Venkatesh Iyer: ಭಾರತ ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರಾ ವೆಂಕಟೇಶ್ ಅಯ್ಯರ್?; ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ
India vs New Zealand 1st T20: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಇಂದು ಜೈಪುರದಲ್ಲಿ ನಡೆಯಲಿದೆ. ಭಾರತ ತಂಡದಲ್ಲಿ ಯಾರೆಲ್ಲಾ ಸ್ಥಾನ ಗಿಟ್ಟಿಸಿಕೊಳ್ಳಬಹುದು? ಇಲ್ಲಿದೆ ಮಾಹಿತಿ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಇಂದು (ನವೆಂಬರ್ 17) ಜೈಪುರದಲ್ಲಿ ಆರಂಭಗೊಳ್ಳಲಿದೆ. ಹಲವು ಹೊಸತನಗಳೊಂದಿಗೆ ಭಾರತ ಕಣಕ್ಕಿಳಿಯಲಿದ್ದು, ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಕಾರಣ, ರಾಹುಲ್ ದ್ರಾವಿಡ್ ಕೋಚ್ ಆಗಿ ಹಾಗೂ ರೋಹಿತ್ ಶರ್ಮಾ ಟಿ20 ಕ್ರಿಕೆಟ್ ಕಪ್ತಾನನಾಗಿ ಹೊಸ ಪಯಣ ಆರಂಭಿಸಲಿದ್ದಾರೆ. ಈ ಜೋಡಿಗೆ ಈ ಸರಣಿ ಮೊದಲ ಅಗ್ನಿ ಪರೀಕ್ಷೆಯಾಗಿದ್ದು, ಅದನ್ನು ಹೇಗೆ ನಿರ್ವಹಿಸಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ. ಸದ್ಯ ವಿಶ್ವ ಕ್ರಿಕೆಟ್ನ ಮೂರೂ ಮಾದರಿಗಳಲ್ಲಿ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ನ್ಯೂಜಿಲೆಂಡ್ ವಿರುದ್ಧ ಭಾರತ ತನ್ನ ಯುವ ಪಡೆಯನ್ನು ಕಣಕ್ಕಿಳಿಸಿ, ಸಾಮರ್ಥ್ಯ ಪರೀಕ್ಷಿಸಲಿದೆ. ಈ ಯುವ ಪಡೆಯಲ್ಲಿ ಯಾರೆಲ್ಲಾ ಸ್ಥಾನ ಗಿಟ್ಟಿಸಲಿದ್ದಾರೆ? ಐಪಿಎಲ್ನಲ್ಲಿ ಗಮನ ಸೆಳೆದ ಪ್ರತಿಭೆಗಳಲ್ಲಿ ಯಾರಿಗೆ ತಂಡದ ಕ್ಯಾಪ್ ದೊರೆಯಲಿದೆ? ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ ಮಾಡಲಿದ್ದಾರಾ ಮೊದಲಾದ ಪ್ರಶ್ನೆಗಳು ಅಭಿಮಾನಿಗಳಿಗೆ ಕಾಡುತ್ತಿದೆ. ಇಂದಿನ ಪಂದ್ಯಕ್ಕೆ ಆಡುವ 11ನಲ್ಲಿ ಜೋರಾಗಿ ಕೇಳಿಬರುತ್ತಿರುವ ಹೆಸರು ಪ್ರತಿಭಾವಂತ ಯುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್.
ಈ ಬಾರಿಯ ಐಪಿಎಲ್ನ ದುಬೈ ಆವೃತ್ತಿಯಲ್ಲಿ ಗುರುತಿಸಿಕೊಂಡು, ಹೆಸರು ಮಾಡಿದ ಆಟಗಾರ ವೆಂಕಟೇಶ್ ಅಯ್ಯರ್. ಅವರಿಗಿರುವ ಬಲುದೊಡ್ಡ ಪ್ಲಸ್ ಎಂದರೆ ಆಲ್ರೌಂಡರ್ ಎಂಬುದು. ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಕೂಡ ಇದೇ ಅವರಿಗಿರುವ ಬಹುದೊಡ್ಡ ಬಲ. ಮಧ್ಯಮ ವೇಗದಲ್ಲಿ ಬೌಲಿಂಗ್ ಹಾಗೂ ಹೊಡೆ ಬಡಿ ಆಟಗಾರನಾಗಿ ಮಿಂಚಿರುವ ವೆಂಕಟೇಶ್ ಅಯ್ಯರ್ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ. ಆದ್ದರಿಂದಲೇ ಉಳಿದ ಆಟಗಾರರಿಗಿಂತ ಆಡುವ ಪಟ್ಟಿಯಲ್ಲಿ ಅವರ ಹೆಸರು ಜೋರಾಗಿ ಕೇಳಿಬರುತ್ತಿದೆ.
