
ರಾಂಚಿಯಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ (India vs South Africa) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) 52ನೇ ಏಕದಿನ ಶತಕ ಸಿಡಿಸಿ ಮಿಂಚಿದ್ದಾರೆ. ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ ಕೇವಲ 48 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಅಷ್ಟೇ ಸಿಕ್ಸರ್‌ಗಳೊಂದಿಗೆ ಅರ್ಧಶತಕ ಪೂರೈಸಿದರು. ಆದರೆ ರೋಹಿತ್ ಶರ್ಮಾ ವಿಕೆಟ್ ಬಳಿಕ ತಾಳ್ಮೆಯ ಆಟಕ್ಕೆ ಮುಂದಾದ ಕೊಹ್ಲಿ 102 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಬೌಂಡರಿ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದ ಕೊಹ್ಲಿ, ಈ ಶತಕದ ಮೂಲಕ ತಮ್ಮನ್ನು ಟೀಕಿಸುತ್ತಿದ್ದವರಿಗೆ ಹಾಗೂ ಆಯ್ಕೆ ಮಂಡಳಿಗೆ ತಕ್ಕ ಉತ್ತರ ನೀಡಿದರು.
ವಾಸ್ತವವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಏಕದಿನ ಸರಣಿಯೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದ ಕೊಹ್ಲಿ, ಸರಣಿಯಲ್ಲಿ ಅಷ್ಟೇನೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ಕೊಹ್ಲಿ ಕೊನೆಯ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿದ್ದರು. ಹೀಗಾಗಿ ಕೊಹ್ಲಿಯ ಮೇಲೆ ಟೀಕಾ ಪ್ರಹಾರವೇ ನಡೆದಿತ್ತು. ಆದರೆ ಆ ಎಲ್ಲಾ ಟೀಕೆಗಳಿಗೂ ರಾಂಚಿಯಲ್ಲಿ ಉತ್ತರ ನೀಡಿದ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದರು. ರಾಂಚಿಯ ಜೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈಗಾಗಲೇ ಎರಡು ಏಕದಿನ ಶತಕಗಳನ್ನು ಬಾರಿಸಿರುವ ಕೊಹ್ಲಿ, ಈ ಮೈದಾನದಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿ ತಮ್ಮ ಮೂರನೇ ಶತಕವನ್ನು ಪೂರ್ಣಗೊಳಿಸಿದರು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಾಲ್ಕನೇ ಓವರ್‌ನಲ್ಲಿಯೇ ಆರಂಭಿಕ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಬಹುಬೇಗನೇ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದ ಕ್ಷಣದಿಂದಲೇ ರನ್ ಗಳಿಸಲು ಪ್ರಾರಂಭಿಸಿದರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ವಿರಾಟ್ ಅರ್ಧಶತಕವನ್ನು ತಲುಪುವ ಮೊದಲು ಮೂರು ಸಿಕ್ಸರ್‌ಗಳನ್ನು ಬಾರಿಸಿದದರು. ಈ ಅವಧಿಯಲ್ಲಿ, ಕೊಹ್ಲಿ ರೋಹಿತ್ ಶರ್ಮಾ ಅವರೊಂದಿಗೆ 136 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ರೋಹಿತ್ ಔಟಾದ ನಂತರ, ಮೂರು ವಿಕೆಟ್‌ಗಳು ತ್ವರಿತವಾಗಿ ಬಿದ್ದವು. ಆದರೆ ಕೊಹ್ಲಿ ಮಾತ್ರ ಇನ್ನೊಂದು ತುದಿಯಲ್ಲಿ ಭದ್ರವಾಗಿ ನಿಂತು ತಂಡದ ಇನ್ನಿಂಗ್ಸ್ ನಿಭಾಯಿಸಿದರು.
IND vs SA: 746 ದಿನಗಳ ನಂತರ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ ಕಿಂಗ್ ಕೊಹ್ಲಿ
ನಂತರ 38 ನೇ ಓವರ್ನಲ್ಲಿ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಅದ್ಭುತ ಶತಕವನ್ನು ಪೂರೈಸಿದರು. 102 ಎಸೆತಗಳಲ್ಲಿ ತಮ್ಮ 52 ನೇ ಏಕದಿನ ಶತಕವನ್ನು ಪೂರೈಸಿದ ಕೊಹ್ಲಿ, ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 51 ಶತಕಗಳೊಂದಿಗೆ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದ ದಾಖಲೆ ಹೊಂದಿದ್ದರು. ಆದರೆ ಈಗ ಕೊಹ್ಲಿ 306 ಏಕದಿನ ಪಂದ್ಯಗಳಲ್ಲಿ ಕ್ರಿಕೆಟ್ ದೇವರ ದಾಖಲೆ ಮುರಿದಿದ್ದಾರೆ. ಈ ವರ್ಷ ಇದು ಕೊಹ್ಲಿ ಅವರ ಎರಡನೇ ಶತಕವಾಗಿದೆ. ಈ ಹಿಂದೆ ಫೆಬ್ರವರಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿ ಶತಕ ಬಾರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Sun, 30 November 25