ಕ್ರಿಕೆಟ್ನಲ್ಲಿ ನೀವು ನಾನಾ ರೀತಿಯ ದಾಖಲೆಗಳ ಬಗ್ಗೆ ಕೇಳಿರುತ್ತೀರಿ, ಇಲ್ಲ ಓದಿರುತ್ತೀರಿ. ಆದರೆ ಕೆಲವೊಂದು ದಾಖಲೆಗಳು ಬಹಳ ಅಪರೂಪ. ಅಂತಹದೊಂದು ದಾಖಲೆ ಇದೀಗ ಎಲ್ಲರನ್ನು ನಿಬ್ಬೆರಗಾಗಿಸಿದೆ. ಇಂಗ್ಲೆಂಡ್‌ನಲ್ಲಿ ನಡೆದ ಕ್ಲಬ್ ಪಂದ್ಯವೊಂದರಲ್ಲಿ ಆರಂಭಿಕರಿಬ್ಬರು ಶತಕದ ಜೊತೆಯಾಟವಾಡಿದ್ದರು. ಅಚ್ಚರಿ ಎಂದರೆ ಅದರಲ್ಲಿ ಒಬ್ಬ ಆಟಗಾರನದ್ದೇ ನೂರು ರನ್ಗಳಿತ್ತು. ಅಂದರೆ ಸಹ ಆರಂಭಿಕ ಆಟಗಾರ ಖಾತೆ ತೆರೆಯುವ ಮೊದಲೇ ಮತ್ತೋರ್ವ ಆರಂಭಿಕ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು.
ಸಸೆಕ್ಸ್ ಜೂನಿಯರ್ ಕ್ರಿಕೆಟ್ ಫೆಸ್ಟಿವಲ್ ಟೂರ್ನಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೊರ್ಲಿ ತಂಡ 158 ರನ್ ಗಳ ಟಾರ್ಗೆಟ್ ನೀಡಿದೆ. ಈ ಗುರಿಯನ್ನು ಬೆನ್ನತ್ತಿದ್ದ ಹಾರ್ಶಮ್ ತಂಡದ ಪರ ಆರಂಭಿಕ ಆಟಗಾರ ಜೋ ವಿಲ್ಲಿಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಹೊರ್ಲಿ ಬೌಲರ್ಗಳ ಬೆಂಡೆತ್ತಿದ ವಿಲ್ಲಿಸ್ 9 ಸಿಕ್ಸರ್ ಮತ್ತು 11 ಬೌಂಡರಿಗಳ ಸಹಾಯದಿಂದ ಶತಕ ಬಾರಿಸಿದರು. ಅಲ್ಲದೆ ಮೊದಲ ವಿಕೆಟ್ಗೆ 110 ರನ್ಗಳ ಜೊತೆಯಾಟವಾಡಿದರು.
ಅಚ್ಚರಿಯೆಂದರೆ ಮತ್ತೋರ್ವ ಆರಂಭಿಕ ಆಟಗಾರ ಅಲ್ಫ್ರೆಡ್ ಹೈನ್ಸ್ ಈ ವೇಳೆ ಒಂದೇ ಒಂದು ರನ್ ಕಲೆಹಾಕಿರಲಿಲ್ಲ. ವಿಲ್ಲಿಸ್ 103 ರನ್ ಬಾರಿಸಿದ್ದರೆ, ಹೈನ್ಸ್ ಶೂನ್ಯದಲ್ಲೇ ಉಳಿದಿದ್ದರು. ಅಂದರೆ ಅಲ್ಫ್ರೆಡ್ ಹೈನ್ಸ್ ಖಾತೆ ತೆರೆಯುವ ಮುನ್ನವೇ ವಿಲ್ಲಿಸ್ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದ್ದರು. ಇನ್ನು ವಿಲ್ಲಿಸ್ ಅವರ ಈ ಭರ್ಜರಿ ಬ್ಯಾಟಿಂಗ್ ಪರಿಣಾಮ ಹಾರ್ಶಮ್ ತಂಡವು 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
This is unbelievable ?
Joe Willis scored 103 for @horshamcc U18s yesterday….
When Joe reached his century with a six, his opening partner was still on 0.
An opening partnership of 110 (Willis 103, Haines 0*)
Scorecard: https://t.co/hALG6gPFik pic.twitter.com/T4Vv8840ki
— Cricket District ? (@cricketdistrict) July 28, 2022
ಯಾರು ಈ ವಿಲ್ಲಿಸ್?
ಸಸೆಕ್ಸ್ ಜೂನಿಯರ್ ಕ್ರಿಕೆಟ್ ಫೆಸ್ಟಿವಲ್ ಟೂರ್ನಿಯ ಮೂಲಕ ಇಂಗ್ಲೆಂಡ್‌ನಲ್ಲಿ ಜೋ ವಿಲ್ಲಿಸ್ ಎನ್ನುವ ಹೊಸ ಯುವ ಪ್ರತಿಭೆ ಉದಯವಾಗಿದೆ. ಏಕೆಂದರೆ ಈ ಟೂರ್ನಿಯ 10 ಪಂದ್ಯಗಳಲ್ಲಿ 68ಕ್ಕೂ ಅಧಿಕ ಸರಾಸರಿಯಲ್ಲಿ ವಿಲ್ಲಿಸ್ 689 ರನ್ ಗಳಿಸಿದ್ದಾರೆ. ಈ ವೇಳೆ 2 ಶತಕ ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ, ವಿಲ್ಲಿಸ್ ಅವರ ಭರ್ಜರಿ ಪ್ರದರ್ಶನದ ಆಧಾರದ ಮೇಲೆ ಹಾರ್ಶಮ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸದ್ಯ ದೇಶೀಯ ಅಂಗಳದಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿರುವ ಜೋ ವಿಲ್ಲಿಸ್ ಮುಂಬರುವ ದಿನಗಳಲ್ಲಿ ಇಂಗ್ಲೆಂಡ್ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
Published On - 1:56 pm, Sat, 30 July 22