ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಅಂಡರ್ 19 ಏಷ್ಯಾಕಪ್ (Asia Cup 2023) ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಆದರ್ಶ್ ಸಿಂಗ್ (62) ಹಾಗೂ ಅರ್ಶಿನ್ ಕುಲ್ಕರ್ಣಿ (24) ಉತ್ತಮ ಆರಂಭ ಒದಗಿಸಿದ್ದರು.
ಆ ಬಳಿಕ ಬಂದ ರುದ್ರ ಪಟೇಲ್ ಕೇವಲ 1 ರನ್ಗಳಿಸಿ ಔಟಾದರು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಉದಯ್ ಸಹರಾನ್ 98 ಎಸೆತಗಳಲ್ಲಿ 5 ಫೋರ್ಗಳೊಂದಿಗೆ 60 ರನ್ ಬಾರಿಸಿದರು. ಇನ್ನು ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸಚಿನ್ ದಾಸ್ 42 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 58 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿತು.
260 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಪಾಕಿಸ್ತಾನ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಬೌಲರ್ ಮುರುಗನ್ ಅಭಿಷೇಕ್ ಯಶಸ್ವಿಯಾಗಿದ್ದರು. ಕೇವಲ 8 ರನ್ಗೆ ಶಾಮಿಲ್ ಹುಸೇನ್ ವಿಕೆಟ್ ಪಡೆದು ಮೊದಲ ಯಶಸ್ಸು ತಂದುಕೊಟ್ಟರು.
ಆದರೆ 2ನೇ ವಿಕೆಟ್ಗೆ ಜೊತೆಯಾದ ಶಹಝೈಬ್ ಖಾನ್ ಹಾಗೂ ಅಝಾನ್ ಅವೈಸ್ 110 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಈ ಹಂತದಲ್ಲಿ ಶಹಝೈಬ್ 63 ರನ್ ಬಾರಿಸಿ ಔಟಾದರು.
ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ಅಝಾನ್ ಅವೈಸ್ 130 ಎಸೆತಗಳಲ್ಲಿ 10 ಫೋರ್ಗಳೊಂದಿಗೆ ಅಜೇಯ 105 ರನ್ ಬಾರಿಸಿದರು. ಅಲ್ಲದೆ ನಾಯಕ ಸಾದ್ ಬೇಗ್ (68) ಜೊತೆಗೂಡಿ 47 ಓವರ್ಗಳಲ್ಲಿ ತಂಡವನ್ನು ಗುರಿಮುಟ್ಟಿಸಿದರು. ಈ ಮೂಲಕ ಪಾಕಿಸ್ತಾನ್ ತಂಡವು ಟೀಮ್ ಇಂಡಿಯಾ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿದೆ.
ಭಾರತ U19 ಪ್ಲೇಯಿಂಗ್ ಇಲೆವೆನ್: ಆದರ್ಶ್ ಸಿಂಗ್ , ಅರ್ಶಿನ್ ಕುಲಕರ್ಣಿ , ರುದ್ರ ಪಟೇಲ್ , ಉದಯ್ ಸಹರಾನ್ (ನಾಯಕ) , ಮುಶೀರ್ ಖಾನ್ , ಸಚಿನ್ ದಾಸ್ , ಅರವೆಲ್ಲಿ ಅವನೀಶ್ (ವಿಕೆಟ್ ಕೀಪರ್) , ಸೌಮಿ ಪಾಂಡೆ , ಮುರುಗನ್ ಅಭಿಷೇಕ್ , ರಾಜ್ ಲಿಂಬಾನಿ , ನಮನ್ ತಿವಾರಿ.
ಇದನ್ನೂ ಓದಿ: IPL 2024: ಐಪಿಎಲ್ ಯಾವಾಗ ಶುರು? ಇಲ್ಲಿದೆ ಉತ್ತರ
ಪಾಕಿಸ್ತಾನ್ U19 ಪ್ಲೇಯಿಂಗ್ ಇಲೆವೆನ್: ಶಾಮಿಲ್ ಹುಸೇನ್ , ಶಹಜೈಬ್ ಖಾನ್ , ಅಜಾನ್ ಅವೈಸ್ , ಸಾದ್ ಬೇಗ್ (ನಾಯಕ) , ಮೊಹಮ್ಮದ್ ಜೀಶನ್ , ಮೊಹಮ್ಮದ್ ರಿಯಾಜುಲ್ಲಾ , ತಯ್ಯಬ್ ಆರಿಫ್ , ಅರಾಫತ್ ಮಿನ್ಹಾಸ್ , ಅಲಿ ಅಸ್ಫಂಡ್ , ಅಮೀರ್ ಹಸನ್ , ಉಬೈದ್ ಶಾ.