
ಪ್ರಸ್ತುತ ನಡೆಯುತ್ತಿರುವ 2025 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ (Syed Mushtaq Ali Trophy) ಆರಂಭಿಕ ಪಂದ್ಯಗಳಲ್ಲಿ ರನ್ ಗಳಿಸುವಲ್ಲಿ ಎಡವಿದ್ದ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಇದೀಗ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಶತಕ ಬಾರಿಸಿ ಸಂಚಲನ ಮೂಡಿಸಿದ್ದ ವೈಭವ್ ಸೂರ್ಯವಂಶಿ ಒಟ್ಟಾರೆ ಆರನೇ ಮತ್ತು ಈ ವರ್ಷ ಮೂರನೇ ಟಿ20 ಶತಕ ದಾಖಲಿಸಿದ್ದಾರೆ. ವೈಭವ್ ಸೂರ್ಯವಂಶಿ ಅವರು ಆಡಿದ ಬಹುತೇಕ ಪ್ರತಿಯೊಂದು ಟೂರ್ನಮೆಂಟ್, ಲೀಗ್ ಅಥವಾ ಸರಣಿಯಲ್ಲಿ ಶತಕ ಬಾರಿಸಿರುವುದು ಅವರ ಆಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕಳೆದ 14 ತಿಂಗಳುಗಳಲ್ಲಿ ವೈಭವ್ ಕೇವಲ ಒಂದು ಟೂರ್ನಮೆಂಟ್‌ನಲ್ಲಿ ಮಾತ್ರ ಶತಕ ಗಳಿಸುವಲ್ಲಿ ವಿಫಲರಾಗಿದ್ದಾರೆ.
14 ವರ್ಷದ ವೈಭವ್ ಸೂರ್ಯವಂಶಿ ಕಳೆದ ವರ್ಷ ಭಾರತದ 19 ವರ್ಷದೊಳಗಿನವರ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ಮೊದಲ ಶತಕ ಬಾರಿಸಿದ್ದರು. ನಂತರ 2024 ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ 19 ವರ್ಷದೊಳಗಿನವರ ವಿರುದ್ಧ ಟೆಸ್ಟ್ ಶತಕ ಸಿಡಿಸಿದ್ದರು.
ಮೇಲೆ ಹೇಳಿದಂತೆ ಈ ವರ್ಷದ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ವೈಭವ್, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ವೇಗದ ಶತಕ ಸಿಡಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಐಪಿಎಲ್‌ನಲ್ಲಿ ಶತಕ ಗಳಿಸಿದ ನಂತರ, ಜುಲೈ 2025 ರಲ್ಲಿ ಇಂಗ್ಲೆಂಡ್ ವಿರುದ್ಧದ ಅಂಡರ್-19 ಏಕದಿನ ಸರಣಿಯಲ್ಲಿ ಅದ್ಭುತ ಶತಕ ಬಾರಿಸಿದ್ದ ವೈಭವ್ 143 ರನ್‌ಗಳ ಬಿಗ್ ಇನ್ನಿಂಗ್ಸ್ ಆಡಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಟೆಸ್ಟ್ ಸರಣಿಯಲ್ಲಿಯೂ 113 ರನ್ ಬಾರಿಸಿದ್ದರು. ಇದು ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ಅವರ ಎರಡನೇ ಟೆಸ್ಟ್ ಶತಕವಾಗಿತ್ತು.
Vaibhav Suryavanshi: 14ನೇ ವಯಸ್ಸಿಗೆ ರಣಜಿ ತಂಡದ ಉಪನಾಯಕನಾದ ವೈಭವ್ ಸೂರ್ಯವಂಶಿ
ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ಮತ್ತು ಭಾರತ ಅಂಡರ್-19 ಪರ ಶತಕಗಳನ್ನು ಬಾರಿಸಿದ್ದ ಹದಿನಾಲ್ಕು ವರ್ಷದ ವೈಭವ್ ಸೂರ್ಯವಂಶಿ, ಆ ನಂತರ ನಡೆದಿದ್ದ ಎಮರ್ಜಿಂಗ್ ಏಷ್ಯಾಕಪ್‌ನಲ್ಲಿ ಬರೋಬ್ಬರಿ 144 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
ಇದೀಗ ಬಿಹಾರ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಬ್ಬರಿಸಿದ್ದಾರೆ. ಈ ದೇಶೀಯ ಟಿ20 ಟೂರ್ನಮೆಂಟ್‌ನಲ್ಲಿ ತಮ್ಮ ಮೊದಲ ಶತಕ ಬಾರಿಸಿರುವ ವೈಭವ್ ಸೂರ್ಯವಂಶಿ 61 ಎಸೆತಗಳಲ್ಲಿ ಅಜೇಯ 108 ರನ್ ಚಚ್ಚಿದರು.
ಅಂದರೆ, ಕಳೆದ 14 ತಿಂಗಳುಗಳಲ್ಲಿ, 14 ವರ್ಷದ ವೈಭವ್ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್, ಭಾರತ ಅಂಡರ್ -19, ಭಾರತ ಎ ಮತ್ತು ಬಿಹಾರವನ್ನು ಪ್ರತಿನಿಧಿಸಿದ್ದಲ್ಲದೆ, ಈ ತಂಡಗಳ ಪರವಾಗಿ ಶತಕಗಳನ್ನು ಬಾರಿಸಿದ್ದಾರೆ. ಒಟ್ಟಾರೆ ಈ 14 ತಿಂಗಳುಗಳಲ್ಲಿ ವೈಭವ್ ಶತಕ ಗಳಿಸದ ಏಕೈಕ ಪಂದ್ಯಾವಳಿ ಕಳೆದ ವರ್ಷದ ಅಂಡರ್ -19 ಏಷ್ಯಾ ಕಪ್ ಆಗಿತ್ತು. ಇದೀಗ ಈ ವರ್ಷದ ಅಂಡರ್ -19 ಏಷ್ಯಾಕಪ್‌ನಲ್ಲಿ ವೈಭವ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Tue, 2 December 25