ಟೀಮ್ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಬಾರಿಸಿ ವರ್ಷಗಳೇ ಕಳೆದಿವೆ. ಅಂದರೆ ಹತ್ತಿರತ್ತಿರ ಈಗ ಮೂರು ವರ್ಷಗಳಾಗುತ್ತಾ ಬಂದಿದೆ. ಒಂದು ವೇಳೆ ಇಂಗ್ಲೆಂಡ್ ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಸೆಂಚುರಿ ಮೂಡಿಬರದಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕವಿಲ್ಲದೆ ಕೊಹ್ಲಿಯ 1000 ದಿನಗಳು ಪೂರ್ಣಗೊಳ್ಳಲಿದೆ. ಹೀಗಾಗಿಯೇ ವಿರಾಟ್ ಕೊಹ್ಲಿಯ ಅಭಿಮಾನಿಗಳು ಸಾವಿರ ದಿನಗಳು ಆಗುವ ಮೊದಲೇ ಅವರ ಬ್ಯಾಟ್ನಿಂದ ಶತಕ ಮೂಡಿಬರಲಿ ಎಂದು ಆಶಿಸುತ್ತಿದ್ದಾರೆ. ಸದ್ಯ ಕೊಹ್ಲಿ ಶತಕ ಬಾರಿಸಿ ಒಟ್ಟು 966 ದಿನಗಳು ಕಳೆದಿವೆ. ಆದರೆ ವೆಸ್ಟ್ ಇಂಡೀಸ್ ಸರಣಿಯಿಂದ ಹೊರಗುಳಿದಿರುವ ಕಾರಣ ಅವರಿಗೆ ಉಳಿದ 34 ದಿನಗಳ ಅವಧಿಯಲ್ಲಿ ಶತಕ ಬಾರಿಸುವ ಅವಕಾಶ ಇರುವುದಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ದದ ಕೊನೆಯ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಅನಗತ್ಯ ದಾಖಲೆಯನ್ನು ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಕೊಹ್ಲಿ ಮುಂದಿದೆ.
ಇಲ್ಲಿ ವಿಶೇಷ ಎಂದರೆ ವಿರಾಟ್ ಕೊಹ್ಲಿ ಬಾರಿಸಿರುವ 70 ಶತಕಗಳು ಮೂಡಿಬಂದಿದ್ದು ಕೇವಲ 4114 ದಿನಗಳಲ್ಲಿ ಎಂಬುದು. ಆದರೆ 71ನೇ ಶತಕದ ಕಾಯುವಿಕೆ ಈಗ 1000 ದಿನಗಳತ್ತ ದಾಪುಗಾಲಿಟ್ಟಿದೆ. ಹೀಗಾಗಿಯೇ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತೆ ತಮ್ಮ ಫಾರ್ಮ್ ಅನ್ನು ಪ್ರದರ್ಶಿಸಬೇಕಿದೆ.
2019 ರ ನವೆಂಬರ್ 23 ರಂದು ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾ ಟೆಸ್ಟ್‌ನ 2 ನೇ ದಿನದಂದು 136 ರನ್ಗಳ ಶತಕ ಬಾರಿಸಿದ್ದ ಕೊಹ್ಲಿ, ಆ ಬಳಿಕ ಯಾವುದೇ ಮಾದರಿ ಕ್ರಿಕೆಟ್ನಲ್ಲೂ ಮೂರಂಕಿ ಮುಟ್ಟಿಲ್ಲ. ಇದೀಗ ಇಂಗ್ಲೆಂಡ್ ವಿರುದ್ದದ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಮೂಡಿಬರದಿದ್ದರೆ, ಸಾವಿರ ದಿನಗಳನ್ನು ದಾಟಲಿದೆ. ಅಂದರೆ ಮತ್ತೆ ಆಗಸ್ಟ್ನಲ್ಲಿ ನಡೆಯಲಿರುವ ಏಷ್ಯಾಕಪ್ನಲ್ಲಿ ಕೊಹ್ಲಿಯ ಬ್ಯಾಟ್ನಿಂದ ಶತಕ ನಿರೀಕ್ಷಿಸಬೇಕಾಗುತ್ತದೆ.
ಇತ್ತ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಕೊಹ್ಲಿಗೂ ಪ್ರಸ್ತುತ ಸನ್ನಿವೇಶದಲ್ಲಿ ಬೃಹತ್ ಮೊತ್ತದ ಇನಿಂಗ್ಸ್ ಅನಿವಾರ್ಯತೆ ಇದೆ. ಏಕೆಂದರೆ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಕೊಹ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡಿಲ್ಲ. ಟೆಸ್ಟ್ ಪಂದ್ಯದ ಎರಡು ಇನಿಂಗ್ಸ್ ಮೂಲಕ ಕೇವಲ 31 ರನ್ ಕಲೆಹಾಕಿದರೆ, 2ನೇ ಟಿ20 ಪಂದ್ಯದಲ್ಲಿ 1 ರನ್ಗೆ ಔಟಾಗಿದ್ದರು. ಇನ್ನು 3ನೇ ಟಿ20 ಪಂದ್ಯದಲ್ಲಿ 11 ಹಾಗೂ 2ನೇ ಏಕದಿನ ಪಂದ್ಯದಲ್ಲಿ 16 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿಯೇ ಕೊಹ್ಲಿ ಕಡೆಯಿಂದ ಭರ್ಜರಿ ಇನಿಂಗ್ಸ್ ಅನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಇದಾಗ್ಯೂ ಅಂತರರಾಷ್ಟ್ರೀಯ ಶತಕಗಳ ಪಟ್ಟಿಯಲ್ಲಿ ಈಗಲೂ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 71 ಶತಕ ಹೊಂದಿದ್ದಾರೆ. ಈ ದಾಖಲೆಯನ್ನು ಮುರಿದು 2ನೇ ಸ್ಥಾನಕ್ಕೇರಲು ಕೊಹ್ಲಿಗೆ 2 ಶತಕಗಳ ಅವಶ್ಯಕತೆಯಿದೆ. ಹಾಗೆಯೇ ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಸರಿಗಟ್ಟಲು 30 ಶತಕಗಳು ಬೇಕಿದೆ.
ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಸೆಂಚುರಿ ದಾಖಲೆಯನ್ನು ಅಳಿಸಿ ಹಾಕುವತ್ತ ದಾಪುಗಾಲಿಟ್ಟಿದ್ದ ಕೊಹ್ಲಿ ಕಳೆದ 3 ವರ್ಷಗಳಿಂದ ಒಂದೇ ಒಂದು ಶತಕ ಬಾರಿಸಿಲ್ಲ. ಹೀಗಾಗಿಯೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ಸೆಂಚುರಿ ರೆಕಾರ್ಡ್ ಕೊಹ್ಲಿ ಮುರಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಭರ್ಜರಿ ಶತಕ ಸಿಡಿಸಿ ಕೊಹ್ಲಿ ಉತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.
Published On - 2:04 pm, Sat, 16 July 22