The Hundred League: ದಿ ಹಂಡ್ರೆಡ್ ಲೀಗ್ ಆಡಲು ತೆರಳಿದ ಆಟಗಾರನಿಗೆ ತಕ್ಷಣವೇ ದೇಶ ತೊರೆಯುವಂತೆ ಸೂಚನೆ..!

| Updated By: ಝಾಹಿರ್ ಯೂಸುಫ್

Updated on: Jul 22, 2021 | 9:20 PM

ಈ ಇಪ್ಪತ್ತು ಎಸೆತಗಳನ್ನು 2 ಬಾರಿ ಬೌಲಿಂಗ್ ಮಾಡಿ ಮುಗಿಸಬಹುದು. ಅಂದರೆ ಮೊದಲ ಓವರ್​ನಲ್ಲಿ ಸತತ 10 ಎಸೆತ ಹಾಗೂ 2ನೇ ಓವರ್​ನಲ್ಲಿ ಸತತ 10 ಎಸೆತ ಎಸೆಯಬಹುದು. ಇದರ ಹೊರತಾಗಿ ಓವರ್​ ಲೆಕ್ಕಚಾರದಲ್ಲಿ 5 ಎಸೆತಗಳಂತೆ ನಾಲ್ಕು ಓವರ್ ಮಾಡಬೇಕಾಗುತ್ತದೆ.

The Hundred League: ದಿ ಹಂಡ್ರೆಡ್ ಲೀಗ್ ಆಡಲು ತೆರಳಿದ ಆಟಗಾರನಿಗೆ ತಕ್ಷಣವೇ ದೇಶ ತೊರೆಯುವಂತೆ ಸೂಚನೆ..!
Sandeep Lamichhane
Follow us on

ವಿಭಿನ್ನ ಮಾದರಿಯ ಕ್ರಿಕೆಟ್ ಟೂರ್ನಿ ದಿ ಹಂಡ್ರೆಡ್ (The Hundred) ಲೀಗ್​ ಆರಂಭದಿಂದಲೇ ವಿವಾದಕ್ಕೀಡಾಗಿದೆ. ಟೂರ್ನಿಯಲ್ಲಿ ಭಾಗವಹಿಸಲು ಇಂಗ್ಲೆಂಡ್ ಆಗಮಿಸಿದ ನೇಪಾಳದ ಆಟಗಾರ ಸಂದೀಪ್ ಲಮಿಚಾನೆ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಓವಲ್ ಇನ್​ವಿಸಿಬಲ್ಸ್ ತಂಡದ ಪರ ಕಣಕ್ಕಿಳಿಯಬೇಕಿದ್ದ ಲಮಿಚಾನೆ ಅವರ ವೀಸಾ ಅಮಾನ್ಯ ಎಂದು ಘೋಷಿಸಲಾಗಿದ್ದು, ಅದರಂತೆ ತಕ್ಷಣವೇ ಇಂಗ್ಲೆಂಡ್ ತೊರೆಯುವಂತೆ ಆದೇಶಿಸಲಾಗಿದೆ. ಆದರೆ ತಾನು ಮಾನ್ಯವಾದ ವೀಸಾದೊಂದಿಗೆ ಟೂರ್ನಿಯಲ್ಲಿ ಭಾಗವಹಿಸಲು ಆಗಮಿಸಿರುವುದಾಗಿ ಸಂದೀಪ್ ಲಮಿಚಾನೆ ತಿಳಿಸಿದ್ದಾರೆ.

