
ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ (ICC World Cup 2023) ಈಗಾಗಲೇ ವೇದಿಕೆ ಸಿದ್ದವಾಗಿದೆ. ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್ಗಳಾದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ (England vs New Zealand) ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಕದನಕ್ಕಾಗಿ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನ ಕೂಡ ಸಿದ್ದವಾಗಿದೆ. ಬರೋಬ್ಬರಿ 12ವರ್ಷಗಳ ಬಳಿಕ ಭಾರತದಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಕ್ರೀಡಾಂಗಣಗಳು ಅಭಿಮಾನಿಗಳಿಂದ ತುಂಬಿ ತುಳುಕುವ ನಿರೀಕ್ಷೆ ಇದೆ. ಇದಕ್ಕೆ ತಕ್ಕಂತೆ ಈಗಾಗಲೇ ಲೀಗ್ ಪಂದ್ಯಗಳ ಟಿಕೆಟ್ ಬಹುತೇಕ ಸೋಲ್ಡ್ ಔಟ್ ಆಗಿವೆ. ಈ ಮಹಾ ಈವೆಂಟ್ನ ನೇರವಾಗಿ ಕಣ್ತುಂಬಿಕೊಳ್ಳುವ ಸಲುವಾಗಿ ಅಭಿಮಾನಿಗಳು ಕಾಳ ಸಂತೆಯಲ್ಲಿ ಭಾರಿ ಮೊತ್ತ ನೀಡಿ ಟಿಕೆಟ್ ಖರೀದಿಸುತ್ತಿದ್ದಾರೆ. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ಗಳಿಗೆ ಭಾರಿ ಬೇಡಿಕೆಯುಂಟಾಗಿದೆ. ದುಪ್ಪಟ್ಟು ಬೆಲೆ ನೀಡಿದರೂ ಈ ಪಂದ್ಯದ ಟಿಕೆಟ್ಗಳು ಸಿಗುತ್ತಿಲ್ಲ. ಇದೆಲ್ಲದರ ನಡುವೆ ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗಳು ವಿಶ್ವಕಪ್ ಆರಂಭಕ್ಕೂ ಮುನ್ನ ತನ್ನ ಗೆಳೆಯರ ಬಳಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ವಾಸ್ತವವಾಗಿ ವಿಶ್ವಕಪ್ ಪಂದ್ಯಗಳ ಟಿಕೆಟ್ ಸಿಗದೆ ಇದ್ದಾಗ ಕ್ರಿಕೆಟಿಗರ ಆಪ್ತ ಗೆಳೆಯರು, ಕ್ರಿಕೆಟಿಗರ ಬಳಿ ಪಂದ್ಯಗಳ ಟಿಕೆಟ್ ಕೊಡಿಸು ಎಂದು ಮನವಿ ಇಡುವುದು ಸರ್ವೆ ಸಾಮಾನ್ಯ. ಇದನ್ನು ನಾವು ಬಹಳ ಹಿಂದಿನಿಂದಲೂ ನೋಡಿದ್ದೇವೆ. ಕೆಲವೊಮ್ಮೆ ಕ್ರಿಕೆಟಿಗರು ತಮ್ಮ ಗೆಳೆಯರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವೊಮ್ಮೆ ಟಿಕೆಟ್ಗಳು ಸಿಗದ ಕಾರಣ ಪೇಚಿಗೆ ಸಿಕ್ಕಿ ಒದ್ದಾಡುತ್ತಾರೆ. ಹೀಗಾಗಿ ಬಹಳ ವರ್ಷಗಳಿಂದಲೂ ಟೀಂ ಇಂಡಿಯಾದಲ್ಲಿ ಆಡುತ್ತಿರುವ ಕೊಹ್ಲಿಗೆ ಇದು ಅಭ್ಯಾಸ ಆಗಿ ಬಿಟ್ಟಿದೆ. ಆದ್ದರಿಂದ ವಿಶ್ವಕಪ್ ಆರಂಭಕ್ಕೂ ಮುನ್ನ ತಮ್ಮ ಗೆಳೆಯರ ಬಳಿ ಮನವಿಯೊಂದನ್ನು ಇಟ್ಟಿರುವ ಕೊಹ್ಲಿ ದಯಮಾಡಿ ನನ್ನ ಬಳಿ ಟಿಕೆಟ್ಗಳಿಗಾಗಿ ಬೇಡಿಕೆ ಇಡಬೇಡಿ ಎಂದು ಕೇಳಿಕೊಂಡಿದ್ದಾರೆ.
2ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗಳು..!
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸ್ಟೋರಿಯೊಂದನ್ನು ಹಾಕಿರುವ ಕೊಹ್ಲಿ ಅದರಲ್ಲಿ, ‘ವಿಶ್ವಕಪ್ ಸಮೀಪಿಸುತ್ತಿದೆ. ಹೀಗಾಗಿ ನನಗೆ ಟಿಕೆಟ್‌ಗಾಗಿ ವಿನಂತಿಸಬೇಡಿ ಎಂದು ನನ್ನ ಎಲ್ಲಾ ಸ್ನೇಹಿತರಿಗೆ ತಿಳಿಸಲು ನಾನು ವಿನಮ್ರವಾಗಿ ಬಯಸುತ್ತೇನೆ. ದಯವಿಟ್ಟು ನೀವು ನಿಮ್ಮ ಮನೆಯಿಂದ ಪಂದ್ಯಗಳನ್ನು ನೋಡಿ ಆನಂದಿಸಿ’ ಎಂದು ಬರೆದುಕೊಂಡಿದ್ದಾರೆ.
ಕೊಹ್ಲಿಯಂತೆ ಅವರ ಮಡದಿ ಅನುಷ್ಕಾ ಶರ್ಮಾ ಕೂಡ ಕೊಹ್ಲಿಯವರ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ನಿಮ್ಮ ಮೆಸೇಜ್ಗಳಿಗೆ ಉತ್ತರಿಸದಿದ್ದರೆ ಸಹಾಯ ಮಾಡಿ ಎಂದು ದಯವಿಟ್ಟು ನನ್ನನ್ನು ವಿನಂತಿಸಬೇಡಿ. ನೀವು ಇದನ್ನು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Wed, 4 October 23