India vs Australia 4th Test: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ (Usman Khawaja) ಭರ್ಜರಿ ಶತಕ ಬಾರಿಸಿದ್ದಾರೆ. ಇದು ಕಳೆದ 13 ವರ್ಷಗಳಲ್ಲಿ ಆಸೀಸ್ ತಂಡದ ಎಡಗೈ ಬ್ಯಾಟ್ಸ್ಮನ್ರೊಬ್ಬರು ಭಾರತದಲ್ಲಿ ಬಾರಿಸಿದ ಮೊದಲ ಸೆಂಚುರಿ ಎಂಬುದೇ ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿದ್ದರು. ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಹಾಗೂ ಉಸ್ಮಾನ್ ಖ್ವಾಜಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 61 ರನ್ ಪೇರಿಸಿದ್ದ ವೇಳೆ ಟ್ರಾವಿಸ್ ಹೆಡ್ (32) ಅಶ್ವಿನ್ ಎಸೆತದಲ್ಲಿ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಆ ಬಳಿಕ ಬಂದ ಮಾರ್ನಸ್ ಲಾಬುಶೇನ್ (3) ಮೊಹಮ್ಮದ್ ಶಮಿಯ ಕರಾರುವಾಕ್ ದಾಳಿಗೆ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ಖ್ವಾಜಾ ಹಾಗೂ ಸ್ಟೀವ್ ಸ್ಮಿತ್ ತಂಡಕ್ಕೆ ಆಸರೆಯಾಗಿ ನಿಂತರು. ಅಲ್ಲದೆ 4ನೇ ವಿಕೆಟ್ಗೆ 79 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ದಾಳಿಗಿಳಿದ ರವೀಂದ್ರ ಜಡೇಜಾ ಸ್ಮಿತ್ (38) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಟೀಮ್ ಇಂಡಿಯಾ ಪ್ರಮುಖ ಯಶಸ್ಸು ತಂದುಕೊಟ್ಟರು.
ಇನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೀಟರ್ ಹ್ಯಾಂಡ್ಸ್ಕಾಂಬ್ (17) ಗೆ ಬೇಗನೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಇತ್ತ ನಾಲ್ಕು ವಿಕೆಟ್ ಕಳೆದುಕೊಂಡರೂ ಉಸ್ಮಾನ್ ಖ್ವಾಜಾ ಮಾತ್ರ ಟೀಮ್ ಇಂಡಿಯಾ ಬೌಲರ್ಗಳನ್ನು ಕಾಡಿದರು.
ಆರಂಭದಿಂದಲೇ ಕ್ರೀಸ್ ಕಚ್ಚಿ ನಿಂತಿದ್ದ ಖ್ವಾಜಾ ಭಾರತೀಯ ಬೌಲರ್ಗಳನ್ನು ಆತ್ಮವಿಶ್ವಾಸದಿಂದಲೇ ಎದುರಿಸಿದರು. ಅಷ್ಟೇ ಅಲ್ಲದೆ 246 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಭಾರತದ ಪಿಚ್ನಲ್ಲಿ ಆಸ್ಟ್ರೇಲಿಯಾದ ಎಡಗೈ ದಾಂಡಿಗರ ಶತಕದ ಬರವನ್ನು ಕೂಡ ಉಸ್ಮಾನ್ ಖ್ವಾಜಾ ನೀಗಿಸಿದರು.
ಇದಕ್ಕೂ ಮುನ್ನ 2010 ರಲ್ಲಿ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಎಡಗೈ ಬ್ಯಾಟ್ಸ್ಮನ್ ಮಾರ್ಕಸ್ ನಾರ್ತ್ ಶತಕ ಬಾರಿಸಿದ್ದರು. ಆ ಬಳಿಕ ಆಸೀಸ್ ತಂಡದ ಯಾವುದೇ ಎಡಗೈ ದಾಂಡಿಗ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿಲ್ಲ ಎಂಬುದೇ ಅಚ್ಚರಿ. ಇದೀಗ 13 ವರ್ಷಗಳ ದೀರ್ಘಕಾಯುವಿಕೆಗೆ ಶತಕದೊಂದಿಗೆ ಉಸ್ಮಾನ್ ಖ್ವಾಜಾ ವಿರಾಮ ಇಟ್ಟಿದ್ದಾರೆ.
ಇದಲ್ಲದೆ ಭಾರತದ ವಿರುದ್ಧ ಭಾರತದಲ್ಲಿ ಒಂದು ದಿನದಾಟ ಪೂರ್ತಿ ಬ್ಯಾಟ್ ಮಾಡಿದ ಹಿರಿಮೆಗೂ ಉಸ್ಮಾನ್ ಖ್ವಾಜಾ ಪಾತ್ರರಾಗಿದ್ದಾರೆ. ಕಳೆದ ಒಂದು ದಶಕದಲ್ಲಿ ಭಾರತದ ವಿರುದ್ಧ ತವರಿನಲ್ಲಿ ಯಾವುದೇ ಆಸ್ಟ್ರೇಲಿಯಾ ಆಟಗಾರ ಒಂದು ದಿನದಾಟ ಪೂರ್ತಿ ಕ್ರೀಸ್ ಕಚ್ಚಿ ನಿಂತಿಲ್ಲ. ಇದೀಗ ಉಸ್ಮಾಣ್ ಖ್ವಾಜಾ ಮೊದಲ ದಿನದಾಟದಲ್ಲಿ 251 ಎಸೆತಗಳನ್ನು ಎದುರಿಸಿ ಅಜೇಯರಾಗಿ ಉಳಿದಿದ್ದಾರೆ.
ಇನ್ನು ಉಸ್ಮಾನ್ ಖ್ವಾಜಾ ಅವರ ಈ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 255 ರನ್ ಪೇರಿಸಿದೆ. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ 2 ವಿಕೆಟ್ ಪಡೆದರೆ, ಅಶ್ವಿನ್ ಹಾಗೂ ಜಡೇಜಾ ತಲಾ 1 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ: IND vs AUS 4th Test: ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಗೆದ್ದರೆ ಲಾಭವೇನು? ಸೋತರೆ ನಷ್ಟವೇನು?
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಶುಭಮನ್ ಗಿಲ್ , ಚೇತೇಶ್ವರ ಪೂಜಾರ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ಶ್ರೀಕರ್ ಭರತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಉಮೇಶ್ ಯಾದವ್ , ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್ , ಸ್ಟೀವನ್ ಸ್ಮಿತ್ (ನಾಯಕ) ಪೀಟರ್ ಹ್ಯಾಂಡ್ಸ್ಕ್ಯಾಂಬ್ , ಕ್ಯಾಮರೊನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಮಿಚೆಲ್ ಸ್ಟಾರ್ಕ್ , ಮ್ಯಾಥ್ಯೂ ಕುಹ್ನೆಮನ್ , ಟಾಡ್ ಮರ್ಫಿ , ನಾಥನ್ ಲಿಯಾನ್.
Published On - 6:31 pm, Thu, 9 March 23