ಸಚಿವ ಸ್ಥಾನ ವಂಚಿತ ಶಾಸಕರು ರೆಬೆಲ್, ಸಿಎಂಗೆ ಟ್ರಬಲ್: 20ಕ್ಕೂ ಹೆಚ್ಚು ಅತೃಪ್ತ ಶಾಸಕರು ಪ್ರತ್ಯೇಕ ಸಭೆಗೆ ಪ್ಲ್ಯಾನ್
ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷ ಭುಗಿಲೆದ್ದಿದೆ. ಸಚಿವ ಸ್ಥಾನ ವಂಚಿತ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, 20ಕ್ಕೂ ಹೆಚ್ಚು ಶಾಸಕರು ಪ್ರತ್ಯೇಕ ಸಭೆಗೆ ಯೋಜನೆ ರೂಪಿಸುತ್ತಿದ್ದಾರೆ. ಅಲ್ಲದೆ, ರೆಬಲ್ ಶಾಸಕರು ಹೈಕಮಾಂಡ್ ಭೇಟಿಗೂ ಚಿಂತನೆ ನಡೆಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಮುಖ್ಯಾಂಶಗಳು
- ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ ತೀವ್ರ
- 20ಕ್ಕೂ ಹೆಚ್ಚು ಶಾಸಕರಿಂದ ಪ್ರತ್ಯೇಕ ಸಭೆ ಸಾಧ್ಯತೆ
- ಹೈಕಮಾಂಡ್ ಭೇಟಿಗೆ ರೆಬೆಲ್ ಶಾಸಕರ ಚಿಂತನೆ
ಬೆಂಗಳೂರು, ಆಗಸ್ಟ್ 5: ಕರ್ನಾಕ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ (Congress) ಅಸಮಾಧಾನವೂ ಹೆಚ್ಚಾಗಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೆಲ ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ್ದು, 20ಕ್ಕೂ ಹೆಚ್ಚು ಅತೃಪ್ತ ಶಾಸಕರು ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ. ಇದೇ ವೇಳೆ ಹಿರಿಯ ಹಾಗೂ ಕಿರಿಯ ಶಾಸಕರ ನಿಯೋಗವೊಂದು ಶೀಘ್ರದಲ್ಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ಮತ್ತು ಬೇಡಿಕೆಗಳನ್ನು ತಿಳಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ್ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಟಿ.ಬಿ. ಜಯಚಂದ್ರ ಹಂಗಾಮಿ ಸ್ಪೀಕರ್ ಹುದ್ದೆಯನ್ನೇ ತಿರಸ್ಕರಿಸಿದ್ದಾರೆ. ಬೇಳೂರು ಗೋಪಾಲಕೃಷ್ಣ ಕೂಡ ರಾಜೀನಾಮೆ ಪತ್ರ ಸಿದ್ಧಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ, ಶಾಸಕ ಗುಬ್ಬಿ ಶ್ರೀನಿವಾಸ್ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಆದರೆ, ಸಚಿವ ಸ್ಥಾನ ವಂಚಿತ ಶಾಸಕರ ರಾಜೀನಾಮೆ ಎಚ್ಚರಿಕೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಜೀನಾಮೆ ನೀಡುವವರು ನೀಡಲಿ, ಅದನ್ನು ಕೂಡಲೇ ಅಂಗೀಕರಿಸಲಾಗುವುದು ಎಂದು ಹೇಳಿದ್ದಾರೆ.
ಪ್ರತ್ಯೇಕ ಸಭೆಗೆ ಅತೃಪ್ತ ಶಾಸಕರ ಚಿಂತನೆ
ಸಂಪುಟ ವಿಸ್ತರಣೆಯಲ್ಲಿ ಹಲವು ಹಿರಿಯ ನಾಯಕರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ತೀವ್ರಗೊಂಡಿದೆ. ಯಶವಂತರಾಯಗೌಡ ವಿ. ಪಾಟೀಲ್, ಡಾ. ಎಚ್.ಸಿ. ಮಹದೇವಪ್ಪ, ಎಂ.ವೈ. ಗೋಪಾಲಕೃಷ್ಣ, ತನ್ವೀರ್ ಸೇಠ್, ಆರ್.ವಿ. ದೇಶಪಾಂಡೆ, ಅಪ್ಪಾಜಿ ನಾಡಗೌಡ, ಎಂ.ವೈ. ಪಾಟೀಲ್, ಕೆ. ವೆಂಕಟೇಶ್, ಎಸ್.ಆರ್. ಶ್ರೀನಿವಾಸ್, ಎಂ.ಸಿ. ಸುಧಾಕರ್, ವೆಂಕಟಶಿವಾರೆಡ್ಡಿ, ಬಸವರಾಜ ನೀಲಪ್ಪನವರ್, ರಹೀಂ ಖಾನ್, ಬಿ.ಕೆ. ಸಂಗಮೇಶ್ವರ, ಪ್ರಸಾದ್ ಅಬ್ಬಯ್ಯ, ಬೇಳೂರು ಗೋಪಾಲಕೃಷ್ಣ, ಹಂಪನಗೌಡ ಬಾದರ್ಲಿ, ಎಸ್.ಎನ್. ನಾರಾಯಣಸ್ವಾಮಿ, ಎಚ್.ಕೆ. ಪಾಟೀಲ್, ಆರ್.ಬಿ. ತಿಮ್ಮಾಪುರ, ಕೆ. ಷಡಕ್ಷರಿ ಹಾಗೂ ಕೆ.ವೈ. ನಂಜೇಗೌಡ ಸೇರಿದಂತೆ ಹಲವರು ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಸಮತೋಲನದ ಕೊರತೆ ಇದೆ ಎಂಬ ಅಸಮಾಧಾನವೂ ಶಾಸಕರಲ್ಲಿದೆ ಎನ್ನಲಾಗಿದೆ. ಈ ಕುರಿತು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಹಿರಿಯ ಹಾಗೂ ಕಿರಿಯ ಶಾಸಕರನ್ನೊಳಗೊಂಡ ನಿಯೋಗ ಭೇಟಿ ನೀಡುವ ಸಾಧ್ಯತೆಯಿದೆ. ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಸಾಮೂಹಿಕ ರಾಜೀನಾಮೆ ಸೇರಿದಂತೆ ಮುಂದಿನ ಕಠಿಣ ನಿರ್ಧಾರಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.
