
2022 ರ ಟಿ20 ವಿಶ್ವಕಪ್ನಲ್ಲಿ ಹ್ಯಾರಿಸ್ ರೌಫ್ ಎಸೆತದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಸ್ಟ್ರೈಟ್ ಹಿಟ್ ಸಿಕ್ಸ್ ನಿಮಗೆ ನೆನಪಿರಬಹುದು…ಈ ಬಾರಿಯ ಏಷ್ಯಾಕಪ್ನಲ್ಲಿ ಶಾಹೀನ್ ಅಫ್ರಿದಿ ಎಸೆತದಲ್ಲಿ ರೋಹಿತ್ ಶರ್ಮಾ ಫ್ಲಿಕ್ ಮಾಡಿ ಲೆಗ್ ಸೈಡ್ನತ್ತ ಸಿಡಿಸಿದ ಸಿಕ್ಸ್ ದೃಶ್ಯ ಇನ್ನೂ ಕೂಡ ಹಚ್ಚ ಹಸಿರಾಗಿರಬಹುದು…ಈ ಎರಡು ಶಾಟ್ಗಳನ್ನು ಇಲ್ಲಿ ಉದಾಹರಿಸಿದ್ದು ಮೂವರನ್ನು ಪರಿಚಯಿಸಲು ಅಷ್ಟೇ.
ಏಕೆಂದರೆ ಪಾಕ್ ವಿರುದ್ಧದ ಪಂದ್ಯದಲ್ಲಿ ವೇಗದ ಅಸ್ತ್ರಗಳನ್ನೇ ಭಾರತೀಯ ಬ್ಯಾಟರ್ಗಳು ಲೀಲಾಜಾಲವಾಗಿ ಚೆಂಡಾಡಿದರು. ಅದರಲ್ಲೂ ಶಾಹೀನ್ ಎಸೆತದಲ್ಲಿ ಹಿಟ್ಮ್ಯಾನ್ ಬಾರಿಸಿದ ಫ್ಲಿಕ್ ಸಿಕ್ಸ್ ಸದ್ಯಕ್ಕಂತು ಮರೆಯಲು ಸಾಧ್ಯವಿಲ್ಲ. ಇನ್ನು ಕಿಂಗ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರ ಸಿಡಿಲಬ್ಬರಕ್ಕೆ ಪಾಕ್ ವೇಗಿಗಳು ಕಂಗಾಲಾಗಿದ್ದರು.
ವಿಶ್ವದ ಅತ್ಯುತ್ತಮ ವೇಗಿಗಳು ಎಂದು ಕರೆಸಿಕೊಂಡಿದ್ದ ಪಾಕ್ ಬೌಲರ್ಗಳನ್ನು ಟೀಮ್ ಇಂಡಿಯಾ ಬ್ಯಾಟರ್ಗಳು ಲೀಲಾಜಾಲವಾಗಿ ಎದುರಿಸಲು ಮುಖ್ಯ ಕಾರಣ ಕನ್ನಡಿಗ, ಟ್ರಾಫಿಕ್ ಪೊಲೀಸ್ ಮತ್ತು ಸ್ಕೂಲ್ ಬಸ್ ಡ್ರೈವರ್. ಅರೇ, ಇವರಿಗೂ ಟೀಮ್ ಇಂಡಿಯಾಗೂ ಏನು ಸಂಬಂಧ ಎಂಬ ಪ್ರಶ್ನೆ ಮೂಡುವುದು ಸಹಜ.
ಈ ಪ್ರಶ್ನೆಗೆ ಉತ್ತರ ಸೈಡ್ ಆರ್ಮ್ ಥ್ರೋಡೌನ್ ಸ್ಪೆಷಲಿಸ್ಟ್. ಅಂದರೆ ಟೀಮ್ ಇಂಡಿಯಾ ಆಟಗಾರರು ಬ್ಯಾಟಿಂಗ್ ಅಭ್ಯಾಸ ನಡೆಸುವಾಗ ಅವರು ಹೇಳಿದಂತೆ ಅತೀ ವೇಗವಾಗಿ ಚೆಂಡನ್ನು ಎಸೆಯುವ ಪರಿಣತರು. ಹೀಗೆ ಭಾರತ ತಂಡದ ಬ್ಯಾಟಿಂಗ್ನ ಬೆನ್ನುಲುವಾಗಿರುವವರ ಹೆಸರು ಕರ್ನಾಟಕದ ರಾಘವೇಂದ್ರ ಡಿ, ಕೋಲ್ಕತ್ತಾದ ದಯಾನಂದ್ ಗರಾನಿ ಮತ್ತು ಶ್ರೀಲಂಕಾದ ನುವಾನ್ ಸೆನೆವಿರತ್ನೆ.
