VIDEO: ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್

| Updated By: ಝಾಹಿರ್ ಯೂಸುಫ್

Updated on: Aug 16, 2023 | 11:02 PM

Rishabh Pant: ಡಿಸೆಂಬರ್ 30, 2022 ರ ಮುಂಜಾನೆ ರೂರ್ಕಿಯಿಂದ ನವದೆಹಲಿಯ ಮನೆಗೆ ತೆರಳುತ್ತಿದ್ದಾಗ ರಿಷಭ್ ಪಂತ್ ಅವರ ಕಾರು ಭೀಕರ ರಸ್ತೆ ಅಪಘಾತಕ್ಕೀಡಾಗಿತ್ತು. ಈ ಅವಘಡದಲ್ಲಿ ಸುಟ್ಟ ಗಾಯಗಳೊಂದಿಗೆ ಪಂತ್ ಅವರ ಕಾಲಿಗೆ ಗಂಭೀರ್ ಗಾಯವಾಗಿತ್ತು.

VIDEO: ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್
Rishabh Pant
Follow us on

ಟೀಮ್ ಇಂಡಿಯಾದ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ (Rishabh Pant) ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಪೂರ್ಣ ಪ್ರಮಾಣದ ಬ್ಯಾಟರ್​ ಆಗಿ ಕಣಕ್ಕಿಳಿದಿರುವುದು ವಿಶೇಷ. ಹೌದು, ಕರ್ನಾಟಕದ ವಿಜಯನಗರದಲ್ಲಿರುವ JSW ಪ್ಲಾಂಟ್​ನಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಅಭ್ಯಾಸವನ್ನು ಆರಂಭಿಸಿದ ಪಂತ್ ಈ ಬಾರಿ ಬ್ಯಾಟರ್​ ಆಗಿ ಕಣಕ್ಕಿಳಿದಿದ್ದಾರೆ. ಇದರೊಂದಿಗೆ ರಿಷಭ್ ಪಂತ್ ಗಾಯದಿಂದ ಚೇತರಿಸಿಕೊಂಡಿರುವುದು ಖಚಿತವಾಗಿದೆ.

ಅಪಘಾತದಿಂದ ಗಾಯಗೊಂಡಿದ್ದ ಪಂತ್:

ಡಿಸೆಂಬರ್ 30, 2022 ರ ಮುಂಜಾನೆ ರೂರ್ಕಿಯಿಂದ ನವದೆಹಲಿಯ ಮನೆಗೆ ತೆರಳುತ್ತಿದ್ದಾಗ ರಿಷಭ್ ಪಂತ್ ಅವರ ಕಾರು ಭೀಕರ ರಸ್ತೆ ಅಪಘಾತಕ್ಕೀಡಾಗಿತ್ತು. ಈ ಅವಘಡದಲ್ಲಿ ಸುಟ್ಟ ಗಾಯಗಳೊಂದಿಗೆ ಪಂತ್ ಅವರ ಕಾಲಿಗೆ ಗಂಭೀರ್ ಗಾಯವಾಗಿತ್ತು.

ಇದಾದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಂತ್ 7 ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿದಿದ್ದರು. ಇದೀಗ ಮತ್ತೆ ಪ್ಯಾಡ್ ತೊಟ್ಟು ಅಭ್ಯಾಸವನ್ನು ಶುರು ಮಾಡಿಕೊಂಡಿರುವುದು ಶುಭ ಸುದ್ದಿ ಎನ್ನಬಹುದು.

ಕಂಬ್ಯಾಕ್ ಯಾವಾಗ?

ರಿಷಭ್ ಪಂತ್ ಅವರು ಮುಂದಿನ ವರ್ಷ ಕಂಬ್ಯಾಕ್ ಮಾಡುವುದು ಖಚಿತ ಎನ್ನಲಾಗಿದೆ. ಈಗಾಗಲೇ ಚೇತರಿಸಿಕೊಂಡಿರುವ ಅವರು ಬ್ಯಾಟಿಂಗ್ ಅಭ್ಯಾಸ ಹಾಗೂ ಫಿಟ್​ನೆಸ್​ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲಿದ್ದಾರೆ. ಅಲ್ಲದೆ 2024 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರಿಷಭ್ ಪಂತ್ ಎಂದಿನಂತೆ ಬ್ಯಾಟ್ ಬೀಸುತ್ತಿರುವುದು ಕಾಣಬಹುದು. ಹೀಗಾಗಿ ಮುಂದಿನ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ಕಾಣಿಸಿಕೊಳ್ಳುವುದು ಕೂಡ ಖಚಿತ ಎನ್ನಬಹುದು.

ಇದನ್ನೂ ಓದಿ: IPL 2023: ಐಪಿಎಲ್​ನಿಂದ ಹೊರಬಿದ್ದ ರಿಷಭ್ ಪಂತ್​ಗೆ ಸಿಗಲಿದೆ 21 ಕೋಟಿ ರೂ.

ರಿಷಭ್ ಪಂತ್​ಗೆ ಸ್ಥಾನ ಖಚಿತ:

ಕಳೆದ 8 ತಿಂಗಳುಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರೂ ರಿಷಭ್ ಪಂತ್ ಸ್ಥಾನದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಯಾವುದೇ ಆಟಗಾರ ಮಿಂಚಿಲ್ಲ. ಇಲ್ಲಿ ಟೆಸ್ಟ್​ನಲ್ಲಿ ಕೆಎಸ್ ಭರತ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡರೆ, ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಕೀಪಿಂಗ್ ಗ್ಲೌಸ್ ತೊಟ್ಟಿದ್ದರು.

ಆದರೆ ಈ ಮೂವರು ಆಟಗಾರರು ಪಂತ್ ಅವರ ಸ್ಥಾನ ತುಂಬುವಂತಹ ಭರ್ಜರಿ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿಯೇ ರಿಷಭ್ ಪಂತ್ ಸಂಪೂರ್ಣ ಫಿಟ್​ನೆಸ್ ಸಾಧಿಸಿದ ಬೆನ್ನಲ್ಲೇ ಮತ್ತೆ ವಿಕೆಟ್ ಕೀಪರ್ ಆಗಿ ಟೀಮ್ ಇಂಡಿಯಾಗೆ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ.