
ಟಿ20 ಕ್ರಿಕೆಟ್ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಅದು ಕೂಡ ಬಾಂಗ್ಲಾದೇಶ್ ವಿರುದ್ಧ 2-1 ಅಂತರದಿಂದ ಸರಣಿ ಗೆಲ್ಲುವ ಮೂಲಕ ಎಂಬುದು ವಿಶೇಷ. ಶಾರ್ಜಾದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡದ ನಾಯಕ ಮೊಹಮ್ಮದ್ ವಸೀಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಪರ್ವೇಝ್ ಹೊಸೈನ್ ಎಮೊನ್ ಶೂನ್ಯಕ್ಕೆ ಔಟಾದರೆ, ಆ ಬಳಿಕ ಬಂದ ನಾಯಕ ಲಿಟ್ಟನ್ ದಾಸ್ ಕೇವಲ 14 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ತೌಹಿದ್ ಹೃದೋಯ್ ಕೂಡ ಸೊನ್ನೆ ಸುತ್ತಿ ನಿರ್ಗಮಿಸಿದರು. ಇದಾಗ್ಯೂ ಮತ್ತೊಂದೆಡೆ ತಂಝಿದ್ ಹಸನ್ 18 ಎಸೆತಗಳಲ್ಲಿ 40 ರನ್ ಬಾರಿಸಿ ಮಿಂಚಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಜಕರ್ ಅಲಿ 41 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಬಅಂಗ್ಲಾದೇಶ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಯುಎಇ ತಂಡ ಕೂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ತಂಡದ ಮೊತ್ತ 14 ಆಗುವಷ್ಟರಲ್ಲಿ ನಾಯಕ ಮೊಹಮ್ಮದ್ ವಸೀಮ್ (9) ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಮ್ಮದ್ ಝೊಹೈಬ್ 29 ರನ್ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಲಿಶಾನ್ ಶರಫು ಅರ್ಧಶತಕ ಸಿಡಿಸಿದರು. ಹಾಗೆಯೇ ಅಲಿ ಖಾನ್ 41 ರನ್ಗಳ ಕೊಡುಗೆ ನೀಡಿದರು.
ಅತ್ತ ಕ್ರೀಸ್ ಕಚ್ಚಿ ನಿಂತು ಆಡಿದ ಅಲಿಶಾನ್ ಶರಫು 47 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 68 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ 19.1 ಓವರ್ಗಳಲ್ಲಿ 166 ರನ್ ಬಾರಿಸುವ ಮೂಲಕ ಯುಎಇ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇದು ಟೆಸ್ಟ್ ಆಡುವ ತಂಡವೊಂದರ ವಿರುದ್ಧದ ಯುಎಇ ತಂಡದ ಮೊದಲ ಟಿ20 ಸರಣಿ ಗೆಲುವಾಗಿದೆ. ಈ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವು ಟಿ20 ಕ್ರಿಕೆಟ್ನಲ್ಲಿ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: IPL 2025: ಐಪಿಎಲ್ ಪ್ಲೇಆಫ್ಗೆ 4 ತಂಡಗಳು ಫೈನಲ್
ಇದಕ್ಕೂ ಮುನ್ನ ನಡೆದ ಈ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು 27 ರನ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಟಿ20 ಪಂದ್ಯದಲ್ಲಿ ಯುಎಇ 2 ರನ್ಗಳ ವಿಜಯ ತನ್ನದಾಗಿಸಿಕೊಂಡಿತು. ಇದೀಗ ಮೂರನೇ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿರುವುದು ವಿಶೇಷ.