ದಿ ಹಂಡ್ರೆಡ್ ಟೂರ್ನಿಗಾಗಿ ಆಗಮಿಸಿ ಇದೀಗ 8 ದಿನಗಳನ್ನು ಹೊಟೇಲ್​ನಲ್ಲಿ ಕಳೆದಿದ್ದೇನೆ. ಇದೀಗ ದಿಢೀರಣೆ ವೀಸಾ ಮಾನ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ನ್ನು ಕೇಳಿದರೆ ಯಾವುದೇ ಸರಿಯಾದ ಉತ್ತರ ನೀಡುತ್ತಿಲ್ಲ. ವೀಸಾದಲ್ಲಿ ಏನು ತಪ್ಪಾಗಿದೆ ಎಂದು ಕೂಡ ತಿಳಿಸುತ್ತಿಲ್ಲ ಎಂದು ಲಮಿಚಾನೆ ತಿಳಿಸಿದ್ದಾರೆ.

ಓವಲ್ ತಂಡವು 60 ಸಾವಿರ ಪೌಂಡ್ ನೀಡಿ ನನ್ನನ್ನು ಖರೀದಿಸಿದೆ. ತಂಡದ ಆಹ್ವಾನದ ಮೇರೆ ಇಂಗ್ಲೆಂಡ್​ಗೆ ಆಗಮಿಸಿ ಒಂದು ವಾರ ಕಳೆದಿದೆ. ಆದರೀಗ ತಂಡದ ಮ್ಯಾನೇಜ್ಮೆಂಟ್​ಗೆ ಹಾಗೂ ನಾಯಕ ಸ್ಯಾಮ್​ ಬಿಲ್ಲಿಂಗ್ಸ್​ಗೆ ಲಮಿಚಾನೆ ಸೇರ್ಪಡೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅತ್ತ ಅವರ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೇಜ್ ಶಮ್ಸಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

ಇತ್ತ ಹೊಸ ಟೂರ್ನಿಯಲ್ಲಿ ಭಾಗವಹಿಸುವ ಕನಸುಗಳೊಂದಿಗೆ ಇಂಗ್ಲೆಂಡ್​ಗೆ ಆಗಮಿಸಿದ್ದ ಸಂದೀಪ್ ಲಮಿಚಾನೆಗೆ ವೀಸಾ ಅಮಾನ್ಯವೆಂದು ತಕ್ಷಣವೇ ಇಂಗ್ಲೆಂಡ್ ತೊರೆಯುವಂತೆ ತಿಳಿಸಲಾಗಿದೆ. ಇದಾಗ್ಯೂ ಎಲ್ಲಿ ತಪ್ಪಾಗಿದೆ ಎಂಬುದನ್ನು ಯಾರೂ ಕೂಡ ಸ್ಪಷ್ಟಪಡಿಸುತ್ತಿಲ್ಲ ಎಂದು ಯುವ ಸ್ಪಿನ್ನರ್ ಅಳಲು ತೋಡಿಕೊಂಡಿದ್ದಾರೆ.

“ನಾನು ಏನು ತಪ್ಪಾಗಿದೆ ಎಂದು ಕೇಳುತ್ತಿದ್ದೇನೆ. ಆದರೆ ಇಸಿಬಿಯಲ್ಲಿ ಯಾರಿಗೂ ಸರಿಯಾದ ಉತ್ತರವಿಲ್ಲ. ಇಸಿಬಿ ಅಧಿಕಾರಿಗಳು ನನಗೆ ನೀಡಿದ ಎಲ್ಲಾ ಸೂಚನೆಗಳನ್ನು ಅನುಸರಿಸಿದ್ದೇನೆ. ನಾನು ಶ್ರೇಣಿ 5 ವೀಸಾಕ್ಕೆ ಅರ್ಜಿ ಸಲ್ಲಿಸಿದಾಗ, ವೈಟಾಲಿಟಿ ಬ್ಲಾಸ್ಟ್ ಮತ್ತು ದಿ ಹಂಡ್ರೆಡ್‌ನಲ್ಲಿ ನನ್ನ ಗಿಗ್‌ಗೆ ಪ್ರಾಯೋಜಕತ್ವದ ಒಂದು ಪ್ರಮಾಣಪತ್ರ ಸಾಕು ಎಂದು ತಿಳಿಸಲಾಯಿತು. ಆದಾಗ್ಯೂ, ನನ್ನ ವೀಸಾ ಯಾಕೆ ಮಾನ್ಯವಾಗಿಲ್ಲ ಎಂಬುದರ ಕುರಿತು ಸ್ಪಷ್ಟವಾದ ಉತ್ತರಕ್ಕೆ ನಾನು ಅರ್ಹನಾಗಿದ್ದೇನೆ. ” ಎಂದು ಸಂದೀಪ್ ಲಮಿಚಾನೆ ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನಿಸಿದ್ದಾರೆ.

