
ವಿಜಯ್ ಹಜಾರೆ ಟ್ರೋಫಿಯ 2025-26 (Vijay Hazare Trophy 2025-26) ರ ಆವೃತ್ತಿ ಡಿಸೆಂಬರ್ 24 ರಿಂದ ಅಬ್ಬರದಿಂದ ಆರಂಭವಾಗಿದೆ. ಮೊದಲ ಸುತ್ತಿನ ಮೊದಲ ದಿನವೇ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಟೂರ್ನಿಯ ಮೊದಲ ದಿನವೇ ಒಟ್ಟು 22 ಶತಕಗಳು ದಾಖಲಾಗಿವೆ. ಇವುಗಳಲ್ಲಿ ಇಬ್ಬರು ಭಾರತೀಯ ದಂತಕಥೆಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಶತಕಗಳು ಸೇರಿರುವುದು ವಿಶೇಷ. ಬಹಳ ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದ ರೋಹಿತ್ ಹಾಗೂ ವಿರಾಟ್ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ತಮ್ಮ ತಂಡಗಳಿಗೆ ಜಯ ತಂದುಕೊಟ್ಟರು. ಇವರಿಬ್ಬರಲ್ಲದೆ, ಇನ್ನು 20 ಆಟಗಾರರು ಶತಕದ ಇನ್ನಿಂಗ್ಸ್ ಆಡಿದರು.
ಜೈಪುರದಲ್ಲಿ ನಡೆದ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಭರ್ಜರಿ 155 ರನ್‌ಗಳ ಇನ್ನಿಂಗ್ಸ್ ಆಡಿದರು. ಇತ್ತ ಬೆಂಗಳೂರಿನಲ್ಲಿ ನಡೆದ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಆಡಿದ್ದ ವಿರಾಟ್ ಕೊಹ್ಲಿ 131 ರನ್ ಬಾರಿಸಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹಾಗೆಯೇ ಬಿಹಾರ ಮತ್ತು ಅರುಣಾಚಲ ಪ್ರದೇಶ ನಡುವಿನ ಪಂದ್ಯದಲ್ಲಿ ಒಂದೇ ತಂಡದ ಮೂವರು ಆಟಗಾರರು ಭರ್ಜರಿ ಶತಕ ಬಾರಿಸಿದರು. ಈ ಪಂದ್ಯದಲ್ಲಿ ಬಿಹಾರ ಪರ ಕಣಕ್ಕಿಳಿದಿದ್ದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಲಿಸ್ಟ್ ಎ ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರೆ, ಇದೇ ತಂಡದ ನಾಯಕ ಸಕಿಬುಲ್ ಗನಿ ಕೂಡ 32 ಎಸೆತಗಳಲ್ಲಿ ಶತಕ ಸಿಡಿಸಿದರು. ಇವರಿಬ್ಬರ ಜೊತೆಗೆ ಆಯುಷ್ ಲೋಹರುಕ ಕೂಡ 116 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಮೂವರ ಶತಕದ ಇನ್ನಿಂಗ್ಸ್ನಿಂದಾಗಿ ಬಿಹಾರ ತಂಡ 574 ರನ್ ಕಲೆಹಾಕುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿದೊಡ್ಡ ಮೊತ್ತ ಕಲೆಹಾಕಿದ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿತು.
ಮತ್ತೊಂದೆಡೆ, ಜಾರ್ಖಂಡ್‌ನ ಇಶಾನ್ ಕಿಶನ್ ಕೂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಕರ್ನಾಟಕ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಗಳಿಸಿ ಭಾರತದ ಎರಡನೇ ಅತಿ ವೇಗದ ಶತಕದ ದಾಖಲೆಯನ್ನು ಸೃಷ್ಟಿಸಿದರು. ಈ ಮೂವರ ಶತಕಗಳು ಭಾರತೀಯ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಮೂರು ವೇಗದ ಶತಕಗಳ ದಾಖಲೆಗಳನ್ನು ಮುರಿದವು. ಇಶಾನ್ ಕಿಶನ್ ಅವರ ಇನ್ನಿಂಗ್ಸ್‌ಗೆ ಪ್ರತಿಕ್ರಿಯೆಯಾಗಿ, ದೇವದತ್ ಪಡಿಕ್ಕಲ್ ಕೂಡ ಕರ್ನಾಟಕ ಪರ 147 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿ, ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಇನ್ನು ಒಡಿಶಾ ಮತ್ತು ಸೌರಾಷ್ಟ್ರ ನಡುವಿನ ಪಂದ್ಯದಲ್ಲಿ ಒಡಿಶಾ ತಂಡದ ಸ್ವಸ್ತಿಕ್ ಸಮಲ್ ದ್ವಿಶತಕ ಸಿಡಿಸಿ ಮಿಂಚಿದರು. ತಮ್ಮ ಇನ್ನಿಂಗ್ಸ್ನಲ್ಲಿ 169 ಎಸೆತಗಳನ್ನು ಎದುರಿಸಿದ ಸ್ವಸ್ತಿಕ್ ಸಮಲ್, 21 ಬೌಂಡರಿ ಮತ್ತು 8 ಸಿಕ್ಸರ್ ಸೇರಿದಂತೆ 212 ರನ್ ಗಳಿಸಿ ಐತಿಹಾಸಿಕ ಇನ್ನಿಂಗ್ಸ್ ಆಡಿದರು. ಇವರ ಶತಕದಿಂದಾಗಿ ಒಡಿಶಾ ತಂಡವು 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 345 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡದ ಪರ ಸಮ್ಮರ್ ಗಜ್ಜರ್ ಕೂಡ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ರೋಹಿತ್, ಕೊಹ್ಲಿಯ ಶತಕಗಳ ಅಬ್ಬರ; ಬಿಸಿಸಿಐ ವಿರುದ್ಧ ಸಿಡಿದೆದ್ದ ಅಭಿಮಾನಿಗಳು
ಅರ್ಪಿತ್ ಭತೇವಾರಾ, ರಿಕಿ ಭುಯಿ, ಯಶ್ ದುಬೆ, ಸ್ನೇಹಲ್ ಕೌತಾಂಕರ್, ಶುಭಂ ಖಜುರಿಯಾ, ಕಿಶನ್ ಲಿಂಗ್ಡೋಹ್, ಅಮನ್ ಮೊಖಡೆ, ಹಿಮಾಂಶು ರಾಣಾ, ರವಿ ಸಿಂಗ್, ಬಿಪ್ಲಬ್ ಸಮಂತ್ರಾಯ್, ಧ್ರುವ ಶೋರೆ, ಫಿರೋಜಮ್ ಜೋತಿನ್ ಮತ್ತು ವಿಷ್ಣು ವಿನೋದ್ ಕೂಡ ಮೊದಲ ದಿನ ಶತಕದ ಇನ್ನಿಂಗ್ಸ್ ಆಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