Sharukh Khan: 6,6,6,6,6: ರಣರೋಚಕ ಪಂದ್ಯದಲ್ಲಿ ಶಾರೂಖ್ ಖಾನ್ ಸಿಡಿಲಬ್ಬರ..!

TNPL Qualifier 2: ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲೈಕಾ ಕೋವೈ ಕಿಂಗ್ಸ್​ ತಂಡ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ 10 ಓವರ್​ಗಳಲ್ಲಿ ಲೈಕಾ ತಂಡ ಕಲೆಹಾಕಿದ್ದು ಕೇವಲ 73 ರನ್​ ಮಾತ್ರ.

Sharukh Khan: 6,6,6,6,6: ರಣರೋಚಕ ಪಂದ್ಯದಲ್ಲಿ ಶಾರೂಖ್ ಖಾನ್ ಸಿಡಿಲಬ್ಬರ..!
Sharukh Khan
TV9kannada Web Team

| Edited By: Zahir PY

Jul 30, 2022 | 12:53 PM

ಕೊಯಮತ್ತೂರಿನ ಎಸ್‌ಎನ್‌ಆರ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ (TNPL 2022) ನಡೆದ ಎರಡನೇ ಕ್ವಾಲಿಫೈಯರ್‌ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಲೈಕಾ ಕೋವೈ ಕಿಂಗ್ಸ್ ಮತ್ತು ನೆಲ್ಲೈ ರಾಯಲ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಲೈಕಾ ತಂಡದ ನಾಯಕ ಶಾರೂಖ್ ಖಾನ್ (Sharukh Khan) ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ನೆಲ್ಲೈ ರಾಯಲ್ ಕಿಂಗ್ಸ್​ ತಂಡವು ಸ್ಪೋಟಕ ಆರಂಭ ಪಡೆಯಿತು.

ತಂಡದ ಪರ ಬಾಬಾ ಅಪರಜಿತ್ ಮತ್ತು ಸಂಜಯ್ ಯಾದವ್ ಮತ್ತೊಮ್ಮೆ ಅಬ್ಬರಿಸಿದರು. ಪರಿಣಾಮ 16 ಓವರ್ ಮುಕ್ತಾಯದ ವೇಳೆ ನೆಲ್ಲೈ ತಂಡದ ಸ್ಕೋರ್ 160 ರ ಗಡಿದಾಟಿತು. ಈ ಹಂತದಲ್ಲಿ ಅಪರಜಿತ್ 44 ರನ್​ಗಳಿಸಿ ಔಟಾದರು. ಮತ್ತೊಂದೆಡೆ ಸಂಜಯ್ ಯಾದವ್ ಅಬ್ಬರ ಮುಂದುವರೆಯಿತು. ಪರಿಣಾಮ 7 ಸಿಕ್ಸ್​ನೊಂದಿಗೆ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಬಳಿಕ ಬಂದ ಅಜಿತೇಶ್ ಕೇವಲ  13 ಎಸೆತಗಳಲ್ಲಿ  5  ಭರ್ಜರಿ ಸಿಕ್ಸ್​ನೊಂದಿಗೆ ಸಿಡಿಲಬ್ಬರದ 38 ರನ್​ ಬಾರಿಸಿದರು. ಪರಿಣಾಮ ನೆಲ್ಲೈ ರಾಯಲ್ ಕಿಂಗ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್​ ಕಲೆಹಾಕಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲೈಕಾ ಕೋವೈ ಕಿಂಗ್ಸ್​ ತಂಡ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ 10 ಓವರ್​ಗಳಲ್ಲಿ ಲೈಕಾ ತಂಡ ಕಲೆಹಾಕಿದ್ದು ಕೇವಲ 73 ರನ್​ ಮಾತ್ರ. ಅದಾಗಲೇ 3 ವಿಕೆಟ್​ ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾಗಿದ್ದು ಸಾಯಿ ಸುದರ್ಶನ್. 33 ಎಸೆತಗಳನ್ನು ಎದುರಿಸಿದ ಸುದರ್ಶನ್ 2 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 53 ರನ್ ಬಾರಿಸಿದರು. ಅದರಂತೆ 15 ಓವರ್​ಗಳಲ್ಲಿ ತಂಡವು 5 ವಿಕೆಟ್​ ನಷ್ಟಕ್ಕೆ 142 ರನ್ ಕಲೆಹಾಕಿತು.

ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಶಾರೂಖ್ ಕೊನೆಯ 4 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು. ಕಣಕ್ಕಿಳಿಯುತ್ತಿದ್ದಂತೆ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ ಶಾರೂಖ್ ರಾಯಲ್ ಕಿಂಗ್ಸ್ ತಂಡದ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಶಾರೂಖ್ ಖಾನ್ ಬ್ಯಾಟ್​ನಿಂದ ಸಿಕ್ಸ್ -ಫೋರ್​ಗಳ ಸುರಿಮಳೆಯಾಯಿತು. ಅದರಂತೆ ಕೊನೆಯ ಓವರ್​ನಲ್ಲಿ ಕೋವೈ ಕಿಂಗ್ಸ್​ ತಂಡಕ್ಕೆ ಗೆಲ್ಲಲು 16 ರನ್​ಗಳ ಅವಶ್ಯಕತೆಯಿತ್ತು.

ಶ್ರೀ ನಿರಂಜನ್ ಎಸೆತದ ಅಂತಿಮ ಓವರ್​ನ ಮೊದಲ ಎಸೆತದಲ್ಲೇ ಶಾರೂಖ್ ಖಾನ್ ಭರ್ಜರಿ ಬೌಂಡರಿ ಬಾರಿಸಿದರು. 2ನೇ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮೂರನೇ ಎಸೆತದಲ್ಲಿ ಮತ್ತೊಂದು ಫೋರ್ ಸಿಡಿಸಿದರು. 4ನೇ ಎಸೆತದಲ್ಲಿ ಶಾರೂಖ್ ಖಾನ್ ಸಿಂಗಲ್ ಓಡಿದರು.

ಕೊನೆಯ 2 ಎಸೆತಗಳಲ್ಲಿ 1 ರನ್​ ಅವಶ್ಯಕತೆಯಿತ್ತು. ಈ ಹಂತದಲ್ಲಿ ಮನೀಷ್ ರವಿ ಬೌಲ್ಡ್ ಮಾಡಿ ನಿರಂಜನ್ ಪಂದ್ಯವನ್ನು ಅಂತಿಮ ಎಸೆತಕ್ಕೆ ಕೊಂಡೊಯ್ದರು. ಕೊನೆಯ ಎಸೆತದಲ್ಲಿ 1 ರನ್​ ಬೇಕಿತ್ತು. ಕ್ರೀಸ್​ಗೆ ಆಗಮಿಸಿದ ಅಜಿತ್ ರಾಮ್ 1 ರನ್​ ಕಲೆಹಾಕವುದರೊಂದಿಗೆ ಲೈಕಾ ಕೋವೈ ಕಿಂಗ್ಸ್​ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ಕೇವಲ 24 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 58 ರನ್​ ಬಾರಿಸಿದ ಶಾರೂಖ್ ಖಾನ್ ಗೆಲುವಿನ ರುವಾರಿ ಎನಿಸಿಕೊಂಡರು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಗೆಲುವಿನೊಂದಿಗೆ ಲೈಕಾ ಕೋವೈ ಕಿಂಗ್ಸ್ ತಂಡವು ತಮಿಳುನಾಡು ಪ್ರೀಮಿಯರ್ ಲೀಗ್​ನ​ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆಪಕ್ ಸೂಪರ್ ಗಿಲ್ಲೀಸ್ ಹಾಗೂ ಲೈಕಾ ಕೋವೈ ಕಿಂಗ್ಸ್ ಮುಖಾಮುಖಿಯಾಗಲಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada