AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ಆಕ್ಸಿಡೆಂಟ್‌ಗಳಿಗೆ ಬ್ರೇಕ್: 19 ಸಾವಿರ ಚಾಲಕರಿಗೆ ಪೊಲೀಸ್ ತಜ್ಞರಿಂದ ಸ್ಪೆಷಲ್ ಕ್ಲಾಸ್!

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಿಎಂಟಿಸಿ ಬಸ್ ಅಪಘಾತಗಳಿಗೆ ಬ್ರೇಕ್ ಹಾಕಲು ನಿಗಮವು ಹೊಸ ಹೆಜ್ಜೆ ಇಟ್ಟಿದೆ. ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಚಾಲನಾ ತಜ್ಞರ ಮೂಲಕ 19 ಸಾವಿರಕ್ಕೂ ಹೆಚ್ಚು ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಅಪಘಾತಗಳ ತಡೆ ಮತ್ತು ರಸ್ತೆ ಸುರಕ್ಷತೆ ಕುರಿತು ನೀಡಲಾಗುತ್ತಿದೆ.

ಬಿಎಂಟಿಸಿ ಆಕ್ಸಿಡೆಂಟ್‌ಗಳಿಗೆ ಬ್ರೇಕ್: 19 ಸಾವಿರ ಚಾಲಕರಿಗೆ ಪೊಲೀಸ್ ತಜ್ಞರಿಂದ ಸ್ಪೆಷಲ್ ಕ್ಲಾಸ್!
ಸಾಂದರ್ಭಿಕ ಚಿತ್ರ Image Credit source: the news minute
ಕಿರಣ್​ ಸೂರ್ಯ
| Edited By: |

Updated on: Aug 21, 2026 | 8:00 AM

Share

ಮುಖ್ಯಾಂಶಗಳು

  • ಬಿಎಂಟಿಸಿ ಬಸ್ ಅಪಘಾತ ತಡೆಯಲು ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
  • ಸಂಚಾರ ಪೊಲೀಸರು ಹಾಗೂ ತಜ್ಞರಿಂದ 19 ಸಾವಿರ ಚಾಲಕರಿಗೆ ಜಾಗೃತಿ.
  • ಸಿಸಿಟಿವಿ ವಿಡಿಯೋಗಳ ಮೂಲಕ ಚಾಲಕರಿಗೆ ಸುರಕ್ಷಿತ ಚಾಲನೆಯ ಪಾಠ ಹೇಳಿಕೊಡಲಾಗುತ್ತಿದೆ.

ಬೆಂಗಳೂರು, ಆಗಸ್ಟ್ 21: ನಗರದಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್‌ಗಳ ಸರಣಿ ಅಪಘಾತಗಳು ಹೆಚ್ಚಾಗುತ್ತಿದ್ದು, ಅಮಾಯಕ ಪಾದಚಾರಿಗಳು ಹಾಗೂ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಜೀವಹಾನಿಗೆ ತಕ್ಷಣವೇ ಬ್ರೇಕ್ ಹಾಕಲು ಜಾಗೃತಗೊಂಡಿರುವ ಬಿಎಂಟಿಸಿ (BMTC) ನಿಗಮ, ತನ್ನ ಚಾಲಕರಿಗೆ ವಿಶೇಷ ತರಬೇತಿ ನೀಡಲು ಮುಂದಾಗಿದೆ. ರಸ್ತೆ ಗುಂಡಿಗಳಿದ್ದಾಗ ಸುರಕ್ಷಿತವಾಗಿ ಬಸ್ ಚಾಲನೆ ಮಾಡುವುದು, ಸಂಚಾರ ನಿಯಮ ಪಾಲನೆ, ಅತಿಯಾದ ವೇಗ ಮತ್ತು ಓವರ್‌ಟೇಕ್ ಮಾಡುವುದರಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಈ ಹಿಂದೆ ಸಂಭವಿಸಿದ ಅಪಘಾತಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ಲೇ ಮಾಡಿ, ಚಾಲಕರಿಗೆ ಪ್ರತ್ಯಕ್ಷವಾಗಿ ಪಾಠ ಹೇಳಿಕೊಡಲಾಗುತ್ತಿದೆ.

ಆತಂಕಕಾರಿ ಅಪಘಾತಗಳ ಅಂಕಿ-ಅಂಶ

ನಗರದ 50 ಬಿಎಂಟಿಸಿ ಡಿಪೋಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 19 ಸಾವಿರಕ್ಕೂ ಹೆಚ್ಚು ಡ್ರೈವರ್ ಕಂ ಕಂಡಕ್ಟರ್‌ಗಳಿಗೆ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಡ್ರೈವಿಂಗ್ ತಜ್ಞರಿಂದ ವಿಶೇಷ ತರಬೇತಿ ಆರಂಭಿಸಲಾಗಿದೆ. ಕಳೆದ 17 ವರ್ಷಗಳಲ್ಲಿ (2008-09 ರಿಂದ 2026-27ರ ವರೆಗೆ) ಬಿಎಂಟಿಸಿ ಬಸ್‌ಗಳಿಂದ ಒಟ್ಟು 5,864 ಅಪಘಾತಗಳು ಸಂಭವಿಸಿದ್ದು, 1,142 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.

2022-23ರಲ್ಲಿ 201 ಅಪಘಾತ (53 ಸಾವು), 2023-24ರಲ್ಲಿ 209 ಅಪಘಾತ (51 ಸಾವು), 2024-25ರಲ್ಲಿ 170 ಅಪಘಾತ (42 ಸಾವು) ಹಾಗೂ 2025-26ರಲ್ಲಿ 72 ಅಪಘಾತಗಳು (21 ಸಾವು) ವರದಿಯಾಗಿವೆ. 2023ರಲ್ಲಿ 6 ಅಪಘಾತ (3 ಸಾವು), 2024-25ರಲ್ಲಿ 29 ಅಪಘಾತ (11 ಸಾವು) ಹಾಗೂ 2025-26ರಲ್ಲಿ 32 ಅಪಘಾತಗಳು (9 ಸಾವು) ದಾಖಲಾಗಿವೆ.

ತರಬೇತಿ ಪಡೆದ ಚಾಲಕರ ಸಂತಸ

ಈಗಾಗಲೇ ಮೊದಲ ಹಂತದಲ್ಲಿ ಡಿಪೋಗಳಲ್ಲಿ ಹಾಗೂ ಎರಡನೇ ಹಂತದಲ್ಲಿ ವಡ್ಡರಹಳ್ಳಿಯ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿದೆ. “ಈ ತರಬೇತಿಯಿಂದ ರಸ್ತೆ ಸುರಕ್ಷತೆ ಹೆಚ್ಚಲಿದ್ದು, ನಗರದಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ” ಎಂದು ತರಬೇತಿ ಪಡೆದ ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಬಿಎಂಟಿಸಿ ಚಾಲಕರು ರಸ್ತೆಯಲ್ಲಿ ಮೈಯೆಲ್ಲಾ ಕಣ್ಣಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಅಮಾಯಕರ ಜೀವ ಮತ್ತು ತಮ್ಮ ಉದ್ಯೋಗ ಎರಡನ್ನೂ ಉಳಿಸಿಕೊಳ್ಳಲು ಸಾಧ್ಯ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us