ಅತೃಪ್ತರ ಮನವೊಲಿಕೆಗೆ ಸಿಎಂ ಡಿಕೆಶಿ ಕಸರತ್ತು
ಶಾಸಕ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆಯ ಮೇರೆಗೆ ಸಚಿವರಾದ ಚಲುವರಾಯಸ್ವಾಮಿ ಮತ್ತು ಬಾಲಕೃಷ್ಣ ಅವರು ವಿಜಯನಗರದಲ್ಲಿರುವ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಚಲುವರಾಯಸ್ವಾಮಿ, ಎಂ. ಕೃಷ್ಣಪ್ಪ ಅವರು ನಮಗೆ ಹಿರಿಯಣ್ಣನಿದ್ದಂತೆ. ಎರಡು-ಮೂರು ಬಾರಿ ವ್ಯತ್ಯಾಸವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಕೃಷ್ಣಪ್ಪ ಅವರೊಂದಿಗೆ ಖುದ್ದು ಮಾತನಾಡಿ ಗೊಂದಲ ಬಗೆಹರಿಸಲಿದ್ದಾರೆ ಎಂದು ತಿಳಿಸಿದರು. ತಮ್ಮ ಗಮನಕ್ಕೆ ಬಾರದೇ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ಕರೆಸಿ ಮಾತನಾಡುವುದಾಗಿ ಎಂ. ಕೃಷ್ಣಪ್ಪ ಹೇಳಿದ್ದಾರೆ.
ಟಿಬಿ ಜಯಚಂದ್ರ ನಿವಾಸಕ್ಕೂ ಭೇಟಿ
ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಟಿ.ಬಿ. ಜಯಚಂದ್ರ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೂ ಸಚಿವರಾದ ಚಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ ಹಾಗೂ ಕುಣಿಗಲ್ ಶಾಸಕ ರಂಗನಾಥ್ ಭೇಟಿ ನೀಡಿದರು. ಕೆಲವು ತಾಂತ್ರಿಕ ಕಾರಣಗಳಿಂದ ವ್ಯತ್ಯಾಸವಾಗಿದೆ. ಮುಖ್ಯಮಂತ್ರಿ ಅವರೇ ಮುಂದಿನ ಎರಡು-ಮೂರು ದಿನಗಳಲ್ಲಿ ಇದನ್ನು ಸರಿಪಡಿಸಲಿದ್ದಾರೆ ಎಂದು ಭೇಟಿ ಬಳಿಕ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮತ್ತೊಂದೆಡೆ, ಮಾಜಿ ಸಚಿವ ಎಂ.ಸಿ. ಸುಧಾಕರ್ ಅವರು ತಾವು ಸಿದ್ದರಾಮಯ್ಯ ಬೆಂಬಲಿಗ ಎಂಬ ಕಾರಣಕ್ಕೆ ದ್ವೇಷದಿಂದ ಸಚಿವ ಸ್ಥಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಇದೇ ರೀತಿ ದ್ವೇಷ ಮುಂದುವರಿದರೆ ಸಮಸ್ಯೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೂಡ ಸಿದ್ದರಾಮಯ್ಯ ತಮ್ಮನ್ನು ಮೋಸ ಮಾಡಿದ್ದಾರೆ ಹಾಗೂ ಡಿ.ಕೆ. ಶಿವಕುಮಾರ್ ತಮ್ಮನ್ನು ಹತ್ತಿರಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನೂತನ ಸಚಿವರ ಪ್ರಮಾಣವಚನ ಸಮಾರಂಭಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಹೀಗಾಗಿ ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ ಇದೀಗ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಂಗಳವಾರ ವಿಧಾನಸೌಧದಲ್ಲಿ ಕೆಲ ಶಾಸಕರೊಂದಿಗೆ ಒನ್-ಟು-ಒನ್ ಸಭೆ ನಡೆಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂದು ಕೂಡ ಅಸಮಾಧಾನಗೊಂಡಿರುವ ಶಾಸಕರನ್ನು ಖುದ್ದು ಭೇಟಿ ಮಾಡಿ ಮನವೊಲಿಸಲು ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




