AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲ್ಬರ್ಟ್ ಅಬ್ಬರ: ಆರು ಎಸೆತಗಳಲ್ಲಿ 6 ಸಿಕ್ಸ್​..!

ಇಂಗ್ಲೆಂಡ್‌ನ ದೇಶಿ ಕ್ರಿಕೆಟ್ ಟೂರ್ನಿಯಾದ ಮೆಟ್ರೋ ಬ್ಯಾಂಕ್ ಒನ್-ಡೇ ಕಪ್‌ನಲ್ಲಿ ಹ್ಯಾಂಪ್‌ಶೈರ್ ಪರ ಕಣಕ್ಕಿಳಿದ ಯುವ ಆಟಗಾರ ಟೋಬಿ ಆಲ್ಬರ್ಟ್ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಎದುರಾಳಿ ಬೌಲರ್‌ಗಳ ಲೈನ್ ಅಂಡ್ ಲೆಂಗ್ತ್ ಧೂಳೀಪಟ ಮಾಡಿದ ಆಲ್ಬರ್ಟ್ 6 ಎಸೆತಗಳಲ್ಲಿ 6 ಸಿಕ್ಸ್ ಸಿಡಿಸಿ ಅಬ್ಬರಿಸದ್ದಾರೆ.

ಆಲ್ಬರ್ಟ್ ಅಬ್ಬರ: ಆರು ಎಸೆತಗಳಲ್ಲಿ 6 ಸಿಕ್ಸ್​..!
Toby AlbertImage Credit source: Espn
ಝಾಹಿರ್ ಯೂಸುಫ್
|

Updated on: Aug 10, 2026 | 1:41 PM

Share

ಮೆಟ್ರೋ ಬ್ಯಾಂಕ್ ಒನ್-ಡೇ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಯುವ ದಾಂಡಿಗ ಟೋಬಿ ಆಲ್ಬರ್ಟ್ ಸತತ 6 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ಸಸೆಕ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಹ್ಯಾಂಪ್‌ಶೈರ್ ಪರ ಬ್ಯಾಟ್ ಬೀಸಿದ ಟೋಬಿ ಆಲ್ಬರ್ಟ್ (Toby Albert) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.

225 ರನ್‌ಗಳ ಜೊತೆಯಾಟ:

ಹೋವ್‌ನ ‘ಫಸ್ಟ್ ಸೆಂಟ್ರಲ್ ಕೌಂಟಿ ಗ್ರೌಂಡ್’ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹ್ಯಾಂಪ್‌ಶೈರ್ ತಂಡಕ್ಕೆ ಆರಂಭಿಕ ಆಟಗಾರರಾದ ಅಲಿ ಓರ್ (105 ರನ್) ಮತ್ತು ಬೆನ್ ಮೇಯಸ್ (109 ರನ್) 225 ರನ್‌ಗಳ ಬೃಹತ್ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದ್ದರು. ಆದರೆ, ಪಂದ್ಯದ ನೈಜ ರೋಮಾಂಚನ ಆರಂಭವಾಗಿದ್ದು ಟೋಬಿ ಆಲ್ಬರ್ಟ್ ಕ್ರೀಸ್​ಗೆ ಇಳಿದ ನಂತರ.

ಆಲ್ಬರ್ಟ್​ ಅಬ್ಬರ:

ಈ ಪಂದ್ಯದಲ್ಲಿ ಟೋಬಿ ಆಲ್ಬರ್ಟ್ ಸತತ 6 ಸಿಕ್ಸ್​ ಸಿಡಿಸಿ ಅಕ್ಷರಶಃ ಅಬ್ಬರಿಸಿದರು. ನಾಂಟೆಸ್ ಊಸ್ಟ್‌ಹ್ಯೂಜೆನ್ ಎಸೆದ 44ನೇ ಓವರ್‌ನ 5ನೇ ಮತ್ತು 6ನೇ ಎಸೆತಗಳಲ್ಲಿ ಆಲ್ಬರ್ಟ್ 2 ಸಿಕ್ಸರ್ ಸಿಡಿಸಿದರು. ಓಲಿ ಕಿರ್ಟ್ಲಿ  ಎಸೆದ 45ನೇ ಓವರ್​ನ ಮೊದಲ ಎಸೆತದಲ್ಲಿ ಫೆಲಿಕ್ಸ್ ಆರ್ಗನ್ 1 ರನ್​ ಗಳಿಸಿದರು.

ಈ ಒಂದು ರನ್‌ನಿಂದಾಗಿ ಮತ್ತೆ ಸ್ಟ್ರೈಕ್​ಗೆ ಬಂದ ಟೋಬಿ ಆಲ್ಬರ್ಟ್ ಬ್ಯಾಕ್ ಟು ಬ್ಯಾಕ್ 4 ಸಿಕ್ಸ್ ಸಿಡಿಸಿದರು. ಈ ಮೂಲಕ ಕೇವಲ 6 ಎಸೆತಗಳಲ್ಲಿ 36 ರನ್ ಕಲೆಹಾಕಿದರು.

ಇನ್ನು ಈ ಪಂದ್ಯದಲ್ಲಿ ಕೇವಲ 37 ಎಸೆತಗಳನ್ನು ಎದುರಿಸಿದ ಆಲ್ಬರ್ಟ್ 8 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ  86 ರನ್ ಸಿಡಿಸಿದರು. ಈ ಸ್ಫೋಟಕ ಬ್ಯಾಟಿಂಗ್​ ನೆರವಿನೊಂದಿಗೆ ಹ್ಯಾಂಪ್‌ಶೈರ್ ತಂಡವು 50 ಓವರ್​ಗಳಲ್ಲಿ 383/9 ರನ್ ಕಲೆಹಾಕಿತು.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರು ಗಾಯಗೊಳ್ಳಲು IPL ಕಾರಣ!

384 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಸಸೆಕ್ಸ್ ತಂಡದ ಪರವಾಗಿ ಚಾರ್ಲಿ ಟಿಯರ್ (111 ರನ್) ಮತ್ತು ಜಾಕ್ ಲೀನಿಂಗ್ (92 ರನ್) ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ ಹ್ಯಾಂಪ್‌ಶೈರ್‌ನ ಬೌಲರ್ ಎಡ್ಡಿ ಜಾಕ್ (58 ರನ್‌ಗಳಿಗೆ 4 ವಿಕೆಟ್) ಅವರ ಮಾರಕ ದಾಳಿಗೆ ಸಿಲುಕಿದ ಸಸೆಕ್ಸ್ 48.5 ಓವರ್‌ಗಳಲ್ಲಿ 332 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಹ್ಯಾಂಪ್‌ಶೈರ್ ತಂಡವು 51 ರನ್‌ಗಳ ಭರ್ಜರಿ ಜಯ ಸಾಧಿಸಿತು.

Follow Us