Ashes 2023: 4ನೇ ಟೆಸ್ಟ್ ಪಂದ್ಯ ಮಳೆಗಾಹುತಿ: ಕಮರಿದ ಇಂಗ್ಲೆಂಡ್ ತಂಡದ ಸರಣಿ ಗೆಲ್ಲುವ ಕನಸು..!
England vs Australia: ಆ್ಯಶಸ್ ಟೆಸ್ಟ್ ಸರಣಿಯ 5ನೇ ಪಂದ್ಯವು ಜೂನ್ 27 ರಿಂದ ಶುರುವಾಗಲಿದ್ದು, ಈ ಪಂದ್ಯವು ಆಸ್ಟ್ರೇಲಿಯಾ-ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ.
Ashes 2023: ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯವು ನಾಲ್ಕು ದಿನಗಳಾಟದವರೆಗೆ ಸರಾಗವಾಗಿ ಸಾಗಿತ್ತು. ಆದರೆ ನಿರ್ಣಾಯಕವಾಗಿದ್ದ 5ನೇ ದಿನದಾಟವು ಸಂಪೂರ್ಣ ಮಳೆಗೆ ಅಹುತಿಯಾಗುವುದರೊಂದಿಗೆ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಮಾರ್ನಸ್ ಲಾಬುಶೇನ್ (51) ಹಾಗೂ ಮಿಚೆಲ್ ಮಾರ್ಷ್ (51) ಅರ್ಧಶತಕ ಬಾರಿಸಿ ಮಿಂಚಿದ್ದರು. ಇತ್ತ ಬಿಗಿ ದಾಳಿ ಸಂಘಟಿಸಿದ ಕ್ರಿಸ್ ವೋಕ್ಸ್ 5 ವಿಕೆಟ್ ಕಬಳಿಸುವುದರೊಂದಿಗೆ ಆಸ್ಟ್ರೇಲಿಯಾವನ್ನು 317 ರನ್ಗಳಿಗೆ ಆಲೌಟ್ ಮಾಡಿದ್ದರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಆರಂಭಿಕ ಬ್ಯಾಟರ್ ಝಾಕ್ ಕ್ರಾಲಿ ಸ್ಪೋಟಕ ಇನಿಂಗ್ಸ್ ಆಡಿದ್ದರು. ಕೇವಲ 93 ಎಸೆತಗಳಲ್ಲಿ ಶತಕ ಸಿಡಿಸಿದ್ದ ಕ್ರಾಲಿ 182 ಎಸೆತಗಳಲ್ಲಿ 21 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ 189 ರನ್ ಬಾರಿಸಿದ್ದರು. ಇನ್ನು ಮೊಯೀನ್ ಅಲಿ (54), ಜೋ ರೂಟ್ (84) , ಹ್ಯಾರಿ ಬ್ರೂಕ್ (61), ಬೆನ್ ಸ್ಟೋಕ್ಸ್ (51) ಹಾಗೂ ಜಾನಿ ಬೈರ್‌ಸ್ಟೋವ್ (99) ಅರ್ಧಶತಕ ಸಿಡಿಸುವ ಮೂಲಕ ಪ್ರಥಮ ಇನಿಂಗ್ಸ್ನಲ್ಲಿ ತಂಡದ ಮೊತ್ತವನ್ನು 592 ರನ್ಗಳಿಗೆ ತಂದು ನಿಲ್ಲಿಸಿದ್ದರು.
275 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 214 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ 5ನೇ ದಿನದಾಟದಲ್ಲಿ ಉಳಿದ 5 ವಿಕೆಟ್ ಕಬಳಿಸಿ ಪಂದ್ಯ ಗೆಲ್ಲುವ ಉತ್ತಮ ಅವಕಾಶ ಇಂಗ್ಲೆಂಡ್ ಮುಂದಿತ್ತು.
ಆದರೆ ಇಂಗ್ಲೆಂಡ್ ತಂಡದ ಎಲ್ಲಾ ಲೆಕ್ಕಾಚಾರಗಳನ್ನು ವರುಣ ತಲೆಕೆಳಗಾಗಿಸಿದೆ. 5ನೇ ದಿನದಾಟವು ಸಂಪೂರ್ಣ ಮಳೆಗಾಹುತಿಯಾದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಇದರೊಂದಿಗೆ 4ನೇ ಟೆಸ್ಟ್ ಪಂದ್ಯ ಗೆದ್ದು ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸುವ ಇಂಗ್ಲೆಂಡ್ ಪ್ಲ್ಯಾನ್ ಕೂಡ ಕಮರಿದೆ.
ಇದೀಗ 4ನೇ ಟೆಸ್ಟ್ ಪಂದ್ಯ ಡ್ರಾ ಆದರೂ ಸರಣಿ ಗೆಲ್ಲುವ ಉತ್ತಮ ಅವಕಾಶ ಆಸ್ಟ್ರೇಲಿಯಾ ಮುಂದಿದೆ. ಅಂದರೆ ಸದ್ಯ ಸರಣಿಯಲ್ಲಿ 2-1 ಅಂತರದಿಂದ ಆಸ್ಟ್ರೇಲಿಯಾ ಮುಂದಿದ್ದು, ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಯ ಅಥವಾ ಡ್ರಾ ಸಾಧಿಸಿದರೆ ಸರಣಿಯನ್ನು 3-1 ಅಥವಾ 2-1 ಅಂತರದಿಂದ ವಶಪಡಿಸಿಕೊಳ್ಳಬಹುದು.
ಇತ್ತ ಇಂಗ್ಲೆಂಡ್ ತಂಡವು ಸರಣಿ ಸೋಲುವುದನ್ನು ತಪ್ಪಿಸಿಕೊಳ್ಳಲು ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಲೇಬೇಕು. ಈ ಮೂಲಕ ಸರಣಿಯನ್ನು 2-2 ರಂತೆ ಡ್ರಾ ಗೊಳಿಸಬಹುದು.
ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್ , ಝಾಕ್ ಕ್ರಾಲಿ , ಮೊಯಿನ್ ಅಲಿ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್ , ಮಾರ್ಕ್ ವುಡ್ , ಸ್ಟುವರ್ಟ್ ಬ್ರಾಡ್ , ಜೇಮ್ಸ್ ಅ್ಯಂಡರ್ಸನ್.
ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್ರೌಂಡರ್ಗಳು..!
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಕ್ಯಾಮೆರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ಜೋಶ್ ಹ್ಯಾಝಲ್ವುಡ್.