ವೆಸ್ಟ್ ಇಂಡೀಸ್ನಲ್ಲಿ ನಡೆದ ಹೊಸ ಮಾದರಿಯ ಕ್ರಿಕೆಟ್ ಟೂರ್ನಿ ದಿ ಸಿಕ್ಸ್ಟಿ ಲೀಗ್ಗೆ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ವಿರುದ್ದ ಗೆಲುವು ದಾಖಲಿಸುವ ಮೂಲಕ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಟ್ಸ್ ತಂಡವು ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪೇಟ್ರಿಯಟ್ಸ್ ತಂಡದ ನಾಯಕ ಎವಿನ್ ಲೂಯಿಸ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಸುನೀಲ್ ನರೈನ್ (0) ಮೊದಲ ಓವರ್ನಲ್ಲೇ ಶೂನ್ಯಕ್ಕೆ ಔಟಾಗಿದ್ದರು. ಇನ್ನು ಮತ್ತೋರ್ವ ಆರಂಭಿಕ ವೆಬ್ಸ್ಟರ್ ಕೇವಲ 5 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದ್ದರು. ಈ ವೇಳೆ ಕಣಕ್ಕಿಳಿದ ಸ್ಪೋಟಕ ಬ್ಯಾಟ್ಸ್ಮನ್ ಆಂಡ್ರೆ ರಸೆಲ್ ಕೇವಲ 13 ಎಸೆತಗಳಲ್ಲಿ 3 ಸಿಕ್ಸರ್ನೊಂದಿಗೆ 22 ರನ್ ಚಚ್ಚಿದರು. ಆದರೆ ಎವಿನ್ ಲೂಯಿಸ್ ಎಸೆದ ಅತ್ಯುತ್ತಮ ಥ್ರೋಗೆ ರನೌಟ್ ಆಗುವ ಮೂಲಕ ರಸೆಲ್ ಹೊರನಡೆದರು.
ಇನ್ನು ಟಿಮ್ ಸೈಫರ್ಟ್ 25 ಎಸೆತಗಳಲ್ಲಿ 37 ರನ್ ಬಾರಿಸುವ ಮೂಲಕ ನಿಗದಿತ 10 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 83 ಕ್ಕೆ ತಂದು ನಿಲ್ಲಿಸಿದರು.
84 ರನ್ಗಳ ಸುಲಭ ಗುರಿ ಪಡೆದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಟ್ಸ್ ತಂಡಕ್ಕೆ ಆಂಡ್ರೆ ಫ್ಲೆಚರ್ ಹಾಗೂ ಎವಿನ್ ಲೂಯಿಸ್ ಬಿರುಸಿನ ಆರಂಭ ಒದಗಿಸಿದ್ದರು. 4.4 ಓವರ್ಗಳಲ್ಲಿ 53 ರನ್ ಕಲೆಹಾಕಿದ ಈ ಜೋಡಿ ತಂಡದ ಗೆಲುವನ್ನು ಖಚಿತಪಡಿಸಿದರು. ಈ ಹಂತದಲ್ಲಿ ಲೂಯಿಸ್ (32) ಔಟಾದರೆ, ಆ ಬಳಿಕ ಬಂದ ರುದರ್ಫೋರ್ಡ್ (4) ಕೂಡ ಬೇಗನೆ ನಿರ್ಗಮಿಸಿದರು. ಇನ್ನು ಡೆವಾಲ್ಡ್ ಬ್ರೆವಿಸ್ ಎದುರಿಸಿದ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು.
ಈ ವೇಳೆ ಫ್ಲೆಚರ್ (27) ಜೊತೆಗೂಡಿದ ಕ್ರಿಸ್ ಗೇಲ್ 15 ರನ್ ಬಾರಿಸುವ ಮೂಲಕ ಬೌಂಡರಿಯೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 9.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಟ್ಸ್ ತಂಡ ರೋಚಕ ಜಯದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
Published On - 3:05 pm, Mon, 29 August 22