ಒಂದು ಕ್ರಿಕೆಟ್ ತಂಡದಲ್ಲಿ ಒಟ್ಟು 11 ಆಟಗಾರರಿರುತ್ತಾರೆ. ಹನ್ನೊಂದು ಆಟಗಾರರು ಒಂದೊಂದು ರನ್ ಕಲೆಹಾಕಿದರೂ ಎರಡಂಕಿ ಮೊತ್ತವಾಗುತ್ತೆ. ಆದರೆ ಇಲ್ಲೊಂದು ತಂಡ ಕೇವಲ 8 ರನ್ಗೆ ಆಲೌಟ್ ಆಗಿ ಅಚ್ಚರಿ ಮೂಡಿಸಿದೆ. ಅದು ಕೂಡ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಎಂಬುದು ವಿಶೇಷ. ಹೌದು, ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್‌ನಲ್ಲಿ ಯುಎಇ ಮತ್ತು ನೇಪಾಳ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ನೇಪಾಳದ ಮಹಿಳಾ ತಂಡ ಕೇವಲ 8 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಕ್ರಿಕೆಟ್ ಇತಿಹಾಸದ ಅತ್ಯಂತ ಹೀನಾಯ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಈ 8 ರನ್ಗಳಿಸಲು ನೇಪಾಳ ತಂಡ 8.1 ಓವರ್ಗಳನ್ನು ಆಡಿರುವುದು ಮತ್ತೊಂದು ವಿಶೇಷ. ಆದರೆ ಯುಎಇ ತಂಡದ ಮುಂಚೂಣಿಯ ಬೌಲರ್‌ಗಳಾದ ಮಹಿಕಾ ಗೌರ್ ಮತ್ತು ಇಂಧುಜಾ ನಂದಕುಮಾರ್ ಅವರು ಮಾರಕ ದಾಳಿಯಿಂದಾಗಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿದವು. ನೇಪಾಳ ಪರ ಸ್ನೇಹ್ ಮಹಾರಾ 3 ರನ್ಗಳಿಸಿದ್ದು ಗರಿಷ್ಠ ಸ್ಕೋರ್. ಇನ್ನು ಇಂಧುಜಾ ನಂದಕುಮಾರ್ 3 ರನ್ಗೆ 6 ವಿಕೆಟ್ ಪಡೆದರೆ, ಮಹಿಕಾ ಗೌತ್ 5 ರನ್ ನೀಡಿ 2 ವಿಕೆಟ್ ಕಬಳಿಸಿದರು. ಹಾಗೆಯೇ 8 ರನ್ಗಳ ಗುರಿ ಬೆನ್ನತ್ತಿದ UAE ತಂಡವು 1.1 ಓವರ್ಗಳಲ್ಲಿ ಗುರಿಮುಟ್ಟಿತು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ರನ್ಗಳಿಸಿದ ಕೆಟ್ಟ ದಾಖಲೆ ಟರ್ಕಿ ದೇಶದ ಹೆಸರಿನಲ್ಲಿದೆ. 2019 ರಲ್ಲಿ ಚೆಕ್ ರಿಪಬ್ಲಿಕ್ ವಿರುದ್ದದ ಪಂದ್ಯದಲ್ಲಿ ಟರ್ಕಿ ತಂಡವು ಕೇವಲ 21 ರನ್ಗೆ ಆಲೌಟ್ ಆಗಿತ್ತು. ಇನ್ನು ಟೀಮ್ ಇಂಡಿಯಾ ಟಿ20 ಕ್ರಿಕೆಟ್ನಲ್ಲಿ ಗಳಿಸಿದ ಅತೀ ಕಡಿಮೆ ರನ್ ಎಂದರೆ 74. 2008 ರಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡವು ಕೇವಲ 74 ರನ್ಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿತ್ತು.
ಇದೀಗ ಅಂಡರ್ 19 ಪಂದ್ಯದಲ್ಲಿ ಕೇವಲ 8 ರನ್ಗೆ ಆಲೌಟ್ ಆಗುವ ಮೂಲಕ ಕಿರಿಯರ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ರನ್ಗಳಿಸಿದ ಕೆಟ್ಟ ದಾಖಲೆಯನ್ನು ನೇಪಾಳ ತಂಡ ತನ್ನದಾಗಿಸಿಕೊಂಡಿದೆ. ನೇಪಾಳ, ಭೂತಾನ್, ಥಾಯ್ಲೆಂಡ್, ಕತಾರ್ ಮತ್ತು ಯುಎಇ ನಡುವೆ T20 ವಿಶ್ವಕಪ್ ಏಷ್ಯಾ ಅರ್ಹತಾ ಪಂದ್ಯಾವಳಿಯನ್ನು ಆಡುತ್ತಿದ್ದು, ಇದರಲ್ಲಿ ವಿಜೇತ ತಂಡವು ಜನವರಿ 2023 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ICC U19 ಮಹಿಳಾ T20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.