IND vs PAK: ಪಾಕ್ ವಿರುದ್ದ ಟೀಮ್ ಇಂಡಿಯಾ ಪಾಲಿಗೆ ವರವಾದ ಐಸಿಸಿ ಹೊಸ ನಿಯಮ..!
IND vs PAK: ಪಾಕಿಸ್ತಾನ್ ಬೌಲರ್ಗಳ ಕಥೆ ಕೂಡ ಭಿನ್ನವಾಗಿರಲಿಲ್ಲ. ಪಾಕ್ ತಂಡ ಕೂಡ ನಿಗದಿತ ಸಮಯದಲ್ಲಿ 17 ಓವರ್ಗಳನ್ನು ಮಾತ್ರ ಪೂರ್ಣಗೊಳಿಸಿದ್ದರು.
Asia Cup 2022: ಭಾನುವಾರ ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಪಾಕಿಸ್ತಾನ್ (India vs Pakistan) ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ರೋಚಕ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ್ದ ಟೀಮ್ ಇಂಡಿಯಾ ಪರ ವೇಗಿಗಳು ಕರಾರುವಾಕ್ ದಾಳಿ ಸಂಘಟಿಸಿದ್ದರು. ಪರಿಣಾಮ 19.5 ಓವರ್ಗಳಲ್ಲಿ ಪಾಕಿಸ್ತಾನ್ ತಂಡವು 147 ರನ್ಗಳಿಸಿ ಆಲೌಟ್ ಆಯಿತು. ಒಂದು ಹಂತದಲ್ಲಿ ಕೇವಲ 130 ರನ್ಗಳೊಳಗೆ ಕುಸಿಯಬೇಕಿದ್ದ ಪಾಕ್ ತಂಡಕ್ಕೆ ವರದಾನವಾಗಿದ್ದು ಐಸಿಸಿಯ (ICC) ಹೊಸ ನಿಯಮ. ಇದುವೇ ಆ ಬಳಿಕ ಟೀಮ್ ಇಂಡಿಯಾ ಪಾಲಿಗೂ ಟರ್ನಿಂಗ್ ಪಾಯಿಂಟ್ ಆಗಿದ್ದು ಇಲ್ಲಿ ವಿಶೇಷ.
ಐಸಿಸಿಯ ಹೊಸ ನಿಯಮದ ಪ್ರಕಾರ ಇಂತಿಷ್ಟು ಸಮಯದಲ್ಲಿ 20 ಓವರ್ಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಶಿಕ್ಷೆಯಾಗಿ ಉಳಿದ ಓವರ್‌ಗಳ ವೇಳೆ ಫೀಲ್ಡರ್ರೊಬ್ಬರ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಹೈವೋಲ್ಟೇಜ್ ಪಂದ್ಯದಲ್ಲಿ ಉಭಯ ತಂಡಗಳ ನಾಯಕರುಗಳು ನಿಗದಿತ ಸಮಯದಲ್ಲಿ 20 ಓವರ್ಗಳನ್ನು ಮುಗಿಸುವಲ್ಲಿ ವಿಫಲರಾದರು.
ಮೊದಲು ಬೌಲಿಂಗ್ ಮಾಡಿದ ಟೀಮ್ ಇಂಡಿಯಾ ನಿಗದಿತ ಸಮಯದಲ್ಲಿ 17 ಓವರ್ಗಳಲ್ಲಿ ಪೂರ್ಣಗೊಳಿಸಿತ್ತು. ಅಲ್ಲದೆ ಈ ವೇಳೆ ಪಾಕ್ ತಂಡವು 7 ವಿಕೆಟ್ ನಷ್ಟಕ್ಕೆ 114 ರನ್ ಮಾತ್ರ ಗಳಿಸಿತ್ತು. ಆದರೆ ಆ ಬಳಿಕ ಐಸಿಸಿಯ ಹೊಸ ನಿಯಮದ ಲಾಭ ಪಡೆದ ಪಾಕ್ ತಂಡದ ಆಟಗಾರರು ಕೊನೆಯ 17 ಎಸೆತಗಳಲ್ಲಿ 33 ರನ್ ಗಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಟೀಮ್ ಇಂಡಿಯಾಗೆ 148 ರನ್ಗಳ ಟಾರ್ಗೆಟ್ ನೀಡಿದರು.
