ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಐದು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ (2nd T20I) ತಿಲಕ್ ವರ್ಮಾ ಅರ್ಧಶತಕ ಸಿಡಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಆಗಿ ಕಾಲಿಟ್ಟಿದ್ದಾರೆ. ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಬೇಗನೆ ಪೆವಿಲಿಯನ್ ಸೇರಿಕೊಂಡ ಬಳಿಕ ಕ್ರೀಸ್ಗೆ ಬಂದ ತಿಲಕ್ ವರ್ಮಾ (Tilak Varma) 41 ಎಸೆತಗಳಲ್ಲಿ 51 ರನ್ ಗಳಿಸಿ ಭಾರತದ ಮಾನ ಉಳಿಸಿದರು. ತಂಡದ ಸ್ಕೋರ್ 150 ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ, ತಿಲಕ್ ಅವರು ನಾಲ್ಕು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸಿಡಿಸಿ 41 ಎಸೆತಗಳಲ್ಲಿ 51 ರನ್ ಚಚ್ಚಿದರು. ಇದಕ್ಕೂ ಮೊದಲು, ಇವರು ಸರಣಿಯ ಆರಂಭಿಕ ಪಂದ್ಯದಲ್ಲಿ 22 ಎಸೆತಗಳಲ್ಲಿ 38 ರನ್ ಗಳಿಸಿ ಅಲ್ಲು ಕೂಡ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಇದೀಗ ಎರಡನೇ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಿಲಕ್ ವರ್ಮಾ ನೂತನ ದಾಖಲೆ ನಿರ್ಮಿಸಿದ್ದಾರೆ.
IND vs WI: ಮತ್ತೊಮ್ಮೆ ಮುಗ್ಗರಿಸಿದ ಟೀಂ ಇಂಡಿಯಾ; 2ನೇ ಟಿ20 ಪಂದ್ಯದಲ್ಲೂ ಸೋಲು..!
ಈ ಅರ್ಧಶತಕದೊಂದಿಗೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತ ಪರ ಅರ್ಧಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರನಾಗಿದ್ದಾರೆ. ಈ ಮೂಲಕ ರಿಷಭ್ ಪಂತ್ ದಾಖಲೆ ಮುರಿದಿದ್ದಾರೆ. ರೋಹಿತ್ ಶರ್ಮಾ ಅವರು 20 ವರ್ಷ, 143 ದಿನಗಳಲ್ಲಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಅರ್ಧಶತಕ ಬಾರಿಸಿದ ಅತಿ ಕಿರಿಯ ಭಾರತೀಯ ಆಟಗಾರನಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಇದೀಗ ತಿಲಕ್ ಇದ್ದು, 20 ವರ್ಷ, 271 ದಿನಗಳಲ್ಲಿ ಈ ಸಾಧನೆ ಗೈದಿದ್ದಾರೆ. ರಿಷಭ್ ಪಂತ್ ಮೂರನೇ ಸ್ಥಾನಕ್ಕೆ ಕುಸಿದಿದ್ದು 21 ವರ್ಷ, 38 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.
T20I ನಲ್ಲಿ ರೋಹಿತ್ ಅವರ ಚೊಚ್ಚಲ ಅರ್ಧಶತಕವು 2007 T20 ವಿಶ್ವಕಪ್‌ನಲ್ಲಿ ಬಂದಿತ್ತು. ಅತ್ತ ರಿಷಭ್ ಪಂತ್ 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನ MA ಚಿದಂಬರಂ ಕ್ರೀಡಾಂಗಣದಲ್ಲಿ ಈ ಸಾಧನೆಯನ್ನು ಮಾಡಿದ್ದರು. ಇದೀಗ ತಿಲಕ್ ವರ್ಮಾ ವಿಂಡೀಸ್ ವಿರುದ್ಧದ ಎರಡನೇ ಟಿ20 ಯಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ.
ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮತ್ತೊಮ್ಮೆ ವೈಫಲ್ಯ ಅನುಭವಿಸಿತು. ಶುಭ್ಮನ್ ಗಿಲ್ 7 ರನ್ಗೆ ಔಟಾದರೆ, ಸೂರ್ಯಕುಮಾರ್ ಯಾದವ್ 1, ಇಶಾನ್ ಕಿಶನ್ 27, ಸ್ಯಾಮ್ಸನ್ 7, ನಾಯಕ ಹಾರ್ದಿಕ್ ಪಾಂಡ್ಯ 24 ರನ್ಗೆ ಔಟಾದರು. ತಿಲಕ್ ವರ್ಮಾ 41 ಎಸೆತಗಳಲ್ಲಿ 51 ರನ್ ಸಿಡಿಸಿದರು. ಭಾರತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಕಲೆಹಾಕಿತು. ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ 40 ಎಸೆತಗಳಲ್ಲಿ 67 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. 18.5 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಬಾರಿಸಿ ವಿಂಡೀಸ್ ಜಯ ಸಾಧಿಸಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:16 am, Mon, 7 August 23