ಅಂಡರ್-19 ವಿಶ್ವಕಪ್‌ನಲ್ಲಿ (U19 World Cup) ಭಾರತ ತಂಡ ಫೈನಲ್ ತಲುಪಿದೆ. ಟೀಮ್ ಇಂಡಿಯಾದ (Team India) ಈ ಭರ್ಜರಿ ಪ್ರದರ್ಶನ ನಡುವೆ ಹಲವು ಹೆಸರುಗಳು ಚರ್ಚೆಯಲ್ಲಿವೆ. ಇದಾಗ್ಯೂ ಕಡಿಮೆ ಚರ್ಚೆಯಾಗುತ್ತಿರುವ ಹೆಸರೆಂದರೆ ದಿನೇಶ ಬಾನಾ (Dinesh Bana). 19 ವರ್ಷದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಬಾನಾ ಅಂಡರ್ 19 ವಿಶ್ವಕಪ್‌ನಲ್ಲಿ ಅತ್ಯಾಧ್ಬುತ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ನಲ್ಲಿ ಕೇವಲ 4 ಎಸೆತಗಳನ್ನು ಎದುರಿಸಿದ ಬಾನಾ 500 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ದಿನೇಶ್ ಬಾನಾ ಅವರ ಈ ಆಕ್ರಮಣಕಾರಿ ಬ್ಯಾಟಿಂಗ್ನಿಂದಾಗಿ ಆಸೀಸ್ ವಿರುದ್ದ ಕೊನೆಯ ಓವರ್ನಲ್ಲಿ ಕಲೆಹಾಕಿದ್ದು ಬರೋಬ್ಬರಿ 27 ರನ್ಗಳು. ಇದೀಗ ದಿನೇಶ್ ಬಾನಾ ಹೆಸರು ಐಪಿಎಲ್ ಮೆಗಾ ಹರಾಜಿನಲ್ಲಿದೆ. ಬಿಗ್ ಹಿಟ್ಟರ್ ಎನಿಸಿಕೊಂಡಿರುವ ಈ ಯುವ ಆಟಗಾರನ ಮೇಲೆ ಬಹುತೇಕ ಫ್ರಾಂಚೈಸಿಗಳು ಕೂಡ ಕಣ್ಣಿಟ್ಟಿದೆ.
ಹರಿಯಾಣ ಮೂಲದ ದಿನೇಶ್ ಬಾನಾ ಪ್ರಸ್ತುತ ಭಾರತದ ಅಂಡರ್-19 ತಂಡದಲ್ಲಿ ಮಧ್ಯಮ-ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್.
ಸಂದರ್ಭಕ್ಕನುಗುಣುವಾಗಿ ಬ್ಯಾಟ್ ಬೀಸುವ ಬಾಬಾಗೆ ಕೆಲವೊಮ್ಮೆ ಬ್ಯಾಟಿಂಗ್ ಬಡ್ತಿ ನೀಡಲಾಗುತ್ತದೆ. ಹೀಗೆ ಸಿಕ್ಕ ಅವಕಾಶಗಳಲ್ಲಿ ಬಾನಾ ಅಬ್ಬರಿಸಿದ್ದೇ ಹೆಚ್ಚು. ಅದರಲ್ಲೂ ಬಾನಾ ಅವರ ಪವರ್ ಹಿಟ್ಟಿಂಗ್ ಕೆಲವೊಮ್ಮೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ನೆನಪಿಸುತ್ತದೆ. ಪಂತ್ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ವೇಗದ ಬ್ಯಾಟಿಂಗ್‌ಗೆ ಪ್ರಪಂಚದಾದ್ಯಂತ ಅಭಿಮಾನಿಗಳು ಕೂಡ ಇದ್ದಾರೆ. ಇದಾಗ್ಯೂ ಪಂತ್ಗೆ ಸವಾಲೆಸೆಯುವಂತಹ ಹಲವುಇ ಯುವ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್‌ಗಳು ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಅದರಲ್ಲೂ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಥಾನ ಅಲಂಕರಿಸುವ ಪಯತ್ನದಲ್ಲಿದ್ದಾರೆ.
ಇದೀಗ ದಿನೇಶ್ ಬಾನಾ ಕೂಡ ಈ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಗೇಮ್ ಚೇಂಜರ್ ಅನ್ನು ಎದುರು ನೋಡುತ್ತಿರುವ ಟೀಮ್ ಇಂಡಿಯಾಗೆ ಅತ್ಯುತ್ತಮ ಆಯ್ಕೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿದ್ದ ಆಸ್ಟ್ರೇಲಿಯಾ ವಿರುದ್ದ ಬಾನಾ 4 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು. ಈ ವೇಳೆ 2 ಬಿಗ್ ಸಿಕ್ಸ್ ಮತ್ತು 2 ಬೌಂಡರಿಗಳನ್ನು ಬಾರಿಸಿದ್ದರು. ಈ ಮೂಲಕ 19 ವರ್ಷದೊಳಗಿನ ಕ್ರಿಕೆಟ್‌ನ ಯಾವುದೇ ವಿಭಾಗದಲ್ಲಿ 4 ಅಥವಾ ಹೆಚ್ಚಿನ ಎಸೆತಗಳನ್ನು ಎದುರಿಸಿ ಕೇವಲ ಬೌಂಡರಿಗಳಿಂದ ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಭರ್ಜರಿ ದಾಖಲೆಯೊಂದಿಗೆ ದಿನೇಶ್ ಬಾನಾ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ 4 ಎಸೆತಗಳಲ್ಲೇ ಐಪಿಎಲ್ ಫ್ರಾಂಚೈಸಿಗಳು ತನ್ನತ್ತ ನೋಡುವಂತೆ ಮಾಡಿದ್ದಾರೆ.
ದಿನೇಶ್ ಬಾನಾ ಪ್ರಸ್ತುತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್. ಒಂದು ವೇಳೆ ಅವರು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರೆ, ಅವರ ಅದ್ಭುತ ಬ್ಯಾಟಿಂಗ್ ಇಡೀ ವಿಶ್ವದ ಗಮನವನ್ನು ಸೆಳೆಯಬಹುದು. ದಿನೇಶ್ ಬಾನಾ ಅವರ ವಿಕೆಟ್ ಕೀಪಿಂಗ್ ಕೂಡ ಅತ್ಯುತ್ತಮವಾಗಿದೆ. ತಮ್ಮ ಕೀಪಿಂಗ್ ಅನ್ನು ಸುಧಾರಿಸಲು ಅವರು 8-9 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಾರೆ. ಅದರ ಜೊತೆ ಬ್ಯಾಟಿಂಗ್ನತ್ತ ಅಭ್ಯಾಸ ನಡೆಸುತ್ತಾರೆ ಎಂದು ಕೋಚ್ ರಣವೀರ್ ಜಾಖರ್ ಹೇಳಿದ್ದಾರೆ. ಒಟ್ಟಿನಲ್ಲಿ ದಿನೇಶ್ ಬಾನಾ ಅವರ ಎಂಟ್ರಿ ಇದೀಗ ರಿಷಭ್ ಪಂತ್ ಹಾಗೂ ಇಶಾನ್ ಕಿಶನ್ಗೆ ಹೊಸ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
ಅಂದಹಾಗೆ ಭಾರತ-ಇಂಗ್ಲೆಂಡ್ ನಡುವಣ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯವು ಇಂದು (ಫೆ.5) ನಡೆಯಲಿದ್ದು, ಈ ಪಂದ್ಯದಲ್ಲಿ ದಿನೇಶ್ ಬಾನಾ ಕಮಾಲ್ ಮಾಡಿದ್ರೆ, ಐಪಿಎಲ್ಗೆ ಎಂಟ್ರಿ ಖಚಿತ ಎಂದೇ ಹೇಳಬಹುದು.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: IPL 2022: ಮೆಗಾ ಹರಾಜಿನಲ್ಲಿ 590 ಆಟಗಾರರು: ಯಾವ ದೇಶದಿಂದ ಎಷ್ಟು ಆಟಗಾರರು? ಇಲ್ಲಿದೆ ಸಂಪೂರ್ಣ ಪಟ್ಟಿ
ಇದನ್ನೂ ಓದಿ: Jason Holder: ಡಬಲ್ ಹ್ಯಾಟ್ರಿಕ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಜೇಸನ್ ಹೋಲ್ಡರ್
(Under 19 world cup: explosive wicket keeper batsman dinesh bana is big threat for rishabh pant)