ಈ ಮೂವರ ಬಲವಾದ ಎಸೆತಗಳನ್ನೇ ಎದುರಿಸಿಯೇ ಟೀಮ್ ಇಂಡಿಯಾ ಬ್ಯಾಟರ್ಗಳು ಇದೀಗ ಮತ್ತಷ್ಟು ಬಲಿಷ್ಠರಾಗಿದ್ದಾರೆ ಎಂದರೆ ತಪ್ಪಾಗಲಾರದು. ಅದರ ಸಣ್ಣದೊಂದು ಝಲಕ್ ಪಾಕಿಸ್ತಾನ್ ವಿರುದ್ಧದ ಕಂಡು ಬಂದ ಭಾರತೀಯ ಬ್ಯಾಟರ್ಗಳ ಸಿಡಿಲಬ್ಬರ.
ಇಲ್ಲಿ ಭಾರತೀಯ ಬ್ಯಾಟರ್ಗಳ ಸ್ಪೋಟಕ ಬ್ಯಾಟಿಂಗ್ ಸುದ್ದಿಯಾಗುತ್ತದೆಯೇ ಹೊರತು, ತೆರೆಯ ಹಿಂದಿರುವ ಸೈಡ್ ಆರ್ಮ್ ಥ್ರೋಡೌನ್ ಪರಿಣತರ ಹೆಸರುಗಳು ಮಾತ್ರ ಮುನ್ನಲೆಗೆ ಬರುವುದೇ ಇಲ್ಲ. ಅದರಲ್ಲೂ ಭಾರತೀಯ ಬ್ಯಾಟಿಂಗ್ ಹಿಂದೆ ಇಂತಹದೊಂದು ಶಕ್ತಿ ಎಂಬುದು ಸಹ ಅನೇಕರಿಗೆ ತಿಳಿದಿಲ್ಲ. ಇನ್ನು ಕನ್ನಡಿಗ ರಾಘವೇಂದ್ರ ಎಂಬುವರು ಭಾರತ ತಂಡ ಜೊತೆಗಿದ್ದಾರೆ ಎಂಬ ವಿಷಯ ಕರ್ನಾಟಕದ ಎಷ್ಟು ಮಂದಿ ತಿಳಿದಿಯೋ ದೇವರೇ ಬಲ್ಲ.
ದಯಾನಂದ್ ಗರಾನಿ, ನುವಾನ್ ಸೆನೆವಿರತ್ನೆ, ವಿರಾಟ್ ಕೊಹ್ಲಿ, ಡಿ ರಾಘವೇಂದ್ರ ಮತ್ತು ಶುಭ್ಮನ್ ಗಿಲ್
ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಉತ್ತರ ಕನ್ನಡದ ಹುಡುಗ ರಾಘವೇಂದ್ರ ಅವರು ಈ ಆಟಕ್ಕಾಗಿ ಏನನ್ನೂ ಬೇಕಾದರೂ ಸಮರ್ಪಿಸಲು ಸಿದ್ಧರಾಗಿದ್ದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿಯು ಅವರನ್ನು ಹಿಂದಕ್ಕೆ ಎಳೆಯುತ್ತಿತ್ತು. ಇದಾಗ್ಯೂ ಛಲ ಬಿಡದ ರಾಘವೇಂದ್ರ ಕ್ರಿಕೆಟ್ ಅನ್ನೇ ಸರ್ವಸ್ವವಾಗಿ ಆರಿಸಿಕೊಂಡಿದ್ದರು. ಪರಿಣಾಮ ಅದೆಷ್ಟೊ ದಿನಗಳು ಬಸ್ ನಿಲ್ದಾಣಗಳಲ್ಲಿ, ಹನುಮಾನ್ ದೇವಸ್ಥಾನದಲ್ಲಿ ಮತ್ತು ಹುಬ್ಬಳ್ಳಿಯ ಸ್ಮಶಾನದಲ್ಲಿ ಮಲಗಬೇಕಾಗಿ ಬಂತು. ಅಲ್ಲದೆ ನೀರು ಮತ್ತು ಬಾಳೆಹಣ್ಣಿನೊಂದಿಗೆ ಹಸಿವು ನೀಗಿಸಿಕೊಳ್ಳಬೇಕಾಯಿತು.
ಈ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತರೂ ಅವರು ಕ್ರಿಕೆಟಿಗನಾಗಲು ಸಾಧ್ಯವಾಗಲಿಲ್ಲ. ಆದರೆ ಪರಿಶ್ರಮಕ್ಕೆ ಫಲವಿದೆ ಎಂಬಂತೆ ಅವರ ವೇಗದ ಎಸೆತಗಳು ಕೊನೆಗೂ ಕೈ ಹಿಡಿಯಿತು. 2012 ರಲ್ಲಿ ಅವರು ಭಾರತ ತಂಡದ ಥ್ರೋ ಸ್ಪೆಷಲಿಸ್ಟ್ ಆಗಿ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೂ ಭಾರತೀಯ ಬ್ಯಾಟರ್ಗಳಿಗೆ ನೆಟ್ಸ್ನಲ್ಲಿ ಚೆಂಡೆಸೆಯುತ್ತಿದ್ದಾರೆ. ಅದು ಕೂಡ ತೋಳ್ಬಲದೊಂದಿಗೆ ಎಂಬುದು ವಿಶೇಷ.
ಅದು ರಾಘವೇಂದ್ರ ಅವರ ಕಥೆಯಾದರೆ, ಕೋಲ್ಕತ್ತಾದ ದಯಾನಂದ್ ಗರಾನಿ ಅವರದ್ದು ಇನ್ನೊಂದು ಕಹಾನಿ. ಸಾಲದ ಸುಳಿಯಲ್ಲಿ ಸಿಲುಕಿರುವ ರೈತನ ಮಗನಾಗಿದ್ದ ಗರಾನಿ, ಕೋಲ್ಕತ್ತಾದಲ್ಲಿ ಟ್ರಾಫಿಕ್ ಪೊಲೀಸ್ನಲ್ಲಿ ದೈನಂದಿನ ವೇತನಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಗರಾನಿ ಪಾಲಿಗೆ ಅದೃಷ್ಟ ಕೋವಿಡ್ ರೂಪದಲ್ಲಿ ಒಕ್ಕರಿಸಿತ್ತು ಎಂಬುದು ವಿಶೇಷ.
ಅಂದರೆ ಟೀಮ್ ಇಂಡಿಯಾ ಥ್ರೋಡೌನ್ ಸ್ಪೆಷಲಿಸ್ಟ್ ಆಗಿದ್ದ ರಾಘವೇಂದ್ರ ಕೋರೋನಾ ಸೋಂಕಿಗೆ ಒಳಗಾಗಿದ್ದರಿಂದ ಬದಲಿ ಥ್ರೋಡೌನ್ನ ಹುಡುಕಾಟದಲ್ಲಿದ್ದ ಟೀಮ್ ಇಂಡಿಯಾಗೆ ದಯಾನಂದ್ ಗರಾನಿ ಸಿಕ್ಕರು. ಅಂದಿನಿಂದ ಗರಾನಿ ಕೂಡ ಭಾರತ ತಂಡದ ಭಾಗವಾಗಿದ್ದಾರೆ.
ಇನ್ನು ಶ್ರೀಲಂಕಾದ ನುವಾನ್ ಸೆನೆವಿರತ್ನೆ ಮೈಟ್‌ಲ್ಯಾಂಡ್‌ನ ಕ್ಲಬ್ ಪರ ಕ್ರಿಕೆಟ್ ಆಡಿದ್ದರು. ಆದರೆ ಅದನ್ನೇ ಮುಂದುವರೆಸಿಕೊಂಡು ಹೋಗುವ ಪರಿಸ್ಥಿತಿಯಿರಲಿಲ್ಲ. ಹೀಗಾಗಿ ಕೊಲಂಬೊದಲ್ಲಿ ಶಾಲಾ ಬಸ್‌ನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆದರೆ 2018 ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾಗೆ ಅಗತ್ಯವಿದ್ದ ಎಡಗೈ ಥ್ರೋಡೌನ್ ಸ್ಪೆಷಲಿಸ್ಟ್ ಜಾಗವನ್ನು ನುವಾನ್ ಸೆನೆವಿರತ್ನೆ ತುಂಬಿದ್ದರು. ಅಂದಿನಿಂದ ಇಂದಿನವರೆಗೂ ಅವರು ಕೂಡ ಭಾರತೀಯ ಬ್ಯಾಟರ್ಗಳ ಬಲ ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ.