ಸಂದೀಪ್ ಲಮಿಚಾನೆ 101 ಟಿ20 ಪಂದ್ಯಗಳಲ್ಲಿ 138 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ನೇಪಾಳಿ ಸ್ಪಿನ್ನರ್ 9 ಪಂದ್ಯಗಳಿಂದ 13 ವಿಕೆಟ್ ಕಬಳಿಸಿದ್ದಾರೆ. ಒಟ್ಟಿನಲ್ಲಿ ಹಲವು ಕ್ರಿಕೆಟ್​ ಲೀಗ್ ಗಳನ್ನು ಆಡಿದ್ದ 20ರ ಹರೆಯದ ಯುವ ಸ್ಪಿನ್ನರ್ ಲಮಿಚಾನೆಗೆ ದಿ ಹಂಡ್ರೆಡ್ ಲೀಗ್ ಆರಂಭದಲ್ಲೇ ಕಹಿ ಅನುಭವ ನೀಡಿದೆ.

ದಿ ಹಂಡ್ರೆಡ್ ಲೀಗ್ ನಿಯಮಗಳೇನು?

– ದಿ ಹಂಡ್ರೆಡ್ ಲೀಗ್​ನಲ್ಲಿ ಒಂದು ಇನ್ನಿಂಗ್ಸ್​ನಲ್ಲಿ 100 ಎಸೆತಗಳನ್ನು ಬೌಲಿಂಗ್ ಮಾಡಲಾಗುತ್ತದೆ. ಅಂದರೆ ಟಿ20 ಕ್ರಿಕೆಟ್​ನಲ್ಲಿ 20 ಓವರ್​ನಂತೆ 120 ಎಸೆತಗಳಾದರೆ ಇಲ್ಲಿ ತಲಾ 100 ಎಸೆತಗಳಿರಲಿವೆ.

– ಈ ಲೀಗ್​ನಲ್ಲಿ ಬೌಲರ್​ ಸತತ 5 ಅಥವಾ 10 ಬೌಲ್​ಗಳನ್ನು ಮಾಡಬಹುದು. ಅಂದರೆ ಇಲ್ಲಿ ಓವರ್​ ಲೆಕ್ಕಚಾರವು 5 ಎಸೆತಗಳಿಗೆ ಸೀಮಿತವಾಗಿರುತ್ತದೆ. ಆದರೆ ಇಲ್ಲಿ ಸತತ 10 ಎಸೆತಗಳನ್ನು ಎಸೆಯುವ ಅವಕಾಶ ಇರುವುದು ವಿಶೇಷ.

– ಒಂದು ಇನಿಂಗ್ಸ್​ನಲ್ಲಿ ಒಬ್ಬ ಬೌಲರ್​ಗೆ 20 ಎಸೆತಗಳು ಮಾತ್ರ ಇರಲಿದೆ.

– ಈ ಇಪ್ಪತ್ತು ಎಸೆತಗಳನ್ನು 2 ಬಾರಿ ಬೌಲಿಂಗ್ ಮಾಡಿ ಮುಗಿಸಬಹುದು. ಅಂದರೆ ಮೊದಲ ಓವರ್​ನಲ್ಲಿ ಸತತ 10 ಎಸೆತ ಹಾಗೂ 2ನೇ ಓವರ್​ನಲ್ಲಿ ಸತತ 10 ಎಸೆತ ಎಸೆಯಬಹುದು. ಇದರ ಹೊರತಾಗಿ ಓವರ್​ ಲೆಕ್ಕಚಾರದಲ್ಲಿ 5 ಎಸೆತಗಳಂತೆ ನಾಲ್ಕು ಓವರ್ ಮಾಡಬೇಕಾಗುತ್ತದೆ.

