
ಹೊಸ ವರ್ಷದ ಮೊದಲ ದಿನವೇ ಕ್ರಿಕೆಟ್ ಲೋಕಕ್ಕೆ ದಿಗ್ಗಜ ಆಟಗಾರನೊಬ್ಬ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ (Usman Khawaja) ನಿವೃತ್ತಿ ಘೋಷಿಸಿದ್ದಾರೆ. ವಾಸ್ತವವಾಗಿ ಖವಾಜಾ ನಿವೃತ್ತಿಯ ಬಗ್ಗೆ ಬಹಳ ದಿನಗಳಿಂದಲೂ ವರದಿಗಳು ಹರಿದಾಡುತ್ತಿದ್ದವು. ಅದರಂತೆ ಈಗ ಖವಾಜಾ ಕ್ರಿಕೆಟ್ ಬದುಕಿನಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆಶಸ್ ಸರಣಿಯ (Ashes series) ನಡುವೆ ಖವಾಜಾ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದರ ಜೊತೆಗೆ ಮಾಜಿನ ಕ್ರಿಕೆಟಿಗರ ವಿರುದ್ಧ ಗಡುಗಿರುವ ಖವಾಜಾ ಜನಾಂಗೀಯ ನಿಂದನೆಯಂತಯ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಆಶಸ್ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಜನವರಿ 4 ರ ಭಾನುವಾರದಂದು ಸಿಡ್ನಿಯಲ್ಲಿ ಪ್ರಾರಂಭವಾಗಲಿದೆ. ಈ ಟೆಸ್ಟ್ ಆರಂಭಕ್ಕೆ ಇನ್ನು 2 ದಿನ ಬಾಕಿ ಇರುವಾಗ ಈ ನಿರ್ಧಾರ ಪ್ರಕಟಿಸಿರುವ ಖವಾಜಾ, ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. 2011 ರಲ್ಲಿ ಖವಾಜಾ ಯಾವ ಸ್ಥಳದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರೋ ಅದೇ ಸ್ಥಳದಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸುತ್ತಿದ್ದಾರೆ.
ನಿವೃತ್ತಿ ಘೋಷಣೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖವಾಜಾ, ಆಸ್ಟ್ರೇಲಿಯಾದ ಮಾಧ್ಯಮ ಮತ್ತು ಮಾಜಿ ಕ್ರಿಕೆಟಿಗರ ವಿರುದ್ಧ ವಾಗ್ದಾಳಿ ನಡೆಸಿದರು. ‘ನನ್ನ ಇಡೀ ವೃತ್ತಿಜೀವನದಂತೆಯೇ, ಈ ಸರಣಿಯ ಸಮಯದಲ್ಲಿಯೂ ನಾನು ಜನಾಂಗೀಯ ನಿಂದನೆಗೆ ಒಳಗಾಗಬೇಕಾಯಿತು. ನನಗೆ ಬೆನ್ನು ನೋವು ಇತ್ತು (ಪರ್ತ್ ಟೆಸ್ಟ್ ಸಮಯದಲ್ಲಿ), ಅದು ನನ್ನ ನಿಯಂತ್ರಣಕ್ಕೆ ಮೀರಿತ್ತು. ಆದರೆ ಮಾಧ್ಯಮ ಮತ್ತು ಮಾಜಿ ಕ್ರಿಕೆಟಿಗರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರು. ಟೆಸ್ಟ್ ಸರಣಿಗೆ ತಯಾರಿ ನಡೆಸುವುದನ್ನು ಬಿಟ್ಟು ಗಾಲ್ಫ್ ಆಡಲು ಹೋಗಿ ಗಾಯಗೊಂಡಿದ್ದಾರೆ ಎಂದು ನನ್ನ ಮೇಲೆ ಆರೋಪ ಹೊರಿಸಿದರು. ಇದು ಒಂದೆರಡು ದಿನದ ಕಥೆಯಾಗಿದ್ದರೆ ಸರಿ ಎನ್ನಬಹುದಿತ್ತು. ಆದರೆ ಟೆಸ್ಟ್ ಪಂದ್ಯ ಮುಗಿಯುವವೆಗೂ ನನ್ನ ಮೇಲೆ ವಾಗ್ದಾಳಿ ನಡೆಸಿದರು.