ಯಾವ ಕ್ರಮಾಂಕದಲ್ಲಿ ಯಾರು ಕಾಣಿಸಿಕೊಳ್ಳಬಹುದು? ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಈಗಾಗಲೇ ಟಿ20ಯಲ್ಲಿ ಆರಂಭಿಕ ಬ್ಯಾಟರ್ಗಳಾಗಿ ಗುರುತಿಸಿಕೊಂಡಿದ್ದು, ಇಲ್ಲೂ ಅದೇ ಸ್ಥಾನವನ್ನು ನಿರ್ವಹಿಸುವ ಸಾಧ್ಯತೆ ಇದೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ, ಇಶಾನ್ ಕಿಶನ್ ಅಥವಾ ರುತುರಾಜ್ ಗಾಯಕ್ವಾಡ್ ಆಡುವ ಸಾಧ್ಯತೆ ಇದ್ದು, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ. ತಂಡ ಹೆಚ್ಚು ಗಮನ ಹರಿಸಿರುವುದು 5 ಹಾಗೂ 6ನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎಂಬುದರ ಬಗ್ಗೆ.
5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಆಲ್ರೌಂಡರ್ ಆಗಿರುವ ವೆಂಕಟೇಶ್ ಅಯ್ಯರ್ ಆಡುವ ಸಾಧ್ಯತೆ ಇದೆ. ವೆಂಕಟೇಶ್ ಅಯ್ಯರ್ ಅಲ್ಲದೇ, ಶ್ರೇಯಸ್ ಅಯ್ಯರ್ ಅಥವಾ ರುತುರಾಜ್ ಗಾಯಕ್ವಾಡ್ ಹೆಸರೂ ಈ ಸ್ಥಾನಕ್ಕೆ ಕೇಳಿಬರುತ್ತಿದೆ. ಆದರೆ ಪೇಸ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಸಾಮರ್ಥ್ಯವಿರುವ ವೆಂಕಟೇಶ್ ಅಯ್ಯರ್ ಪರ ತಂಡ ಒಲವು ತೋರಿಸುವ ಸಾಧ್ಯತೆ ಹೆಚ್ಚಿದೆ. ಆರನೇ ಕ್ರಮಾಂಕದಲ್ಲಿ ರಿಷಬ್ ಪಂತ್ ಆಡಲಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ರವೀಂದ್ರ ಜಡೇಜಾ ಸ್ಥಾನವನ್ನು ಅಕ್ಷರ್ ಪಟೇಲ್ ತುಂಬಲಿದ್ದು, ಅವರ ಎಡಗೈ ಸ್ಪಿನ್ ತಂಡಕ್ಕೆ ಸಮತೋಲನ ನೀಡಬಹುದು. ಅವರ ನಂತರದಲ್ಲಿ ರವಿಚಂದ್ರನ್ ಅಶ್ವಿನ್ ಕಾಣಿಸಿಕೊಳ್ಳಲಿದ್ದಾರೆ. ಜಸ್ಪ್ರೀತ್ ಬುಮ್ರಾ ಹಾಗೂ ಮಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ತಂಡದ ಬೌಲಿಂಗ್ ಮುನ್ನಡೆಸುವ ಸಾಧ್ಯತೆ ಇದೆ. ಅಥವಾ ತಂಡ ಹೊಸ ಪ್ರಯತ್ನಕ್ಕೆ ಮುಂದಾಗಿ, ಮೊಹಮ್ಮದ್ ಸಿರಾಜ್ ಹಾಗೂ ದೀಪಕ್ ಚಾಹರ್ ವೇಗದ ಬೌಲಿಂಗ್ ವಿಭಾಗದ ಹೊಣೆ ಹೊತ್ತರೂ ಹೊರಬಹುದು. ಯಜುವೇಂದ್ರ ಚಾಹಲ್ ಅಥವಾ ಆವೇಶ್ ಖಾನ್ ಹನ್ನೊಂದನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಬಹುದು.
ಭಾರತದ ಸಂಭಾವ್ಯ ಪ್ಲೇಯಿಂಗ್ 11 ಇಂತಿದೆ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ಇಶಾನ್ ಕಿಶನ್/ ರುತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್/ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್/ ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್/ ಆವೇಶ್ ಖಾನ್
ಇದನ್ನೂ ಓದಿ:
IND vs NZ: ನ್ಯೂಜಿಲೆಂಡ್-ಭಾರತ ಮೊದಲ ಟಿ20: ಪಂತ್ಗೆ ಚಾನ್ಸ್ ಸಿಗೋದು ಡೌಟ್, ಯಾಕೆ ಗೊತ್ತಾ?