Smriti Mandhana: ಅಪ್ಪನಿಗೆ ಹೃದಯಾಘಾತ; ಇವತ್ತು ನಡೆಯಬೇಕಿದ್ದ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
Smriti Mandhana's wedding ceremony postponed indefinitely: ಇವತ್ತು ನಡೆಯಬೇಕಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಸ್ಮೃತಿ ಮಂಧಾನ ಅವರ ಮದುವೆ ಕಾರ್ಯಕ್ರಮ ಮುಂದೂಡಿಕೆ ಆಗಿದೆ. ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ಗೆ ಹೃದಯಾಘಾತವಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸಾಂಗ್ಲಿಯ ತಮ್ಮ ಫಾರ್ಮ್ ಹೌಸ್ನಲ್ಲಿ ಜರುಗಲಿದ್ದ ಮದವೆಯ ಕಾರ್ಯಕ್ರಮವನ್ನು ಮುಂದೂಡಲು ಸ್ಮೃತಿ ನಿರ್ಧರಿಸಿದರು.

ಮುಂಬೈ, ನವೆಂಬರ್ 23: ಭಾರತದ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನ (Smriti Mandhana) ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ (Palash Muchhal) ಅವರಿಬ್ಬರ ವಿವಾಹ ಕಾರ್ಯಕ್ರಮ ಅನಿರ್ದಿಷ್ಟಾವಧಿಯವರೆಗೆ ಮುಂದೂಡಿಕೆ ಆಗಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಸ್ಮೃತಿ ಮಂಧಾನಳ ತಂದೆ ಶ್ರೀನಿವಾಸ್ ಮಂಧಾನ ಅವರು ಅನಾರೋಗ್ಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕಾರಣಕ್ಕೆ ಮದುವೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಕ್ರಿಕೆಟ್ ಆಟಗಾರ್ತಿಯ ಮ್ಯಾನೇಜರ್ ಅವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಮದೋಲ್ನಲ್ಲಿರುವ ಮಂಧಾನ ಫಾರ್ಮ್ ಹೌಸ್ನಲ್ಲಿ ವಿವಾಹ ಮಹೋತ್ಸವಕ್ಕಾಗಿ ತಯಾರಿ ನಡೆದಿತ್ತು. ಇವತ್ತೇ ಕಾರ್ಯಕ್ರಮ ಇತ್ತು. ಆದರೆ, ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರಿಗೆ ಹೃದಯಾಘಾತಗೊಂಡಿದೆ. ಅವರನ್ನು ಸಾಂಗ್ಲಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಇದನ್ನೂ ಓದಿ: ಸ್ಮೃತಿ – ಪಲಾಶ್ ಸಂಗೀತ್ನಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರ ಭರ್ಜರಿ ಡ್ಯಾನ್ಸ್
‘ಇವತ್ತು ಬೆಳಗ್ಗೆ ಅವರು (ಶ್ರೀನಿವಾಸ್ ಮಂಧಾನ) ತಿಂಡಿ ತಿನ್ನುತ್ತಿರುವಾಗ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ಅವರು ಚೇತರಿಸಿಕೊಳ್ಳಬಹುದು ಎಂದು ಸ್ವಲ್ಪ ಹೊತ್ತು ಕಾದೆವು. ಆದರೆ, ಆರೋಗ್ಯ ಮತ್ತಷ್ಟು ಬಿಗಡಾಯಿಸಲು ತೊಡಗಿತು. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಕೂಡಲೇ ಆಂಬುಲೆನ್ಸ್ ಕರೆದು ಅವರನ್ನು ಆಸ್ಪತ್ರೆಗೆ ಸಾಗಿಸಿದೆವು’ ಎಂದು ಸ್ಮೃತಿ ಮಂಧಾನ ಅವರ ಮ್ಯಾನೇಜರ್ ತುಹಿನ್ ಮಿಶ್ರಾ ಭಾನುವಾರ ಮಧ್ಯಾಹ್ನ ತಿಳಿಸಿದ್ದಾರೆ.
‘ಇಂಥ ಸಂದರ್ಭದಲ್ಲಿ ಮದುವೆಯಾಗುವುದು ಸ್ಮೃತಿ ಮಂಧಾನ ಅವರಿಗೆ ಇಷ್ಟ ಇರಲಿಲ್ಲ. ಹೀಗಾಗಿ, ಮದುವೆ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲು ನಿರ್ಧರಿಸಿದ್ದಾರೆ’ ಎಂದು ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮುಂದಿನ ವರ್ಷದವರೆಗೆ ಶುಭ್ಮನ್ ಗಿಲ್ ತಂಡದಿಂದ ಔಟ್..!
ಸ್ಮೃತಿ ಮಂಧಾನ ಅವರಿಗೆ ಪಲಾಶ್ ಮುಚ್ಚಲ ಅವರು ಇವತ್ತು ತಾಳಿ ಕಟ್ಟುವುದಿತ್ತು. ಇವರಿಬ್ಬರ ವಿವಾಹ ಮಹೋತ್ಸವ ಹಲವು ದಿನಗಳಿಂದಲೂ ನಡೆಯುತ್ತಿದೆ. ಮೆಹಂದಿ, ಹಲ್ದಿ ಇತ್ಯಾದಿ ಶಾಸ್ತ್ರಗಳು ನಡೆದಿವೆ. ಸಂಗೀತ ಕಾರ್ಯಕ್ರಮಗಳೂ ಕೂಡ ದೊಡ್ಡ ಸುದ್ದಿಯಾದವು. ಸ್ಮೃತಿ, ಪಲಾಶ್ ಅವರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ವಧು ಮತ್ತು ವರರ ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯವನ್ನೂ ಆಯೋಜಿಸಲಾಗಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Sun, 23 November 25
