ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ಪಾಕಿಸ್ತಾನ ತಂಡಕ್ಕೆ ಯಾವುದೇ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಈ ಬಾರಿಯ ವಿಶ್ವಕಪ್ ಗೆಲ್ಲುವ ಪ್ರಮುಖ ತಂಡಗಳ ಪೈಕಿ ಸ್ಥಾನ ಪಡೆದು, ಟೂರ್ನಿಗೆ ಎಂಟ್ರಿಕೊಟ್ಟಿದ್ದ ಪಾಕ್ ಪಡೆ ಸೋಲಿನ ಸುಳಿಗೆ ಸಿಲುಕಿದೆ. ಅದರಲ್ಲೂ ಅಫ್ಘಾನಿಸ್ತಾನ (Pakistan vs Afghanistan) ವಿರುದ್ಧದ ಸೋಲು ಬಾಬರ್ ಪಡೆಗೆ ತೀವ್ರ ಆಘಾತ ನೀಡಿದೆ. ಒಂದೆಡೆ ಅಷ್ಟು ಬಲಿಷ್ಠವಲ್ಲದ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಸೋತಿರುವುದು ಟೀಕಕಾರರ ಬಾಯಿಗೆ ಆಹಾರವಾಗಿದ್ದರೆ, ಇನ್ನೊಂದೆಡೆ ಅಫ್ಘಾನ್ ವಿರುದ್ಧದ ಸೋಲು ಪಾಕ್ ತಂಡದ (Pakistan Cricket Team ) ಸೆಮಿಫೈನಲ್ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಸೋಲು ಪಾಕಿಸ್ತಾನಕ್ಕೆ ಸತತ ಮೂರನೇ ಸೋಲಾಗಿದ್ದು, ಭಾರತ, ಆಸ್ಟ್ರೇಲಿಯಾ ನಂತರ ಇದೀಗ ಅಫ್ಘಾನಿಸ್ತಾನ ವಿರುದ್ಧವೂ ಸೋಲು ಅನುಭವಿಸಿದೆ. ಹೀಗಾಗಿ, ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಆದರೆ ಈ ನಡುವೆ ಪಾಕ್ ತಂಡ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಬಾರದು ಎಂಬ ಶಾಕಿಂಗ್ ಹೇಳಿಕೆಯನ್ನು ತಂಡದ ಮಾಜಿ ಸ್ಟಾರ್ ವಿಕೆಟ್ ಕೀಪರ್ ನೀಡಿದ್ದು, ಎಲ್ಲರನ್ನು ಅಚ್ಚರಿಗೊಳಿಸಿದೆ.
ಒಂದು ಅಂದಾಜಿನ ಪ್ರಕಾರ, ಮೊದಲ 5 ಪಂದ್ಯಗಳ ನಂತರ, ಬಾಬರ್ ಪಡೆ ಸೆಮಿಫೈನಲ್‌ಗೆ ಹೋಗುವ ಸಾಧ್ಯತೆ ಕೇವಲ 8 ಪ್ರತಿಶತದಷ್ಟು ಮಾತ್ರ. ಇದು ಪಾಕಿಸ್ತಾನಿ ತಂಡ ಮತ್ತು ಅದರ ಅಭಿಮಾನಿಗಳಿಗೆ ಇನ್ನಿಲ್ಲದ ನೋವು ನೀಡಿದೆ. ಇದೆಲ್ಲದರ ನಡುವೆ ಪಾಕಿಸ್ತಾನ ಪರ 268 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಕಮ್ರಾನ್ ಅಕ್ಮಲ್, ಪಾಕಿಸ್ತಾನದ ಟಿವಿ ಚಾನೆಲ್‌ನಲ್ಲಿ ಕುಳಿತು ತಂಡದ ಬಗ್ಗೆ ನೀಡಿರುವ ಹೇಳಿಕೆ ಪಾಕ್ ಕ್ರಿಕೆಟ್ನಲ್ಲಿ ತಲ್ಲಣ ಮೂಡಿಸಿದೆ. ತಂಡದ ಬಗ್ಗೆ ಮಾತನಾಡಿರುವ ಅಕ್ಮಲ್, ‘ಪಾಕಿಸ್ತಾನ ಮುಂದಿನ ನಾಲ್ಕು ಪಂದ್ಯಗಳನ್ನು ಗೆಲ್ಲಬಾರದು’ ಎಂದಿದ್ದಾರೆ.
