ಬಾಂಗ್ಲಾದೇಶವನ್ನು 8 ವಿಕೆಟ್​ಗಳಿಂದ ಮಣಿಸಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ

|

Updated on: Dec 19, 2024 | 6:32 PM

Women’s U19 Asia Cup 2024: ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂಡರ್ 19 ಮಹಿಳೆಯರ ಏಷ್ಯಾಕಪ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಸೋಲಿಸಿದೆ. ಆಯುಷಿ ಶುಕ್ಲಾ (3 ವಿಕೆಟ್) ಮತ್ತು ಸೋನಂ ಯಾದವ್ (2 ವಿಕೆಟ್) ಅವರ ಅದ್ಭುತ ಬೌಲಿಂಗ್ ಹಾಗೂ ತ್ರಿಶಾ (58 ರನ್) ಅವರ ಅಮೋಘ ಬ್ಯಾಟಿಂಗ್‌ನಿಂದ ಭಾರತ ಗೆಲುವು ಸಾಧಿಸಿದೆ.

ಬಾಂಗ್ಲಾದೇಶವನ್ನು 8 ವಿಕೆಟ್​ಗಳಿಂದ ಮಣಿಸಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ
ಭಾರತ ವನಿತಾ ಪಡೆ
Follow us on

ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂಡರ್ 19 ಮಹಿಳೆಯರ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾದ ಅಮೋಘ ಪ್ರದರ್ಶನ ಮುಂದುವರಿದಿದೆ. ಸೂಪರ್ 4 ಸುತ್ತಿನಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ಅದ್ಭುತ ಗೆಲುವು ದಾಖಲಿಸಿದೆ. ಕೌಲಾಲಂಪುರದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 80 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಟೀಮ್ ಇಂಡಿಯಾ 12.1 ಓವರ್‌ಗಳಲ್ಲಿಯೇ ಗುರಿ ಬೆನ್ನಟ್ಟಿತು. ಟೀಂ ಇಂಡಿಯಾದ ಈ ಗೆಲುವಿನಲ್ಲಿ 17 ವರ್ಷದ ಸ್ಪಿನ್ನರ್ ಆಯುಷಿ ಶುಕ್ಲಾ ಪ್ರಮುಖ ಪಾತ್ರವಹಿಸಿದರು. ಆಯುಷಿ 4 ಓವರ್‌ಗಳಲ್ಲಿ ಕೇವಲ 9 ರನ್ ನೀಡಿ 3 ವಿಕೆಟ್ ಪಡೆದರು. ಇದರಲ್ಲಿ ಒಂದು ಓವರ್ ಮೇಡನ್ ಕೂಡ ಸೇರಿತ್ತು. ಇವರಲ್ಲದೆ ಸೋನಮ್ ಯಾದವ್ ಕೂಡ 4 ಓವರ್​ಗಳಲ್ಲಿ 6 ರನ್ ನೀಡಿ 2 ವಿಕೆಟ್ ಪಡೆದರು.

ಮಿಂಚಿದ ತ್ರಿಶಾ

ಒಂದೆಡೆ ಬೌಲಿಂಗ್‌ನಲ್ಲಿ ಆಯುಷಿ ಮತ್ತು ಸೋನಂ ಬಾಂಗ್ಲಾದೇಶ ತಂಡವನ್ನು ಕಟ್ಟಿಹಾಕುವ ಕೆಲಸ ಮಾಡಿದರೆ, ಅಲ್ಪ ರನ್​ಗಳ ಗುರಿ ಬೆನ್ನಟ್ಟಿದ ಭಾರತದ ಪರ ಜಿ ತ್ರಿಶಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ತ್ರಿಶಾ 58 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. 126 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ತ್ರಿಶಾ 10 ಬೌಂಡರಿಗಳನ್ನು ಸಹ ಹೊಡೆದರು. ಇವರಲ್ಲದೆ ನಾಯಕಿ ನಿಕ್ಕಿ ಪ್ರಸಾದ್ 14 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿ ಟೀಂ ಇಂಡಿಯಾ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು.

ಅಗ್ರಸ್ಥಾನದಲ್ಲಿ ಟೀಂ ಇಂಡಿಯಾ

ಭಾರತ ಕ್ರಿಕೆಟ್ ತಂಡ ಸೂಪರ್ 4 ರಲ್ಲಿ ಆಡಿದ 3 ಪಂದ್ಯಗಳಲ್ಲಿ 2 ರಲ್ಲಿ ಗೆದ್ದಿದೆ. ಐದು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಉಳಿದಂತೆ ಬಾಂಗ್ಲಾದೇಶ ತಂಡ 4 ಅಂಕ ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ. ಇದೀಗ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಶುಕ್ರವಾರ ಶ್ರೀಲಂಕಾ ವಿರುದ್ಧ ಆಡಲಿದೆ. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ಇನ್ನು ಈ ಟೂರ್ನಿಯಲ್ಲಿ ಭಾರತೀಯ ಆಟಗಾರ್ತಿಯರ ಪ್ರದರ್ಶನದ ಕುರಿತು ಮಾತನಾಡುವುದಾದರೆ, ಆರಂಭಿಕ ಆಟಗಾರ್ತಿ ತ್ರಿಶಾ 3 ಪಂದ್ಯಗಳಲ್ಲಿ 75 ರನ್ ಗಳಿಸಿ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ನಾಣಯ್ಯ 79 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇಬ್ಬರ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ, ಬೌಲಿಂಗ್‌ನಲ್ಲೂ ಕಮಾಲ್ ಮಾಡಿರುವ ತ್ರಿಶಾ 6 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ನಿಶಿತಾ 7 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Thu, 19 December 24