ಇನ್ನು ಪಾಕಿಸ್ತಾನ್ ಬೌಲರ್ಗಳ ಕಥೆ ಕೂಡ ಭಿನ್ನವಾಗಿರಲಿಲ್ಲ. ಪಾಕ್ ತಂಡ ಕೂಡ ನಿಗದಿತ ಸಮಯದಲ್ಲಿ 17 ಓವರ್ಗಳನ್ನು ಮಾತ್ರ ಪೂರ್ಣಗೊಳಿಸಿದ್ದರು. ಇದರ ಲಾಭ ಪಡೆದ ಟೀಮ್ ಇಂಡಿಯಾ ಕೊನೆಯ 3 ಓವರ್ಗಳಲ್ಲಿ 32 ರನ್ ಬಾರಿಸುವ ಮೂಲಕ ರೋಚಕ ಜಯವನ್ನು ತನ್ನದಾಗಿಸಿಕೊಂಡಿತು. ಒಂದಾರ್ಥದಲ್ಲಿ ಐಸಿಸಿ ರೂಪಿಸಿರುವ ಹೊಸ ನಿಯಮವು ಚೇಸಿಂಗ್ ಮಾಡಿದ್ದ ಟೀಮ್ ಇಂಡಿಯಾ ಪಾಲಿಗೆ ವರದಾನವಾಯಿತು ಎಂದೇ ಹೇಳಬಹುದು.
ಏನಿದು ಐಸಿಸಿ ಹೊಸ ನಿಯಮ:
ಐಸಿಸಿಯ ಹೊಸ ನಿಯಮದ ಪ್ರಕಾರ, ಬೌಲಿಂಗ್ ತಂಡವು ಯಾವುದೇ ಸಂದರ್ಭದಲ್ಲಿ ನಿಗದಿತ ಸಮಯದೊಳಗೆ ತಮ್ಮ ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸಬೇಕಾಗುತ್ತದೆ. ಒಂದು ವೇಳೆ ತಂಡವು ನಿಗದಿತ ಸಮಯಕ್ಕಿಂತ ಓವರ್ ರೇಟ್‌ನಲ್ಲಿ ಹಿಂದುಳಿದರೆ, ಉಳಿದ ಓವರ್‌ಗಳ ವೇಳೆ ಫೀಲ್ಡರ್‌ಗಳಲ್ಲಿ ಒಬ್ಬರು 30 ಯಾರ್ಡ್‌ಗಳ ವ್ಯಾಪ್ತಿಯಲ್ಲಿ ಇರಬೇಕಾಗುತ್ತದೆ. ಅಂದರೆ ನಿಗದಿತ ಸಮಯದಲ್ಲಿ 20 ಓವರ್ ಪೂರ್ಣಗೊಳಿಸದಿದ್ದರೆ, ಬೌಂಡರಿ ಲೈನ್ನಲ್ಲಿರುವ ಒಬ್ಬ ಫೀಲ್ಡರ್ ಅನ್ನು 30 ಯಾರ್ಡ್ ಸರ್ಕಲ್ನಲ್ಲಿ (ಫ್ರಂಟ್ ಫೀಲ್ಡರ್) ಫೀಲ್ಡಿಂಗ್ ನಿಲ್ಲಿಸಬೇಕು.
ಪವರ್‌ಪ್ಲೇ (ಮೊದಲ 6 ಓವರ್‌ಗಳು) ನಂತರ 30-ಯಾರ್ಡ್ ಸರ್ಕಲ್ ಹೊರಗೆ 5 ಫೀಲ್ಡರ್‌ಗಳನ್ನು ನಿಲ್ಲಿಸಬಹುದು. ಆದರೆ ಹೊಸ ನಿಯಮಗಳ ಬಳಿಕ, ನಿಗದಿತ ಸಮಯದಲ್ಲಿ ಓವರ್ ಮುಗಿಸದಿದ್ದರೆ ಕೇವಲ 4 ಫೀಲ್ಡರ್‌ಗಳು ಮಾತ್ರ ವೃತ್ತದ ಹೊರಗೆ ನಿಲ್ಲಲು ಅವಕಾಶ ಇರಲಿದೆ. ಈ ನಿಯಮವು 16 ಜನವರಿ 2022 ರಿಂದ ಜಾರಿಯಲ್ಲಿದ್ದು, ಇದರಿಂದ ರೋಚಕ ಹೋರಾಟದ ಪಂದ್ಯದ ವೇಳೆ ಬೌಲಿಂಗ್ ತಂಡವು ಸಂಕಷ್ಟಕ್ಕೆ ಸಿಲುಕುತ್ತದೆ. ಅದೇ ಸಮಯದಲ್ಲಿ ಬ್ಯಾಟ್ಸ್ಮನ್ಗಳಿಗೆ ಇದು ವರದಾನವಾಗುತ್ತದೆ.
ಇದನ್ನೂ ಓದಿ: Virat Kohli: ಪಾಕ್ ವಿರುದ್ಧ ಕಣಕ್ಕಿಳಿದು ವಿಶ್ವ ದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ..!
ಪಾಕ್ ವಿರುದ್ದ ಪಂದ್ಯದಲ್ಲೂ ಪಾಕಿಸ್ತಾನಿ ಬೌಲರ್ಗಳು ನಿಗದಿತ ಸಮಯದಲ್ಲಿ ಓವರ್ ಪೂರ್ಣಗೊಳಿಸದಿರುವುದು ಡೆತ್ ಓವರ್‌ಗಳ ವೇಳೆ ಟೀಮ್ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಆಯಿತು. ಅಲ್ಲದೆ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
Published On - 11:26 am, Mon, 29 August 22