IND vs BAN: ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಿಗೆ ತಂಡಕ್ಕೆ ಎಂಟ್ರಿಕೊಟ್ಟ ‘‘ಜಮ್ಮು ಎಕ್ಸ್​ಪ್ರೆಸ್’’..!

| Updated By: ಪೃಥ್ವಿಶಂಕರ

Updated on: Dec 03, 2022 | 2:06 PM

IND vs BAN: ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ ಇಂಜುರಿಯಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದು, ಅವರ ಬದಲು ಯುವ ವೇಗಿ ಉಮ್ರಾನ್ ಮಲಿಕ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಹೇಳಿದೆ.

IND vs BAN: ಗಾಯಗೊಂಡಿರುವ ಮೊಹಮ್ಮದ್ ಶಮಿ ಬದಲಿಗೆ ತಂಡಕ್ಕೆ ಎಂಟ್ರಿಕೊಟ್ಟ ‘‘ಜಮ್ಮು ಎಕ್ಸ್​ಪ್ರೆಸ್’’..!
Umran Malik
Follow us on

ಮೂರು ಪಂದ್ಯಗಳ ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಆಡಲು ಟೀಂ ಇಂಡಿಯಾ ಬಾಂಗ್ಲಾದೇಶ (India vs Bangladesh) ಪ್ರವಾಸ ಮಾಡಿದೆ. ಈ ಸರಣಿಯ ಮೊದಲ ಪಂದ್ಯ ಭಾನುವಾರ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮೊದಲು ಟೀಮ್ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ (Mohammed Shami) ಇಂಜುರಿಯಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಬಿಸಿಸಿಐ (BCCI) ಶುಕ್ರವಾರ ಹೇಳಿಕೆ ನೀಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದು, ಅವರ ಬದಲು ಯುವ ವೇಗಿ ಉಮ್ರಾನ್ ಮಲಿಕ್ (Umran Malik) ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ಶಮಿ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ತಂಡದ ಭಾಗವಾಗಿದ್ದರು. ಆ ಬಳಿಕ ಟೀಂ ಇಂಡಿಯಾದಿಂದ ವಿಶ್ರಾಂತಿ ಪಡೆದಿದ್ದ ಶಮಿ ನ್ಯೂಜಿಲೆಂಡ್ ಪ್ರವಾಸಕ್ಕೂ ಹೋಗಿರಲಿಲ್ಲ. ಹೀಗಾಗಿ ಅವರನ್ನು ಬಾಂಗ್ಲಾದೇಶ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಈಗ ಗಾಯದಿಂದಾಗಿ ಶಮಿ ಮತ್ತೊಮ್ಮೆ ತಂಡದಿಂದ ಹೊರಗುಳಿಯಲ್ಲಿದ್ದಾರೆ. ಜಸ್ಪ್ರಿತ್ ಬುಮ್ರಾ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್ ದಾಳಿಯ ಉಸ್ತುವಾರಿಯನ್ನು ಶಮಿಗೆ ನೀಡುವ ಸಾಧ್ಯತೆಗಳಿದ್ದವು. ಆದರೀಗ ಶಮಿ ತಂಡದಿಂದ ಹೊರನಡೆದಿರುವುದು ಟೀಂ ಇಂಡಿಯಾದ ಸಮಸ್ಯೆಗಳನ್ನು ಹೆಚ್ಚಿಸಿದೆ.

ಭುಜದ ಗಾಯ

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ , ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮೊದಲು ಶಮಿ ಭುಜದ ಗಾಯದಿಂದ ಬಳಲುತ್ತಿರುವುದರಿಂದ ಅವರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಶಮಿ ಈಗ ಪ್ರಸ್ತುತ ಬೆಂಗಳೂರಿನ ಎನ್‌ಸಿಎಯಲ್ಲಿ ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಯುವ ವೇಗಿ ಉಮ್ರಾನ್ ಮಲಿಕ್​ರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: Virat Kohli: ಕೇವಲ 30 ರನ್​ಗಳಷ್ಟೇ ಬೇಕು; ಮತ್ತೊಂದು ದಾಖಲೆ ಬರೆಯಲು ಸಜ್ಜಾದ ಕಿಂಗ್ ಕೊಹ್ಲಿ..!