ಆದರೆ ನನ್ನಂತೆಯೇ ಟೆಸ್ಟ್‌ನ ಹಿಂದಿನ ದಿನ ಗಾಲ್ಫ್ ಆಡಿದ ಮತ್ತು ಗಾಯಗೊಂಡ ಹಲವಾರು ಆಟಗಾರರಿದ್ದಾರೆ. ಆದರೆ ಅವರ ಬಗ್ಗೆ ಯಾರೂ ಏನನ್ನೂ ಮಾತನಾಡುವುದಿಲ್ಲ. ಪಂದ್ಯದ ಹಿಂದಿನ ರಾತ್ರಿ 15 ಬಿಯರ್ ಕುಡಿದು ಗಾಯಗೊಂಡ ಆಟಗಾರರೂ ಇದ್ದಾರೆ. ಆದರೆ ಅವರ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಎತ್ತಲಾಗಿಲ್ಲ. ಆದರೆ ನಾನು ಗಾಯಗೊಂಡಾಗ ಮಾತ್ರ ನನ್ನ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ ಎಂದು ಖವಾಜಾ ಆರೋಪಗಳ ಸುರಿಮಳೆಗೈದು ವಿದಾಯ ಹೇಳಿದ್ದಾರೆ.
ವಾಸ್ತವವಾಗಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ, ಫೀಲ್ಡಿಂಗ್ ಮಾಡುವಾಗ ಬೆನ್ನು ನೋವಿನಿಂದಾಗಿ ಖವಾಜಾ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯಕ್ಕೂ ಮೊದಲು ಅವರು ಗಾಲ್ಫ್ ಆಡಿದ್ದು ಮತ್ತು ಪಂದ್ಯಕ್ಕೆ ಸರಿಯಾಗಿ ತಯಾರಿ ನಡೆಸದೆ ಇರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದ ಮಾಜಿ ಕ್ರಿಕೆಟಿಗರು, ‘ಖವಾಜಾ ತಂಡಕ್ಕೆ ಬದ್ಧರಾಗಿಲ್ಲ, ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ, ಅವರು ಗಾಲ್ಫ್ ಆಡುತ್ತಾರೆ, ಅವರು ಸ್ವಾರ್ಥಿ, ಅವರು ಸಾಕಷ್ಟು ಅಭ್ಯಾಸ ಮಾಡುವುದಿಲ್ಲ, ಸೋಮಾರಿ ಎಂದು ದೂರಿದ್ದರು.
ಖವಾಜಾ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, 39 ವರ್ಷದ ಪಾಕಿಸ್ತಾನಿ ಮೂಲದ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಸಿಡ್ನಿ ಟೆಸ್ಟ್‌ಗೆ ಮೊದಲು ಆಸ್ಟ್ರೇಲಿಯಾ ಪರ 87 ಪಂದ್ಯಗಳಲ್ಲಿ 157 ಇನ್ನಿಂಗ್ಸ್‌ಗಳಲ್ಲಿ 43 ಸರಾಸರಿಯಲ್ಲಿ 6206 ರನ್ ಗಳಿಸಿದ್ದರು. ಇದರಲ್ಲಿ 16 ಶತಕಗಳು ಮತ್ತು 28 ಅರ್ಧಶತಕಗಳು ಸೇರಿವೆ. 40 ಏಕದಿನ ಪಂದ್ಯಗಳಲ್ಲಿ, ಅವರು 2 ಶತಕಗಳು ಮತ್ತು 12 ಅರ್ಧಶತಕಗಳು ಸೇರಿದಂತೆ 1554 ರನ್ ಕಲೆಹಾಕಿದ್ದಾರೆ. ಅದೇ ರೀತಿ, ಅವರು 9 ಟಿ20ಪಂದ್ಯಗಳಲ್ಲಿ 241 ರನ್ ಬಾರಿಸಿದ್ದರು. ಪ್ರಸ್ತುತ ಆಶಸ್ ಸರಣಿಯಲ್ಲಿ ಆಡಿದ 5 ಇನ್ನಿಂಗ್ಸ್‌ಗಳಲ್ಲಿ 30.60 ಸರಾಸರಿಯಲ್ಲಿ 153 ರನ್ ಮಾತ್ರ ಕಲೆಹಾಕಿದ್ದು, ಇದರಲ್ಲಿ ಒಂದು ಅರ್ಧಶತಕವೂ ಸೇರಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Fri, 2 January 26