IND vs AUS: ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲೇ ಸೋಲಿಸಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ
India Women Dominate Australia T20s: ಭಾರತ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಪ್ರವಾಸಕ್ಕೆ ಭರ್ಜರಿ ಆರಂಭ ನೀಡಿದೆ. ಹರ್ಮನ್ಪ್ರೀತ್ ಕೌರ್ ನಾಯಕತ್ವದ ತಂಡ ಮೂರನೇ ನಿರ್ಣಾಯಕ ಪಂದ್ಯದಲ್ಲಿ ಸ್ಮೃತಿ ಮಂಧಾನ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರ ಸ್ಪಿನ್ ಮೋಡಿಯಿಂದ 17 ರನ್‌ಗಳ ಭರ್ಜರಿ ಜಯ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿತು. ಇದು ತಂಡದ ಮನೋಬಲ ಹೆಚ್ಚಿಸಿದೆ.

ಪ್ರಸ್ತುತ ಭಾರತ ಮಹಿಳಾ ಪಡೆ ಆಸ್ಟ್ರೇಲಿಯಾ (India vs Australia Women) ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಮೂರು ಮಾದರಿಗಳ ಸರಣಿಯನ್ನು ಆಡಲಿದೆ. ಅದರ ಭಾಗವಾಗಿ ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಳ್ಳುವ ಮೂಲಕ ಹರ್ಮನ್ಪ್ರೀತ್ ಕೌರ್ (Harmanpreet Kaur) ಪಡೆ ಪ್ರವಾಸವನ್ನು ಸರಣಿ ಗೆಲುವಿನೊಂದಿಗೆ ಆರಂಭಿಸಿದೆ. ಸರಣಿಯ ಮೊದಲ ಪಂದ್ಯವನ್ನು ಗೆದ್ದಿದ್ದ ಭಾರತ ವನಿತಾ ಪಡೆ, ಎರಡನೇ ಪಂದ್ಯದಲ್ಲಿ ಸೋಲು ಕಂಡಿತ್ತು. ಆದರೆ ಮೂರನೇ ಹಾಗೂ ಸರಣಿ ನಿರ್ಧಾರಕ ಪಂದ್ಯದಲ್ಲಿ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರ ಸ್ಪಿನ್ ಮ್ಯಾಜಿಕ್ನ ನೆರವಿನಿಂದ ಭಾರತ ತಂಡ ಮೂರನೇ ಪಂದ್ಯವನ್ನು 17 ರನ್ಗಳಿಂದ ಗೆದ್ದುಕೊಂಡು ಸರಣಿ ವಶಪಡಿಸಿಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 176 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 159 ರನ್ ಗಳಿಸಲಷ್ಟೇ ಶಕ್ತವಾಯಿತು.
ಸ್ಮೃತಿ, ಜೆಮಿಮಾ ಭರ್ಜರಿ ಬ್ಯಾಟಿಂಗ್
ಈ ಗೆಲುವಿನೊಂದಿಗೆ ಟೀಂ ಇಂಡಿಯಾ 10 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡುವ ಮೂಲಕ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಇದಕ್ಕೂ ಮೊದಲು, ಭಾರತೀಯ ಮಹಿಳಾ ತಂಡವು 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಗೆದ್ದಿತ್ತು. ಅಡಿಲೇಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮೂರನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ಆದಾಗ್ಯೂ, ಆ ಬಳಿಕ ಜೊತೆಯಾದ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೊಡ್ರಿಗಸ್ 121 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ನಿರ್ಮಿಸಿದರು. ಮಂಧಾನ ಕೇವಲ 55 ಎಸೆತಗಳಲ್ಲಿ 82 ರನ್ ಗಳಿಸುವ ಮೂಲಕ ಕಾಂಗರೂಗಳ ನಾಡಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದರು. ಜೆಮಿಮಾ ಕೂಡ ಅರ್ಧಶತಕ ಬಾರಿಸಿ ತಂಡವನ್ನು 176 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಇತ್ತ ಅನ್ನಾಬೆಲ್ ಸದರ್ಲ್ಯಾಂಡ್ ಆಸ್ಟ್ರೇಲಿಯಾ ಪರ ಎರಡು ವಿಕೆಟ್ ಪಡೆದರು.
