ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕ; ಬರೋಬ್ಬರಿ 433 ರನ್ ಚಚ್ಚಿದ ಯಂಗ್ ಇಂಡಿಯಾ

U19 Asia Cup 2025: ದುಬೈನಲ್ಲಿ ಆರಂಭವಾದ U19 ಏಷ್ಯಾಕಪ್‌ನಲ್ಲಿ ಭಾರತ ತಂಡ UAE ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಯುವ ಪಡೆ 6 ವಿಕೆಟ್‌ಗೆ 433 ರನ್ ಗಳಿಸಿತು. ಆರಂಭಿಕ ವೈಭವ್ ಸೂರ್ಯವಂಶಿ ಸಿಡಿಲಬ್ಬರದ 171 ರನ್ ಬಾರಿಸಿ ಮಿಂಚಿದರೆ, ಆರನ್ ವರ್ಗೀಸ್ ಮತ್ತು ವಿಹಾನ್ ಮಲ್ಹೋತ್ರಾ ತಲಾ 69 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು.

ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕ; ಬರೋಬ್ಬರಿ 433 ರನ್ ಚಚ್ಚಿದ ಯಂಗ್ ಇಂಡಿಯಾ
Vaibhav Suryavanshi

Updated on: Dec 12, 2025 | 2:36 PM

ದುಬೈನಲ್ಲಿ ಇಂದಿನಿಂದ ಆರಂಭವಾಗಿರುವ 19 ವರ್ಷದೊಳಗಿನವರ ಏಕದಿನ ಏಷ್ಯಾಕಪ್ (U19 Asia Cup) ಪಂದ್ಯಾವಳಿಯಲ್ಲಿ ಭಾರತ ಹಾಗೂ ಯುಎಇ (India vs UAE U19) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಯುವ ಪಡೆ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 433 ರನ್ ಕಲೆಹಾಕಿದೆ. ತಂಡವನ್ನು ಈ ಬೃಹತ್ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryavanshi) ಸಿಡಿಲಬ್ಬರದ 171 ರನ್​ಗಳ ಇನ್ನಿಂಗ್ಸ್ ಆಡಿದರೆ, ಆರನ್ ವರ್ಗೀಸ್ ಹಾಗೂ ವಿಹಾನ್ ಮಲ್ಹೋತ್ರಾ ತಲಾ 69 ರನ್​ಗಳ ಇನ್ನಿಂಗ್ಸ್ ಆಡಿದರು.

ದ್ವಿಶತಕದ ಜೊತೆಯಾಟ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾ ಪರ ನಾಯಕ ಆಯುಷ್ ಮ್ಹಾತ್ರೆ ಹಾಗೂ ವೈಭವ್ ಸೂರ್ಯವಂಶಿ ಆರಂಭಿಕರಾಗಿ ಕಣಕ್ಕಿಳಿದರು. ಇಬ್ಬರಿಗೆ ಅನುಭವಿಗಳ ಜೊತೆ ಆಡಿದ ಅನುಭವವಿದ್ದ ಕಾರಣ ಒಂದೊಳ್ಳೆ ಆರಂಭದ ನಿರೀಕ್ಷೆ ಇತ್ತು. ಆದರೆ ನಾಯಕ ಆಯುಷ್ ಕೇವಲ 4 ರನ್ ಬಾರಿಸಿ ಔಟಾದರು. ಆ ಬಳಿಕ ಜೊತೆಯಾದ ವೈಭವ್ ಹಾಗೂ ಆರನ್ ವರ್ಗೀಸ್ ದಾಖಲೆಯ ದ್ವಿಶತಕದ ಜೊತೆಯಾಟ ಕಟ್ಟಿದರು. ಇದೇ ವೇಳೆ ವೈಭವ್ ಸೂರ್ಯವಂಶಿ ತಮ್ಮ ಶತಕವನ್ನು ಪೂರೈಸಿದರು. ಇತ್ತ ಆರನ್ ವರ್ಗೀಸ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು.

171 ರನ್​ ಬಾರಿಸಿದ ವೈಭವ್

ಆದರೆ ಅರ್ಧಶತಕ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಆರನ್ ವರ್ಗೀಸ್ 73 ಎಸೆತಗಳಲ್ಲಿ 69 ರನ್​ಗಳ ಇನ್ನಿಂಗ್ಸ್ ಆಡಿ ಪೆವಿಲಿಯನ್ ಸೇರಿಕೊಂಡರು. ಮತ್ತೊಂದೆಡೆ ಶತಕ ಬಾರಿಸಿದ ಬಳಿಕವೂ ತಮ್ಮ ಹೊಡಿಬಡಿ ಆಟವನ್ನು ಮುಂದುವರೆಸಿದ ವೈಭವ್​ಗೆ ವಿಹಾನ್ ಮಲ್ಹೋತ್ರಾ ಅವರಿಂದ ಉತ್ತಮ ಸಾಥ್ ಸಿಕ್ಕಿತು. ಇವರಿಬ್ಬರ ನಡುವೆ ಮೂರನೇ ವಿಕೆಟ್​ ಅರ್ಧಶತಕದ ಜೊತೆಯಾಟ ನಡೆಯಿತು. 150 ರನ್​ಗಳ ಗಡಿ ದಾಟಿ, ದ್ವಿಶತಕದತ್ತ ಹೆಜ್ಜೆ ಹಾಕುತ್ತಿದ್ದ ವೈಭವ್ 171 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 95 ಎಸೆತಗಳನ್ನು ಎದುರಿಸಿದ ವೈಭವ್ 14 ಭರ್ಜರಿ ಸಿಕ್ಸರ್​ಗಳು ಹಾಗೂ 9 ಬೌಂಡರಿಗಳನ್ನು ಬಾರಿಸಿದರು. ವೈಭವ್ ಔಟಾದ ಬಳಿಕ ತಂಡದ ರನ್ ವೇಗ ಕಡಿಮೆಯಾಯಿತ್ತಾದರೂ, ಉಳಿದ ಬ್ಯಾಟ್ಸ್‌ಮನ್​ಗಳು ಕೂಡ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಅಂಡರ್ -19 ತಂಡ ಪ್ರಕಟ; ವೈಭವ್​ಗೆ ಅವಕಾಶ

433 ರನ್​ ಕಲೆಹಾಕಿದ ಭಾರತ

ಇತ್ತ ವಿಹಾನ್ ಮಲ್ಹೋತ್ರಾ ಕೂಡ 55 ಎಸೆತಗಳಲ್ಲಿ 69 ರನ್ ಬಾರಿಸಿ ಔಟಾದರೆ, ವೇದಾಂತ್ ತ್ರಿವೇದಿ 38 ರನ್, ಅಭಿಗ್ಯಾನ್ ಅಭಿಷೇಕ್ ಕುಂಡು 32 ರನ್ ಹಾಗೂ ಕೊನೆಯಲ್ಲಿ ಕನಿಷ್ಕ್ ಚೌಹಾಣ್ 12 ಎಸೆತಗಳಲ್ಲಿ 28 ರನ್ ಬಾರಿಸಿ ತಂಡವನ್ನು 433 ರನ್​ಗಳಿಗೆ ಕೊಂಡೊಯ್ದರು. ಇತ್ತ ಯುಎಇ ಪರ ಯುಗ್ ಶರ್ಮಾ ಹಾಗೂ ಉದ್ದೀಶ್ ಸೂರಿ ತಲಾ 2 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Fri, 12 December 25