Vijay Hazare Trophy 2021: ರಾಜಸ್ಥಾನ್ ವಿರುದ್ದ ಭರ್ಜರಿ ಜಯ: ಮುಂದಿನ ಹಂತಕ್ಕೇರಿದ ಕರ್ನಾಟಕ

| Updated By: ಝಾಹಿರ್ ಯೂಸುಫ್

Updated on: Dec 19, 2021 | 4:58 PM

Vijay Hazare Trophy 2021-22: ಮೊದಲ ವಿಕೆಟ್ ಪ್ರಸಿದ್ಧ್ ಕೃಷ್ಣ ಪಡೆದರೆ ಉಳಿದ ನಾಲ್ಕು ವಿಕೆಟ್​ಗಳನ್ನು ವಿಜಯ್ ಕುಮಾರ್ ವೈಶಾಖ್ ಉರುಳಿಸಿದ್ದರು. ಇದಾಗ್ಯೂ ಮತ್ತೊಂದೆಡೆ ರಾಜಸ್ಥಾನ್ ನಾಯಕ ದೀಪಕ್ ಹೂಡಾ ಮಾತ್ರ ಕ್ರೀಸ್ ಕಚ್ಚಿ ನಿಂತಿದ್ದರು.

Vijay Hazare Trophy 2021: ರಾಜಸ್ಥಾನ್ ವಿರುದ್ದ ಭರ್ಜರಿ ಜಯ: ಮುಂದಿನ ಹಂತಕ್ಕೇರಿದ ಕರ್ನಾಟಕ
Karnataka Team
Follow us on

ವಿಜಯ್ ಹಜಾರೆ ಟೂರ್ನಿ (Vijay Hazare Trophy 2021) ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಕರ್ನಾಟಕ (Karnataka vs Rajasthan) ತಂಡವು ರಾಜಸ್ಥಾನ್ ವಿರುದ್ದ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಕರ್ನಾಟಕ ತಂಡವು ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಕರ್ನಾಟಕ ಬೌಲರುಗಳು 20 ರನ್​ ಆಗುವಷ್ಟರಲ್ಲಿ 5 ವಿಕೆಟ್ ಉರುಳಿಸಿ ರಾಜಸ್ಥಾನ್​ಗೆ ಆರಂಭಿಕ ಆಘಾತ ನೀಡಿದ್ದರು.

ಮೊದಲ ವಿಕೆಟ್ ಪ್ರಸಿದ್ಧ್ ಕೃಷ್ಣ ಪಡೆದರೆ ಉಳಿದ ನಾಲ್ಕು ವಿಕೆಟ್​ಗಳನ್ನು ವಿಜಯ್ ಕುಮಾರ್ ವೈಶಾಖ್ ಉರುಳಿಸಿದ್ದರು. ಇದಾಗ್ಯೂ ಮತ್ತೊಂದೆಡೆ ರಾಜಸ್ಥಾನ್ ನಾಯಕ ದೀಪಕ್ ಹೂಡಾ ಮಾತ್ರ ಕ್ರೀಸ್ ಕಚ್ಚಿ ನಿಂತಿದ್ದರು. ಏಕಾಂಗಿಯಾಗಿ ಕರ್ನಾಟಕ ಬೌಲರುಗಳನ್ನು ಎದುರಿಸಿದ ಹೂಡಾ ಒತ್ತಡದ ನಡುವೆಯೂ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ್ದರು. 5 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 109 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ದೀಪಕ್ ಹೂಡಾ ಅವರ ಆಕರ್ಷಕ 109 ರನ್​ಗಳ ನೆರವಿನಿಂದ ರಾಜಸ್ಥಾನ್ ತಂಡದ ಮೊತ್ತ 150ರ ಗಡಿದಾಟಿತು. ಆದರೆ 9ನೇ ವಿಕೆಟ್​ ಆಗಿ ಹೂಡ ಕೂಡ ಔಟಾಗುವುದರೊಂದಿಗೆ ಅಂತಿಮವಾಗಿ 41.4 ಓವರ್​ನಲ್ಲಿ 200 ರನ್​ಗಳಿಗೆ ಸರ್ವಪತನ ಕಂಡಿತು. ಕರ್ನಾಟಕ ಪರ ವೈಶಾಖ್ 4 ವಿಕೆಟ್ ಪಡೆದರೆ, ಕೃಷ್ಣಪ್ಪ ಗೌತಮ್ 2 ವಿಕೆಟ್ ಕಬಳಿಸಿದರು.

ಇನ್ನು 201 ರನ್​ಗಳ ಗುರಿ ಪಡೆದ ಕರ್ನಾಟಕ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಕೇವಲ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಜೊತೆಗೂಡಿದ ರವಿಕುಮಾರ್ ಸಮರ್ಥ್ ಹಾಗೂ ಕೆ ಸಿದ್ಧಾರ್ಥ್ 2ನೇ ವಿಕೆಟ್​ಗೆ 75 ರನ್​ಗಳ ಜೊತೆಯಾಟವಾಡಿದರು. ಈ ನಡುವೆ ಸಮರ್ಥ್ 54 ರನ್​ಗಳಿಸಿ ವಿಕೆಟ್ ಕೈಚೆಲ್ಲಿ ಹೊರನಡೆದರು.

ಇದಾದ ಬಳಿಕ ಕ್ರೀಸ್​ಗೆ ಆಗಮಿಸಿದ ಮನೀಷ್ ಪಾಂಡೆ ಉತ್ತಮವಾಗಿ ಬ್ಯಾಟ್ ಬೀಸಿದರು. ಅದರಂತೆ ಮೂರನೇ ವಿಕೆಟ್​ಗೆ 104 ರನ್​ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಗುರಿ ಮುಟ್ಟಿಸಿದರು. ಕೆ ಸಿದ್ಧಾರ್ಥ್ ಅಜೇಯ 85 ರನ್​ಗಳಿಸಿದರೆ, ಮನೀಷ್ ಪಾಂಡೆ 52 ರನ್​ ಬಾರಿಸಿದರು. ಅದರಂತೆ 43.4 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ 204 ರನ್​ಗಳಿಸುವ ಮೂಲಕ ಕರ್ನಾಟಕ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕರ್ನಾಟಕ ತಂಡವು ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ.

 

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!

ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್​ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!

(Vijay Hazare Trophy 2021-22: Karnataka won over Rajasthan)

Published On - 4:51 pm, Sun, 19 December 21