ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನ ಮಳೆಯ ನಡುವೆಯೂ ಅಭಿಮಾನಿಳಿಗೆ ರಸದೌತಣ ನೀಡಿದೆ. ಉಭಯ ತಂಡಗಳ ನಡುವೆ ಸೋಮವಾರ ಕೊಲಂಬೊದಲ್ಲಿ ನಡೆದ ಏಷ್ಯಾಕಪ್ (Asia Cup 2023) ಸೂಪರ್ 4 ಪಂದ್ಯದಲ್ಲಿ ಕುಲ್ದೀಪ್ ಯಾದವ್ (Kuldeep Yadav) ಅವರ ಐದು ವಿಕೆಟ್ ಮ್ಯಾಜಿಕ್ ಹಾಗೂ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ (Virat Kohli, KL Rahul ) ಅವರ ಅಜೇಯ ಶತಕದ ನೆರವಿನಿಂದ ಭಾರತವು, ಪಾಕಿಸ್ತಾನವನ್ನು 228 ರನ್‌ಗಳಿಂದ ಸೋಲಿಸಿದೆ. ವಾಸ್ತವವಾಗಿ ಭಾನುವಾರ ನಡೆಯಬೇಕಿದ್ದ ಪಂದ್ಯವನ್ನು ಮಳೆಯ ಕಾರಣದಿಂದಾಗಿ ಮೀಸಲು ದಿನಕ್ಕೆ ಮುಂದೂಡಲಾಯಿತು. ಸೋಮವಾರವೂ ಮಳೆ ಅಡ್ಡಿಯ ನಡುವೆಯೂ ಪಂದ್ಯ ಪೂರ್ಣಗೊಳ್ಳುವಲ್ಲಿ ಯಶಸ್ವಿಯಾಯಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ ಭಾರತ, ಭಾಬರ್ ಪಡೆಗೆ ಐತಿಹಾಸಿಕ ಸೋಲಿನ ಶಾಕ್ ನೀಡಿತು. ಇದರೊಂದಿಗೆ ಏಷ್ಯಾಕಪ್ ಸೂಪರ್ 4 ಸುತ್ತಿನ ಪಾಯಿಂಟ್ ಪಟ್ಟಿಯಲ್ಲಿ (Asia Cup 2023 Super 4 Points Table) ನಂ.1 ಸ್ಥಾನಕ್ಕೇರಿತು.
ಪಾಕಿಸ್ತಾನದ ಎದುರು ಬೃಹತ್ ಗೆಲುವು ದಾಖಲಿಸಿರುವ ಭಾರತ ಪ್ರಸ್ತುತ ಏಷ್ಯಾಕಪ್ 2023 ರ ಸೂಪರ್ 4 ಸುತ್ತಿನ ಪಾಯಿಂಟ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಈ ಸುತ್ತಿನಲ್ಲಿ ಆಡಿರುವ ಏಕೈಕ ಪಂದ್ಯವನ್ನು ಭಾರಿ ಅಂತರದಿಂದ ಗೆದ್ದಿರುವ ರೋಹಿತ್ ಪಡೆ ಎರಡು ಅಂಕಗಳನ್ನು ಸಂಪಾದಿಸಿದೆ. ಅಲ್ಲದೆ 228 ರನ್‌ಗಳ ಗೆಲುವು ಭಾರತದ ರನ್ ರೇಟ್ ಅನ್ನು +4.560 ಕ್ಕೆ ಏರಿಸಿದೆ. ಹೀಗಾಗಿ ಟೀಂ ಇಂಡಿಯಾ ಉಳಿದ ಮೂರು ತಂಡಗಳಿಗಿಂತ ಅಧಿಕ ನೆಟ್ ರನ್ರೇಟ್ನೊಂದಿಗೆ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಸೋಲಿನ ಬೆನ್ನಲ್ಲೇ ಪಾಕ್ ತಂಡಕ್ಕೆ ಬಿಗ್ ಶಾಕ್; ಉಳಿದ ಏಷ್ಯಾಕಪ್ ಪಂದ್ಯಗಳಿಗೆ ಇಬ್ಬರು ಸ್ಟಾರ್ ವೇಗಿಗಳು ಡೌಟ್..!
ಇನ್ನು ಈ ಪಂದ್ಯಕ್ಕೂ ಮುನ್ನ ಆಡಿದ ಏಕೈಕ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿದ್ದ ಪಾಕಿಸ್ತಾನ 2 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಭಾರತ ಮೂರನೇ ಸ್ಥಾನದಲ್ಲಿತ್ತು. ಆದರೆ ರೋಹಿತ್ ಪಡೆಯ ಎದುರು ಹೀನಾಯಕವಾಗಿ ಶರಣಾದ ಬಾಬರ್ ತಂಡದ ರನ್ ರೇಟ್ ಪಾತಳಕ್ಕೆ ಕುಸಿದಿದೆ. ಭಾರತದ ವಿರುದ್ಧ 228 ರನ್‌ಗಳ ಅಂತರದ ಸೋಲು, ಪಾಕ್ ಪಡೆಯ ರನ್ ರೇಟ್ ಅನ್ನು -1.892 ಕ್ಕೆ ತಂದು ನಿಲ್ಲಿಸಿದೆ. ಹೀಗಾಗಿ ಮೈನಸ್ ರನ್ ರೇಟ್ನೊಂದಿಗೆ ಪಾಕ್ ತಂಡ ಮೂರನೇ ಸ್ಥಾನಕ್ಕೆ ಕುಸಿದಿದೆ.
ಹಾಗೆಯೇ ಇಂದು ತನ್ನ ಸೂಪರ್ 4 ಸುತ್ತಿನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಎದುರಿಸುತ್ತಿರುವ ಹಾಲಿ ಚಾಂಪಿಯನ್ ಶ್ರೀಲಂಕಾ +0.420ನೆಟ್ ರನ್ರೇಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಮೊದಲು ಬಾಂಗ್ಲಾದೇಶ ತಂಡವನ್ನು ಮಣಿಸಿದ್ದ ಶ್ರೀಲಂಕಾ ಕೂಡ 2 ಅಂಕಗಳನ್ನು ಸಂಪಾದಿಸಿತ್ತು. ಆದರೆ ನೆಟ್ ರನ್ರೇಟ್ ಪಾಕಿಸ್ತಾನಕ್ಕಿಂತ ಕಡಿಮೆ ಇದ್ದಿದ್ದರಿಂದಾಗಿ ಭಾರತ- ಪಾಕಿಸ್ತಾನ ನಡುವಿನ ಕದನಕ್ಕೂ ಮುನ್ನ ಎರಡನೇ ಸ್ಥಾನದಲ್ಲಿತ್ತು. ಆದರೀಗ ಪಾಕ್ ತಂಡದ ನೆಟ್ ರನ್ರೇಟ್ ಮೈನಸ್ -1.892 ಕ್ಕೆ ಇಳಿದಿರುವುದರಿಂದ ಪ್ಲಸ್ ರನ್ ರೇಟ್ ಹೊಂದಿರುವ ಶ್ರೀಲಂಕಾ ಎರಡನೇ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇನ್ನು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇಶ -0.749 ನೆಟ್ ರನ್ರೇಟ್ ಹೊಂದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:18 am, Tue, 12 September 23