PAK vs AFG, ICC World Cup: ಅಫ್ಘಾನ್ ವಿರುದ್ಧ ಸೋತ ಪಾಕಿಸ್ತಾನಕ್ಕೆ ಸೆಮಿ ಫೈನಲ್ ತಲುಪುವ ಅವಕಾಶ ಇದೆಯೇ?
ಪಾಕಿಸ್ತಾನ ಪರ 53 ಟೆಸ್ಟ್, 157 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿರುವ ಕಮ್ರಾನ್ ಅಕ್ಮಲ್ ಹೀಗೆ ಹೇಳಲು ಕಾರಣವೂ ಇದ್ದು, ಅವರ ಪ್ರಕಾರ ಪಾಕ್ ತಂಡ ಉಳಿದ ನಾಲ್ಕೂ ಪಂದ್ಯಗಳನ್ನು ಸೋತರೆ ಮುಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಸುಧಾರಣೆ ತರಬಹುದಾಗಿದೆ. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ಅನ್ನು ಸರಿಪಡಿಸಬೇಕಾದರೆ ಮುಂದಿನ ಯಾವುದೇ ಪಂದ್ಯವನ್ನು ಗೆಲ್ಲಬಾರದು ಮತ್ತು ಅಗ್ರ 4 ರೊಳಗೆ ತಲುಪಬಾರದು ಎಂಬುದಾಗಿದೆ.
ಕಮ್ರಾನ್ ಹೀಗೆ ಹೇಳಿದ ಕೂಡಲೇ ಶೋನಲ್ಲಿ ಕೋಲಾಹಲ ಉಂಟಾಯಿತು. ಈ ವಿಚಾರವಾಗಿ ಕಾರ್ಯಕ್ರಮದ ನಿರೂಪಕ ಕಮ್ರಾನ್ ಅಕ್ಮಲ್ ಜತೆ ಘರ್ಷಣೆಗೆ ಮುಂದಾದರು. ಪಾಕಿಸ್ತಾನ ಸೋಲುವುದನ್ನು ನೋಡಲು ಸಾಧ್ಯವಿಲ್ಲ. ನೀವು ಇದನ್ನು ಹೇಗೆ ಹೇಳುತ್ತೀರಿ? ಎಂದು ಪ್ರಶ್ನಿಸಿದರು.
Kamran Akmal 🗣️
“Agar Pakistan ki cricket theek karni hai tau ye agle koi Matches na jeetain aur Top 4 Mian na phonchain” #PakistanCricket #CWC23INDIA
— M (@anngrypakiistan) October 24, 2023
ಆದರೆ, ತನ್ನ ಮಾತಿಗೆ ಸಮಜಾಯಿಶಿ ನೀಡಿದ ಕಮ್ರಾನ್, ಪಾಕ್ ತಂಡ ಇಲ್ಲಿಂದ ಗೆದ್ದು ಸೆಮಿಫೈನಲ್ ತಲುಪಿದರೆ ಅವರಲ್ಲಿ ಅಹಂ ಹೆಚ್ಚುತ್ತದೆ. ಆಗ ಯಾರೂ ಏನನ್ನೂ ಹೇಳುವುದಿಲ್ಲ ಮತ್ತು ಪಾಕಿಸ್ತಾನ ಕ್ರಿಕೆಟ್‌ನ ಸ್ಥಿತಿ ಹಾಗೆಯೇ ಇರುತ್ತದೆ. ಹೀಗಾಗಿ ಪಾಕ್ ತಂಡ ಮುಂದಿನ ಎಲ್ಲಾ ಪಂದ್ಯಗಳನ್ನು ಸೋತರೆ ಪಾಕ್ ಕ್ರಿಕೆಟ್‌ಗೆ ಸ್ವಲ್ಪ ಲಾಭ ಸಿಗಬಹುದು ಮತ್ತು ಸುಧಾರಣೆ ಕಾಣಬಹುದು ಎಂದು ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:48 am, Wed, 25 October 23