ಸಚಿನ್ ದಾಖಲೆ ಉಳಿಸಲು ಕೊಹ್ಲಿಗೆ ವಿಶ್ರಾಂತಿ: ಫ್ಯಾನ್ಸ್ ಆಕ್ರೋಶ

| Updated By: ಝಾಹಿರ್ ಯೂಸುಫ್

Updated on: Sep 19, 2023 | 3:24 PM

Virat Kohli: ವಿರಾಟ್ ಕೊಹ್ಲಿ ಇತ್ತೀಚೆಗೆ ಮುಗಿದ ಏಷ್ಯಾಕಪ್​ನಲ್ಲಿ ಪಾಕಿಸ್ತಾನ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ 47ನೇ ಸೆಂಚುರಿ ಸಿಡಿಸಿದ ಸಾಧನೆ ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿಗೆ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ದಾಖಲೆ ಬರೆಯಲು ಕೇವಲ 3 ಸೆಂಚುರಿಗಳ ಅವಶ್ಯಕತೆಯಿದೆ. ಈ ಪಟ್ಟಿಯಲ್ಲಿ 49 ಸೆಂಚುರಿಗಳೊಂದಿಗೆ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.

ಸಚಿನ್ ದಾಖಲೆ ಉಳಿಸಲು ಕೊಹ್ಲಿಗೆ ವಿಶ್ರಾಂತಿ: ಫ್ಯಾನ್ಸ್ ಆಕ್ರೋಶ
Sachin - Virat
Follow us on

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಆದರೆ ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ. ಮೊಹಾಲಿ ಮತ್ತು ಇಂದೋರ್​ನಲ್ಲಿ ನಡೆಯಲಿರುವ 2 ಪಂದ್ಯಗಳಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಈ ಪ್ರಕಟಣೆಯ ಬೆನ್ನಲ್ಲೇ ಕೊಹ್ಲಿ ಅಭಿಮಾನಿಗಳು ಬಿಸಿಸಿಐ ನಡೆಯ ಬಗ್ಗೆ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಏಕೆಂದರೆ ಕಿಂಗ್ ಕೊಹ್ಲಿ ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕದ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ. ಇದೇ ಕಾರಣದಿಂದಾಗಿ ಅವರಿಗೆ ಸತತ ವಿಶ್ರಾಂತಿ ನೀಡಲಾಗುತ್ತಿದೆ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ವೇಳೆ ವಿಶ್ರಾಂತಿ ನೀಡಲಾಗಿತ್ತು. ಅದಾದ ಬಳಿಕ ಬಾಂಗ್ಲಾದೇಶ್ ವಿರುದ್ಧದ ಸರಣಿಯ ಸಂದರ್ಭದಲ್ಲೂ ಅವರನ್ನು ಹೊರಗಿಡಲಾಗಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಪಂದ್ಯಗಳ ವೇಳೆ ವಿಶ್ರಾಂತಿ ನೀಡಲಾಗಿದೆ.

ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್​ನಲ್ಲಿರುವಾಗಲೇ ಅವರಿಗೆ ಸತತ ವಿಶ್ರಾಂತಿ ನೀಡುತ್ತಿರುವುದೇಕೆ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಮುಂದಿಡುತ್ತಿದ್ದಾರೆ. ಏಕೆಂದರೆ ಈ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿ 5 ಶತಕಗಳನ್ನು ಬಾರಿಸಿದ್ದಾರೆ. ಒಂದು ವೇಳೆ ಅವರು ಎಲ್ಲಾ ಪಂದ್ಯಗಳನ್ನಾಡಿದ್ದರೆ ಈಗಾಗಲೇ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆ ಮುರಿಯುತ್ತಿದ್ದರು. ಈ ದಾಖಲೆಯನ್ನು ಉಳಿಸಲು ಕೊಹ್ಲಿಗೆ ವಿಶ್ರಾಂತಿ ನೀಡುತ್ತಿದ್ದಾರೆ ಎಂಬ ವಾದವನ್ನು ಅಭಿಮಾನಿಗಳು ಮುಂದಿಟ್ಟಿದ್ದಾರೆ.

ಇನ್ನೂ ಕೆಲವರು ಒಂದೆಜ್ಜೆ ಮುಂದೆ ಹೋಗಿ, ಇದು ಮುಂಬೈ ಲಾಬಿ ಎಂದು ಆರೋಪ ಮಾಡಿದ್ದಾರೆ. ಸಚಿನ್ ಅವರ ದಾಖಲೆಗಳನ್ನು ಉಳಿಸಲು ಮುಂಬೈಯವರೇ ಆದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ಮುಗಿದ ಏಷ್ಯಾಕಪ್​ನಲ್ಲಿ ಪಾಕಿಸ್ತಾನ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ 47ನೇ ಸೆಂಚುರಿ ಸಿಡಿಸಿದ ಸಾಧನೆ ಮಾಡಿದ್ದರು.

ಇದೀಗ ವಿರಾಟ್ ಕೊಹ್ಲಿಗೆ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ದಾಖಲೆ ಬರೆಯಲು ಕೇವಲ 3 ಸೆಂಚುರಿಗಳ ಅವಶ್ಯಕತೆಯಿದೆ. ಈ ಪಟ್ಟಿಯಲ್ಲಿ 49 ಸೆಂಚುರಿಗಳೊಂದಿಗೆ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!

ಈ ಬಾರಿಯ ಏಕದಿನ ವಿಶ್ವಕಪ್​ ಮೂಲಕ ಕಿಂಗ್ ಕೊಹ್ಲಿ ಈ ದಾಖಲೆ ಮುರಿಯುವ ವಿಶ್ವಾಸದಲ್ಲಿದ್ದಾರೆ. ಏಕೆಂದರೆ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲಿ ಒಟ್ಟು 9 ಪಂದ್ಯಗಳನ್ನಾಡಬೇಕಿದೆ. ಈ ವೇಳೆ ವಿರಾಟ್ ಕೊಹ್ಲಿ ಬ್ಯಾಟ್​ನಿಂದ 3 ಶತಕ ಮೂಡಿಬಂದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ 50 ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.