ಶ್ರೇಯಾಂಕ, ಚರಣಿ ಬೌಲಿಂಗ್ ಮ್ಯಾಜಿಕ್
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ಜಾರ್ಜಿಯಾ ವಾಲ್ ಮೊದಲ ಓವರ್‌ನಲ್ಲಿಯೇ 18 ರನ್ ಬಾರಿಸಿದರು. ಆದಾಗ್ಯೂ, ಎರಡನೇ ಓವರ್‌ನಲ್ಲಿ ಶ್ರೇಯಾಂಕ ಪಾಟೀಲ್ ಅವರನ್ನು ಔಟ್ ಮಾಡಿದರು. ಇದರ ಜೊತೆಗೆ ಆಸೀಸ್ಗೆ ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಯಿತು. ಇದರ ಪರಿಣಾಮವಾಗಿ ಆತಿಥೇಯರು ಕೆಲವೇ ಕ್ಷಣಗಳಲ್ಲಿ 32 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡರು. ಆದಾಗ್ಯೂ ತಂಡದ ಪರ ಏಕಾಂಗಿಯಾಗಿ ಹೋರಾಡಿದ ಉಪನಾಯಕಿ ಆಶ್ಲೀ ಗಾರ್ಡ್ನರ್ ಅರ್ಧಶತಕ ಬಾರಿಸಿದರಾದರೂ ಅವರಿಗೆ ಇತರರಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ. ಶ್ರೇಯಾಂಕ ಮತ್ತು ಅರುಂಧತಿ ರೆಡ್ಡಿ ತಲಾ 3 ವಿಕೆಟ್ ಉರುಳಿಸುವ ಮೂಲಕ ಆಸ್ಟ್ರೇಲಿಯಾವನ್ನು 159 ರನ್‌ಗಳಿಗೆ ಕಟ್ಟಿಹಾಕಿದರು. ಭಾರತದ ಪರ, ಶ್ರೇಯಾಂಕ 22ರನ್‌ಗಳಿಗೆ ಮೂರು, ಶ್ರೀ ಚರಣಿ 32ರನ್‌ಗಳಿಗೆ ಮೂರು ವಿಕೆಟ್ ಪಡೆದರೆ, ಅರುಂದತಿ ರೆಡ್ಡಿ ಕೂಡ ಎರಡು ವಿಕೆಟ್‌ಗಳನ್ನು ಪಡೆದರು.
IND vs AUS: ಆಸ್ಟ್ರೇಲಿಯಾದಲ್ಲಿ ಅಬ್ಬರಿಸಿ ದಾಖಲೆ ಬರೆದ ಸ್ಮೃತಿ ಮಂಧಾನ
10 ವರ್ಷಗಳ ನಂತರ ಸರಣಿ ಗೆಲುವು
ಇದರೊಂದಿಗೆ, ಟೀಂ ಇಂಡಿಯಾ ಬಹು-ಸ್ವರೂಪದ ಸರಣಿಯಲ್ಲಿ (ಮೂರು ಸ್ವರೂಪಗಳನ್ನು ಒಟ್ಟುಗೂಡಿಸಿ) 4-2 ಮುನ್ನಡೆ ಸಾಧಿಸಿದೆ. ಈ ಸರಣಿಯ ನಂತರ, ಎರಡೂ ತಂಡಗಳು ಏಕದಿನ ಸರಣಿಯನ್ನು ಮತ್ತು ನಂತರ ಒಂದು ಟೆಸ್ಟ್ ಪಂದ್ಯವನ್ನು ಆಡಲಿವೆ. ಕೊನೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಆದಾಗ್ಯೂ, ಇದರ ಹೊರತಾಗಿಯೂ, ನಾವು ಟಿ20 ಕ್ರಿಕೆಟ್ ಅನ್ನು ಮಾತ್ರ ಪರಿಗಣಿಸಿದರೆ, ಭಾರತವು 2016 ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಸರಣಿಯಲ್ಲಿ ಸೋಲಿಸಿದೆ. ಇತ್ತ 2017 ರ ನಂತರ ಯಾವುದೇ ಸ್ವರೂಪದಲ್ಲಿ ಆಸ್ಟ್ರೇಲಿಯಾ ತನ್ನ ಮೊದಲ ತವರು ಸರಣಿ ಸೋಲನ್ನು ಅನುಭವಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Sat, 21 February 26
