Vijay Hazare Trophy 2022: ವಿಜಯ್ ಹಜಾರೆ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ (Karnataka vs Saurashtra) ತಂಡವು ಸೋಲನುಭವಿಸಿದೆ. ಇದರೊಂದಿಗೆ ಫೈನಲ್ ಪ್ರವೇಶಿಸುವ ಕರ್ನಾಟಕ ತಂಡದ ಕನಸು ಕೂಡ ಕಮರಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನಾದ್ಕಟ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಮಯಾಂಕ್ ಅಗರ್ವಾಲ್ (1) ಉನಾದ್ಕಟ್ ಎಸೆತದಲ್ಲಿ ಕ್ಯಾಚ್ ಬೇಗನೆ ನಿರ್ಗಮಿಸಿದರು. ಇದರ ಬೆನ್ನಲ್ಲೇ ಬಿಆರ್ ಶರತ್ (3) ಸಹ ವಿಕೆಟ್ ಒಪ್ಪಿಸಿದರು. ನಂತರ ಬಂದ ನಿಕಿನ್ ಜೋಸ್ 12 ರನ್ಗಳಿಸಿ ಔಟಾದರೆ, ಮನೀಷ್ ಪಾಂಡೆ ಶೂನ್ಯದೊಂದಿಗೆ ಪೆವಿಲಿಯನ್ಗೆ ಹಿಂತಿರುಗಿದರು. ಪರಿಣಾಮ ಕೇವಲ 47 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಕರ್ನಾಟಕ ತಂಡವು ಸಂಕಷ್ಟಕ್ಕೆ ಸಿಲುಕಿತು.
ಇದಾಗ್ಯೂ ಮತ್ತೋರ್ವ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ ಜವಾಬ್ದಾರಿಯುತ ಇನಿಂಗ್ಸ್ ಆಡಿದರು. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಸಮರ್ಥ್ ಸೌರಾಷ್ಟ್ರ ಬೌಲರ್ಗಳನ್ನು ಸಮರ್ಥವಾಗಿಯೇ ಎದುರಿಸಿದರು. ಈ ಮೂಲಕ 135 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 88 ರನ್ಗಳನ್ನು ಕಲೆಹಾಕಿದರು. ಆದರೆ ಉಳಿದ ಆಟಗಾರರಿಂದ ಸಮರ್ಥ್ಗೆ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ಕರ್ನಾಟಕ ತಂಡವು 49. 1 ಓವರ್ಗಳಲ್ಲಿ 171 ರನ್ಗಳಿಗೆ ಆಲೌಟ್ ಆಯಿತು. ಸೌರಾಷ್ಟ್ರ ಪರ ನಾಯಕ ಜಯದೇವ್ ಉನಾದ್ಕಟ್ 10 ಓವರ್ಗಳಲ್ಲಿ 26 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು 172 ರನ್ಗಳ ಸುಲಭ ಗುರಿ ಪಡೆದ ಸೌರಾಷ್ಟ್ರ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕರ್ನಾಟಕದ ವೇಗಿಗಳು ಯಶಸ್ವಿಯಾಗಿದ್ದರು. ಮೊದಲ ಓವರ್ನ 2ನೇ ಎಸೆತದಲ್ಲೇ ಹಾರ್ವಿಕ್ ದೇಸಾಯಿಯನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿ ವಿಧ್ವತ್ ಕಾವೇರಪ್ಪ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಶೆಲ್ಡನ್ ಜಾಕ್ಸನ್ (0) ವಿಕೆಟ್ ಪಡೆಯುವ ಮೂಲಕ ವಿ ಕೌಶಿಕ್ ಸೌರಾಷ್ಟ್ರಗೆ ಮತ್ತೊಂದು ಆಘಾತ ನೀಡಿದರು.
ಇದನ್ನೂ ಓದಿ: Ruturaj Gaikwad: ಒಂದೇ ಓವರ್ನಲ್ಲಿ ಅತ್ಯಧಿಕ ರನ್: ವಿಶ್ವ ದಾಖಲೆ ಸರಿಗಟ್ಟಿದ ರುತುರಾಜ್ ಗಾಯಕ್ವಾಡ್
ಆದರೆ ಈ ಹಂತದಲ್ಲಿ ಜೊತೆಯಾದ ಜಯ್ ಗೋಯಿಲ್ ಹಾಗೂ ಸಮರ್ಥ್ ವ್ಯಾಸ್ 75 ರನ್ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ವೇಳೆ ಜಯ್ ಗೋಯಿಲ್ (61) ರನ್ ಕಲೆಹಾಕಿ ಔಟಾದರೆ, ಸಮರ್ಥ್ ವ್ಯಾಸ್ 33 ರನ್ಗಳ ಉತ್ತಮ ಕಾಣಿಕೆ ನೀಡಿದರು.
ಆ ಬಳಿಕ ಬಂದರೆ ಪ್ರೇರಕ್ ಮಂಕಡ್ ಕೂಡ 35 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಅಂತಿಮವಾಗಿ 36.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕುವ ಮೂಲಕ ಸೌರಾಷ್ಟ್ರ ತಂಡವು ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಸೌರಾಷ್ಟ್ರ ತಂಡವು ಫೈನಲ್ಗೆ ಪ್ರವೇಶಿಸಿದೆ.
ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಮನೀಶ್ ಪಾಂಡೆ , ಶ್ರೇಯಸ್ ಗೋಪಾಲ್ , ಶರತ್ ಬಿ ಆರ್ ( ವಿಕೆಟ್ ಕೀಪರ್ ) , ಮನೋಜ್ ಭಾಂಡಗೆ , ಕೃಷ್ಣಪ್ಪ ಗೌತಮ್ , ರೋನಿತ್ ಮೋರ್ , ವಾಸುಕಿ ಕೌಶಿಕ್ , ವಿಧ್ವತ್ ಕಾವೇರಪ್ಪ.
ಸೌರಾಷ್ಟ್ರ ಪ್ಲೇಯಿಂಗ್ ಇಲೆವೆನ್: ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್) , ಶೆಲ್ಡನ್ ಜಾಕ್ಸನ್ , ಜಯ್ ಗೋಯಿಲ್ , ಸಮರ್ಥ ವ್ಯಾಸ್ , ಅರ್ಪಿತ್ ವಾಸವಾದ , ಪ್ರೇರಕ್ ಮಂಕಡ್ , ಚಿರಾಗ್ ಜಾನಿ , ಧರ್ಮೇಂದ್ರಸಿನ್ಹ್ ಜಡೇಜಾ , ಕುಶಾಂಗ್ ಪಟೇಲ್ , ಜಯದೇವ್ ಉನಾದ್ಕತ್ (ನಾಯಕ) , ಪಾರ್ಥ್ ಭುತ್
Published On - 4:01 pm, Wed, 30 November 22