ಸಾಮಾನ್ಯವಾಗಿ ಚೆಂಡನ್ನು ಥ್ರೋ ಮಾಡುವುದರಲ್ಲಿ ಕಷ್ಟ ಏನಿದೆ ಎಂದು ನಿಮಗೂ ಅನಿಸಬಹುದು. ಆದರೆ ಈ ಕೆಲಸ ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ಒಬ್ಬ ಕ್ರಿಕೆಟಿಗ ಹೇಗೆ ತಯಾರಾಗಬೇಕೊ, ಅದೇ ಮಾದರಿಯಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ಕೂಡ ಫಿಟ್ ಆಗಿರಬೇಕು.
ಪ್ರತಿ ಕ್ರೀಡಾಪಟುಗಳಂತೆ ಜಿಮ್ನಲ್ಲಿ ಬೆವರಿಳಿಸಬೇಕಾಗುತ್ತದೆ. ತಮ್ಮ ಥ್ರೋನಲ್ಲಿ ವ್ಯತ್ಯಾಸಗಳಾದಂತೆ ಎಚ್ಚರವಹಿಸಬೇಕು. ಮುಖ್ಯವಾಗಿ ಒಂದೇ ಮಾದರಿಯಲ್ಲಿ ಥ್ರೋಗಳನ್ನು ಎಸೆಯುವ ಸಾಮರ್ಥ್ಯ ರೂಪಿಸಬೇಕು. ಉದಾಹರಣೆಗೆ ವಿರಾಟ್ ಕೊಹ್ಲಿಗೆ ಬೌನ್ಸರ್ ಥ್ರೋಗಳನ್ನು ಎಸೆಯಬೇಕಾಗಿ ಬರಬಹುದು, ಮತ್ತೊಂದೆಡೆ ರೋಹಿತ್ ಶರ್ಮಾ ಯಾರ್ಕರ್ ಥ್ರೋಗಳಿಗೆ ಡಿಮ್ಯಾಂಡ್ ಮಾಡಬಹುದು. ಇಲ್ಲಿ ಬ್ಯಾಟ್ಸ್ಮನ್ಗಳ ಆಗ್ರಹಕ್ಕೆ ಅನುಗುಣವಾಗಿ ಸತತವಾಗಿ ಚೆಂಡೆಸೆಯಬೇಕಾಗುತ್ತದೆ.
ಇಲ್ಲಿ ಓಡಿ ಬಂದು ಚೆಂಡೆಸೆಯುವ ಪರಿಪಾಠವೂ ಇಲ್ಲ. ಆದರೆ ಒಬ್ಬ ವೇಗದ ಬೌಲರ್ ಹೇಗೆ ಚೆಂಡೆಸೆಯುತ್ತಾರೋ ಅದನ್ನು ಮೀರಿಸುವಂತೆ ಥ್ರೋ ಮಾಡಬೇಕಾಗುತ್ತದೆ. ಇದಕ್ಕಾಗಿ ತೋಳ್ಬಲವನ್ನು ಹೆಚ್ಚಿಸಬೇಕು. ತೋಳ್ಬಲ ಹೆಚ್ಚಿಸಲು ಮತ್ತು ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಗಂಟೆಗಳ ಕಾಲ ಜಿಮ್ನಲ್ಲಿ ವ್ಯಾಯಾಮ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಗೆದ್ದ ಟೀಮ್ ಇಂಡಿಯಾ: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಇವೆಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಬೌಲರ್ಗಳ ತಂತ್ರ ಮತ್ತು ಅವರ ವೇಗದ ಮೇಲೆ ಕಣ್ಣಿಟ್ಟಿರಬೇಕು. ಅದಕ್ಕೆ ಪ್ರತಿ ತಂತ್ರ ರೂಪಿಸಿ ಟೀಮ್ ಇಂಡಿಯಾ ಬ್ಯಾಟರ್ಗಳಿಗೆ ಥ್ರೋ ಎಸೆಯಬೇಕು.
ಹೀಗೆ ಎಸೆದ ಥ್ರೋಗಳಲ್ಲಿ ಪಳಗಿಯೇ ವಿರಾಟ್ ಕೊಹ್ಲಿ ಹ್ಯಾರಿಸ್ ರೌಫ್ ಅವರ ವೇಗದ ಎಸೆತಕ್ಕೆ ಲೀಲಾಜಾಲವಾಗಿ ಸಿಕ್ಸ್ ಸಿಡಿಸಿರುವುದು. ರೋಹಿತ್ ಶರ್ಮಾ ಶಾಹೀನ್ ಅಫ್ರಿದಿ ಎಸೆತದಲ್ಲಿ ಫ್ಲಿಕ್ ಸಿಕ್ಸ್ ಬಾರಿಸಿರುವುದು ಎಂಬುದು ನೆನಪಿರಲಿ.
Published On - 7:25 pm, Thu, 14 September 23