– ಸಾಮಾನ್ಯವಾಗಿ ಕ್ರಿಕೆಟ್​ನಲ್ಲಿ ಒಂದು ಓವರ್​ ಬಳಿಕ ಬ್ಯಾಟ್ಸ್​ಮನ್​ ಸ್ಟ್ರೈಕ್ ಬದಲಿಸಬೇಕು. ಆದರೆ ದಿ ಹಂಡ್ರೆಡ್ ಲೀಗ್​ನಲ್ಲಿ 10 ಎಸೆತಗಳ ಬಳಿಕ ಸ್ಟ್ರೈಕ್ ಬದಲಿಸಿಕೊಳ್ಳಲಾಗುತ್ತದೆ.

– ಪ್ರತಿ ತಂಡಕ್ಕೆ ಪ್ರಾರಂಭದಲ್ಲಿ 25 ಎಸೆತಗಳ ಪವರ್‌ಪ್ಲೇ ನೀಡಲಾಗುತ್ತದೆ. ಈ ವೇಳೆ 30 ಯಾರ್ಡ್ ಹೊರಗೆ ಇಬ್ಬರು ಫೀಲ್ಡರ್​ಗಳಿಗೆ ಮಾತ್ರ ಅವಕಾಶ ಇರಲಿದೆ.

– ಒಟ್ಟಾರೆಯಾಗಿ ಲೀಗ್‌ನಲ್ಲಿ 32 ಪಂದ್ಯಗಳು ನಡೆಯಲಿವೆ. ಅದರಂತೆ ತಂಡವೊಂದಕ್ಕೆ 8 ಪಂದ್ಯಗಳು ಇರಲಿದ್ದು, ಪ್ರತಿ ತಂಡವು ನಾಲ್ಕು ಪಂದ್ಯಗಳನ್ನು ಹೋಮ್​​ಗ್ರೌಂಡ್​ನಲ್ಲಿ ಮತ್ತು ನಾಲ್ಕು ಪಂದ್ಯಗಳನ್ನು ಅವೇ ಗ್ರೌಂಡ್​ನಲ್ಲಿ (ಎದುರಾಳಿ ತಂಡದ ಹೋಮ್​ಗ್ರೌಂಡ್) ಆಡಲಿದೆ.

– ದಿ ಹಂಡ್ರೆಡ್ ಲೀಗ್​ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳುತ್ತಿದ್ದು, ಒಂದು ತಂಡದಲ್ಲಿ 15 ಮಂದಿಗೆ ಮಾತ್ರ ಅವಕಾಶ ಇರಲಿದೆ.

– 8 ತಂಡಗಳಲ್ಲಿ ಟಾಪ್ 3 ಬರುವ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಅಂದರೆ ಟಾಪ್ 1 ತಂಡದ ಜೊತೆ ಆಡಲು 2ನೇ ಮತ್ತು 3ನೇ ತಂಡ ಎಲಿಮಿನೇಟರ್ ಪಂದ್ಯವನ್ನಾಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್ ಆಡಲಿದೆ.

 

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

ಇದನ್ನೂ ಓದಿ: Mary Kom: ಇದು ನಮ್ಮ ಸಂಸ್ಕೃತಿ: ಟೋಕಿಯೋ ಒಲಿಂಪಿಕ್ಸ್​ಗೂ ಮುನ್ನ ಎಲ್ಲರ ಹೃದಯ ಗೆದ್ದ ಮೇರಿ ಕೋಮ್

 

(The Hundred League Runs Into Controversy, Nepal Player Asked To Leave Country)