ಐರ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಯುವ ದಾಂಡಿಗ ಟ್ರಿಸ್ಟನ್ ಸ್ಟಬ್ಸ್. ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟಬ್ಸ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ.
ಇದಕ್ಕೂ ಮುನ್ನ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಆಫ್ರಿಕಾ ಪಡೆಗೆ ರಿಯಾನ್ ರಿಕೆಲ್ಟನ್ (40) ಹಾಗೂ ತೆಂಬಾ ಬವುಮಾ (35) ಉತ್ತಮ ಆರಂಭ ಒದಗಿಸಿದ್ದರು. 13.4 ಒವರ್ಗಳಲ್ಲಿ 78 ರನ್ ಪೇರಿಸಿದ ಬಳಿಕ ರಿಕೆಲ್ಟನ್ ಔಟಾದರು. ಇದರ ಬೆನ್ನಲ್ಲೇ ಬವುಮಾ ಗಾಯಗೊಂಡು ಪೆವಿಲಿಯನ್ಗೆ ಮರಳಿದರು.
ಇನ್ನು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 35 ರನ್ ಬಾರಿಸಿದರೆ, ಕೈಲ್ ವೆರ್ರೆನ್ನೆ 64 ಎಸೆತಗಳಲ್ಲಿ 67 ರನ್ ಚಚ್ಚಿದರು. ಇದಾದ ಬಳಿಕ ಶುರುವಾಗಿದ್ದೇ ಟ್ರಿಸ್ಟನ್ ಸ್ಟಬ್ಸ್ ಆರ್ಭಟ. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ದಾಂಡಿಗ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು.
ಈ ಬಿರುಸಿನ ಬ್ಯಾಟಿಂಗ್ನೊಂದಿಗೆ ಐರ್ಲೆಂಡ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಸ್ಟಬ್ಸ್ 81 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 112 ರನ್ ಬಾರಿಸಿದರು. ವಿಶೇಷ ಎಂದರೆ ಇದು ಟ್ರಿಸ್ಟನ್ ಸ್ಟಬ್ಸ್ ಅವರ ಮೊದಲ ಅಂತಾರಾಷ್ಟ್ರೀಯ ಶತಕವಾಗಿದೆ. ಈ ಸೆಂಚುರಿಯೊಂದಿಗೆ ಸೌತ್ ಆಫ್ರಿಕಾ ತಂಡವು 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 343 ರನ್ ಕಲೆಹಾಕಿತು.
ಬೌಲಿಂಗ್ನಲ್ಲಿ ವಿಫಲರಾಗಿದ್ದ ಐರ್ಲೆಂಡ್ ತಂಡಕ್ಕೆ ಬ್ಯಾಟಿಂಗ್ನಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 50 ರನ್ಗಳಿಸುಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೊಳಗಾದ ಐರಿಷ್ ಪಡೆಯ ಮೇಲೆ ಸೌತ್ ಆಫ್ರಿಕಾ ಬೌಲರ್ಗಳು ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಪರಿಣಾಮ ಐರ್ಲೆಂಡ್ ತಂಡವು 30.3 ಓವರ್ಗಳಲ್ಲಿ ಕೇವಲ 169 ರನ್ಗಳಿಸಿ ಆಲೌಟ್ ಆಯಿತು. ಸೌತ್ ಆಫ್ರಿಕಾ ಪರ ಲಿಝಾಡ್ ವಿಲಿಯಮ್ಸ್ 3 ವಿಕೆಟ್ ಕಬಳಿಸಿದರೆ, ಲುಂಗಿ ಎನ್ಗಿಡಿ ಹಾಗೂ ಜಾರ್ನ್ ಫಾರ್ಚುಯಿನ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಈ ಮೂಲಕ ಸೌತ್ ಆಫ್ರಿಕಾ ತಂಡವು 2ನೇ ಏಕದಿನ ಪಂದ್ಯದಲ್ಲಿ 174 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಫ್ರಿಕನ್ ಪಡೆ 2-0 ಅಂತರದಿಂದ ವಶಪಡಿಸಿಕೊಂಡಿದೆ.
ಐರ್ಲೆಂಡ್ ಪ್ಲೇಯಿಂಗ್ 11: ಆಂಡ್ರ್ಯೂ ಬಾಲ್ಬಿರ್ನಿ , ಪಾಲ್ ಸ್ಟಿರ್ಲಿಂಗ್ (ನಾಯಕ) , ಕರ್ಟಿಸ್ ಕ್ಯಾಂಫರ್ , ಹ್ಯಾರಿ ಟೆಕ್ಟರ್ , ಸ್ಟೀಫನ್ ಡೊಹೆನಿ (ವಿಕೆಟ್ ಕೀಪರ್) , ಜಾರ್ಜ್ ಡಾಕ್ರೆಲ್ , ಮಾರ್ಕ್ ಆಡೈರ್ , ಆಂಡಿ ಮ್ಯಾಕ್ಬ್ರೈನ್ , ಗೇವಿನ್ ಹೋಯ್ , ಗ್ರಹಾಂ ಹ್ಯೂಮ್ , ಕ್ರೇಗ್ ಯಂಗ್.
ಇದನ್ನೂ ಓದಿ: ಹೆಚ್ಚುವರಿ 36 ಎಸೆತಗಳಿಂದ ಟೀಮ್ ಇಂಡಿಯಾ ಕೈ ತಪ್ಪಿದ ಸಾರ್ವಕಾಲಿಕ ಶ್ರೇಷ್ಠ ದಾಖಲೆ
ಸೌತ್ ಆಫ್ರಿಕಾ ಪ್ಲೇಯಿಂಗ್ 11: ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ತೆಂಬಾ ಬವುಮಾ (ನಾಯಕ) , ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ , ಟ್ರಿಸ್ಟನ್ ಸ್ಟಬ್ಸ್ , ಕೈಲ್ ವೆರೆನ್ನೆ , ವಿಯಾನ್ ಮುಲ್ಡರ್ , ಆಂಡಿಲ್ ಫೆಹ್ಲುಕ್ವಾಯೊ , ಜಾರ್ನ್ ಫಾರ್ಚುಯಿನ್ , ಲಿಜಾಡ್ ವಿಲಿಯಮ್ಸ್ , ಲುಂಗಿ ನ್ಗಿಲ್ಡಿ , ಒಟ್ನಿಲ್ ಬಾರ್ಟ್ಮ್ಯಾನ್.