ್ರಾರ್ ಅವರ ಹತ್ತು ಓವರ್ ಪೂರ್ಣಗೊಳ್ಳುತ್ತಿದ್ದಂತೆ ಪಾಕ್ ಸ್ಪಿನ್ನರ್ನ ಬಳಿ ತೆರಳಿದ ವಿರಾಟ್ ಕೊಹ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: IPL 2026: ಐಪಿಎಲ್ಗೆ ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್
ಈ ಬಗ್ಗೆ ಮಾತನಾಡಿದ ಅಬ್ರಾರ್, ನಾನು ಅಂಡರ್-19 ಆಡುವಾಗಿಂದಲೇ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಬೇಕೆಂಬ ಕನಸು ಕಟ್ಟಿಕೊಂಡಿದೆ. ಅದು ಈಗ ನೆರವೇರಿದೆ. ಅದರಲ್ಲೂ ಅವರೇ ಉತ್ತಮವಾಗಿ ಬೌಲಿಂಗ್ ಮಾಡಿದ್ದೀಯಾ ಎಂದಿರುವುದು ನನ್ನ ಸಂತಸವನ್ನು ದುಪ್ಪಟ್ಟುಗೊಳಿಸಿತು ಎಂದು ತಿಳಿಸಿದ್ದಾರೆ.
Published On - 1:03 pm, Sat, 8 March 25