AFG vs UAE: ಒಂದೇ ಒಂದು ಅರ್ಧಶತಕ, ಶತಕವಿಲ್ಲದೆ ಬೃಹತ್ ಮೊತ್ತ; ದಾಖಲೆ ಬರೆದ ಟಿ20 ಪಂದ್ಯ
AFG vs UAE: ಅಫ್ಘಾನಿಸ್ತಾನ ಮತ್ತು ಯುಎಇ ನಡುವಿನ ತ್ರಿಕೋನ ಸರಣಿಯ ಆರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ 4 ರನ್‌ಗಳಿಂದ ಜಯಗಳಿಸಿತು. ಅಫ್ಘಾನಿಸ್ತಾನ 170 ರನ್ ಗಳಿಸಿತು, ಆದರೆ ಯುಎಇ 166 ರನ್‌ಗಳಿಗೆ ಸೀಮಿತವಾಯಿತು. ಎರಡೂ ತಂಡಗಳು 300 ಕ್ಕೂ ಹೆಚ್ಚು ರನ್ ಗಳಿಸಿದರೂ, ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಅಥವಾ ಶತಕ ಬಾರಿಸಲಿಲ್ಲ, ಇದು ವಿಶೇಷ ದಾಖಲೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಯುಎಇ ನಡುವೆ ನಡೆಯುತ್ತಿರುವ ತ್ರಿಕೋನ ಸರಣಿಯ 6ನೇ ಟಿ20 ಪಂದ್ಯ ಅಫ್ಘಾನಿಸ್ತಾನ ಹಾಗೂ ಯುಎಇ (Afghanistan vs UAE) ನಡುವೆ ನಡೆಯಿತು. ಈ ಪಂದ್ಯವನ್ನು ಅಫ್ಘನ್ ತಂಡ 4 ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 170 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಯುಎಇ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 166 ರನ್‌ಗಳಿಸಲಷ್ಟೇ ಶಕ್ತವಾಗಿ 5 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ, ಎರಡೂ ತಂಡಗಳ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಅಥವಾ ಶತಕವನ್ನಾಗಲಿ ಬಾರಿಸಲಿಲ್ಲ. ಆದಾಗ್ಯೂ ಉಭಯ ತಂಡಗಳಿಂದ 300 ಕ್ಕೂ ಹೆಚ್ಚು ರನ್‌ಗಳು ದಾಖಲಾದವು. ಈ ಮೂಲಕ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಉಭಯ ತಂಡದಿಂದ ಯಾವುದೇ ಅರ್ಧಶತಕ, ಶತಕ ದಾಖಲಾಗದಿದ್ದರೂ 300 ಕ್ಕೂ ಹೆಚ್ಚು ರನ್‌ಗಳು ದಾಖಲಾದ ದಾಖಲೆ ಸೃಷ್ಟಿಯಾಯಿತು.
ಎರಡನೇ ಬಾರಿಗೆ ದಾಖಲೆ ಸೃಷ್ಟಿ
ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ಎರಡೂ ತಂಡಗಳು ಒಟ್ಟು 336 ರನ್ ಕಲೆಹಾಕಿದವು. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಎರಡನೇ ಬಾರಿ ಒಂದು ಪಂದ್ಯದಲ್ಲಿ ಶತಕ ಅಥವಾ ಅರ್ಧಶತಕ ಗಳಿಸದಿದ್ದರೂ 300+ ರನ್ ದಾಖಲಾಗಿದೆ. ಇದಕ್ಕೂ ಮೊದಲು 2016 ರ ಆರಂಭದಲ್ಲಿ, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆ ನಡುವೆ ನಡೆದಿದ್ದ ಟಿ20 ಪಂದ್ಯದಲ್ಲಿ ಎರಡೂ ತಂಡಗಳು ಒಟ್ಟು 369 ರನ್ ಬಾರಿಸಿದ್ದವು. ಆ ಪಂದ್ಯದಲ್ಲೂ ಯಾವುದೇ ಬ್ಯಾಟ್ಸ್‌ಮನ್ ಶತಕವನ್ನಾಗಲಿ ಅಥವಾ ಅರ್ಧಶತಕವನ್ನಾಗಲಿ ಬಾರಿಸಲಾಗಲಿಲ್ಲ.
ಪಂದ್ಯ ಹೀಗಿತ್ತು
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡದ ಪರ ಇಬ್ರಾಹಿಂ ಝದ್ರಾನ್ (48 ರನ್) ಮತ್ತು ರಹಮಾನಲ್ಲಾ ಗುರ್ಬಾಜ್ (40 ರನ್) 98 ರನ್‌ಗಳ ಪಾಲುದಾರಿಕೆ ನೀಡುವ ಮೂಲಕ ಉತ್ತಮ ಆರಂಭ ನೀಡಿದರು. ಇವರಲ್ಲದೆ, ಕರೀಮ್ ಜನತ್ 28 ರನ್ ಮತ್ತು ಗುಲ್ಬಾದಿನ್ ನೈಬ್ 20 ರನ್‌ಗಳ ಕೊಡುಗೆ ನೀಡಿದರು. ಇವರಿಂದಾಗಿ ಅಫ್ಘಾನಿಸ್ತಾನ ತಂಡ 170 ರನ್‌ಗಳ ಸ್ಕೋರ್ ದಾಖಲಿಸಿತು.
ಕೊನೆಯಲ್ಲಿ ಎಡವಿದ ಯುಎಇ ತಂಡ
ಈ ಗುರಿ ಬೆನ್ನಟ್ಟಿದ ಯುಎಇ ತಂಡದ ಪರ ನಾಯಕ ಮುಹಮ್ಮದ್ ವಾಸಿಮ್ (44 ರನ್) ಮತ್ತು ಆಸಿಫ್ ಖಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಈ ಇಬ್ಬರೂ ಆಟಗಾರರು ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ, ಆಸಿಫ್ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ನೆರವಿನಿಂದ 40 ರನ್ ಗಳಿಸಿದರೆ, ಅಲಿಶಾನ್ ಶರಾಫು 27 ರನ್‌ಗಳ ಕೊಡುಗೆ ನೀಡಿದರು. ಮುಹಮ್ಮದ್ ಜೊಹೆಬ್ 23 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Sat, 6 September 25
