ಲೀಡ್ಸ್ನ ಹೀಡಿಗ್ಲೆಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆ್ಯಶಸ್ ಸರಣಿಯ (Ashes Series) ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (England vs Australia) ನಡುವಣ ಮೂರನೇ ಟೆಸ್ಟ್ ಪಂದ್ಯ ಕುತೂಹಲದತ್ತ ಸಾಗುತ್ತಿದೆ. ಪ್ಯಾಟ್ ಕಮಿನ್ಸ್ (Pat Cummins) ಮಾರಕ ಬೌಲಿಂಗ್ ದಾಳಿಗೆ ಕುಸಿದ ಆಂಗ್ಲರು ಮೊದಲ ಇನ್ನಿಂಗ್ಸ್ನಲ್ಲಿ 237 ರನ್ಗಳಿಗೆ ಆಲೌಟ್ ಆದರು. ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿದೆ. 142 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಇನ್ನೂ ಮೂರು ದಿನಗಳ ಆಟ ಬಾಕಿ ಇರುವ ಕಾರಣ ಈ ಟೆಸ್ಟ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಕುಸಿತ ಕಂಡಿತು. 100 ರನ್ಗು ಮೊದಲೇ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ತಂಡದ ಪರ ಮಿಚೆಲ್ ಮಾರ್ಶ್ ಮಾತ್ರ ಶತಕ ಸಿಡಿಸಿ ಏಕಾಂಗಿಯಾಗಿ ಹೋರಾಡಿದರು. 118 ಎಸೆತಗಳಲ್ಲಿ 17 ಫೋರ್, 4 ಸಿಕ್ಸರ್ನೊಂದಿಗೆ 118 ರನ್ ಚಚ್ಚಿದರು. ಇವರು ಬಿಟ್ಟರೆ ಟ್ರಾವಿಸ್ ಹೆಡ್ 39 ರನ್ ಗಳಿಸಿದ್ದೇ ಹೆಚ್ಚು. ಆಸೀಸ್ 60.4 ಓವರ್ಗಳಲ್ಲಿ 263 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಮಾರ್ಕ್ ವುಡ್ 5 ಹಾಗೂ ಕ್ರಿಸ್ ವೋಕ್ಸ್ 3 ವಿಕೆಟ್ ಪಡೆದರು.
IND vs WI: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತದ ಬಲಿಷ್ಠ ಸಂಭಾವ್ಯ ತಂಡ ಹೀಗಿದೆ
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಕೂಡ ವಿಕೆಟ್ ಕಳೆದುಕೊಂಡು ಸಾಗಿತು. ತಂಡದ ಮೊತ್ತ 87 ಆಗುವ ಹೊತ್ತಿಗೆ 5 ವಿಕೆಟ್ ಪತನಗೊಂಡವು. ನಾಯಕ ಬೆನ್ ಸ್ಟೋಕ್ಸ್ 108 ಎಸೆತಗಳಲ್ಲಿ 80 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಓಪನರ್ ಜ್ಯಾಕ್ ಕ್ರಾವ್ಲೆ 33 ರನ್ ಗಳಿಸಿದರು. ಪ್ಯಾಟ್ ಕಮಿನ್ಸ್ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಆಂಗ್ಲರು 52.3 ಓವರ್ನಲ್ಲಿ 237 ರನ್ಗಳಿಗೆ ಆಲೌಟ್ ಆದರು. ಆಸ್ಟ್ರೇಲಿಯಾ ಪರ ನಾಯಕ ಕಮಿನ್ಸ್ 6 ವಿಕೆಟ್ ಕಿತ್ತು ಮಿಂಚಿದರು.
26 ರನ್ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ಪುನಃ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಡೇವಿಡ್ ವಾರ್ನರ್ 1, ಸ್ಟೀವ್ ಸ್ಮಿತ್ 2, ಉಸ್ಮಾನ್ ಖ್ವಾಜಾ 43 ಹಾಗೂ ಮಾರ್ನಸ್ ಲಾಬುಶೇನ್ 33 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಸದ್ಯ ದ್ವಿತೀಯ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 47 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದೆ. ಟ್ರಾವಿಡ್ ಹೆಡ್ (18) ಹಾಗೂ ಮಿಚೆಲ್ ಮಾರ್ಶ್ (17) ತೃತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊಯೀನ್ ಅಲಿ 2 ವಿಕೆಟ್ ಪಡೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