ಕಿವೀಸ್ ವಿರುದ್ಧ ಏಕದಿನ ತಂಡಕ್ಕೆ ಎಂಟ್ರಿ

ವಿಶ್ವ ಕ್ರಿಕೆಟ್‌ನಲ್ಲಿ ತನ್ನ ವೇಗದಿಂದಲೇ ಮನೆ ಮಾತಾಗಿರುವ ಉಮ್ರಾನ್ ಮಲಿಕ್ ಇತ್ತೀಚೆಗೆ ನ್ಯೂಜಿಲೆಂಡ್‌ನಲ್ಲಿ ತಮ್ಮ ಏಕದಿನ ಪಾದಾರ್ಪಣೆ ಮಾಡಿದರು. ಈ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಆಡಿದ್ದ ಮಲಿಕ್, ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ತಂಡದ ಪರ ಗಮರ್ನಾಹ ಪ್ರದರ್ಶನ ನೀಡಿದ್ದ ಮಲಿಕ್ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚುವ ಮೂಲಕ ತಂಡದಲ್ಲಿ ಖಾಯಂ ಸ್ಥಾನ ಪಡೆಯುವ ಅವಕಾಶ ಹೊಂದಿದ್ದಾರೆ.

ಟೆಸ್ಟ್ ಸರಣಿಗೂ ಗೈರಾಗುವ ಸಾಧ್ಯತೆ

ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆಯಲ್ಲಿರುವ ಟೆಸ್ಟ್ ಸರಣಿಯಿಂದಲೂ ಶಮಿ ಹೊರಗಿರಬಹುದು ಎಂದು ಸುದ್ದಿ ಸಂಸ್ಥೆ ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ. ಮೂಲಗಳ ಪ್ರಕಾರ, ಮೊಹಮ್ಮದ್ ಶಮಿ ಆಸ್ಟ್ರೇಲಿಯಾದಲ್ಲಿ ಆಡಿದ ಟಿ20 ವಿಶ್ವಕಪ್ ನಂತರ ಅಭ್ಯಾಸ ಮಾಡುವ ಸಮಯದಲ್ಲಿ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಎನ್‌ಸಿಎಗೆ ತೆರಳುವಂತೆ ಶಮಿಗೆ ಹೇಳಲಾಗಿತ್ತು. ಅದಕ್ಕಾಗಿಯೇ ಶಮಿ ಡಿಸೆಂಬರ್ 1 ರಂದು ತಂಡದೊಂದಿಗೆ ಬಾಂಗ್ಲಾದೇಶಕ್ಕೆ ಹೋಗಲಿಲ್ಲ ಎಂದು ವರದಿಯಾಗಿದೆ.

ಈ ಟೆಸ್ಟ್ ಸರಣಿ ಭಾರತಕ್ಕೆ ಬಹಳ ಮುಖ್ಯ

ಟೆಸ್ಟ್ ಸರಣಿಯಲ್ಲಿ ಶಮಿ ಅವರ ಅನುಪಸ್ಥಿತಿಯು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್​ಗೆ ಹೊಸ ತಲೆನೋವು ತಂದಿದೆ. ಏಕೆಂದರೆ ಟೀಂ ಇಂಡಿಯಾ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನ ಪಡೆಯುವ ರೇಸ್​ನಲ್ಲಿ ಉಳಿಯಬೇಕೆಂದರೆ ಈಗ ಉಳಿದಿರುವ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಹೀಗಾಗಿ ಟೀಂ ಇಂಡಿಯಾಕ್ಕೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಮಾಡು ಇಲ್ಲವೇ ಮಡಿಯಂತ್ತಾಗಿದೆ. ಇಲ್ಲಿಯವರೆಗೆ ಟೀಂ ಇಂಡಿಯಾ ಪರ 60 ಟೆಸ್ಟ್ ಪಂದ್ಯಗಳನ್ನು ಆಡಿರುವ ಶಮಿ 216 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಶಹಬ್ಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Sat, 3 December 22