ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ದೇಶೀಯ ಅಂಗಳದಲ್ಲಿ ಅಗ್ನಿ ಪರೀಕ್ಷೆ
Rohit Sharma - Virat Kohli: ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮತ್ತೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವುದನ್ನು ನೋಡಲು ಅಕ್ಟೋಬರ್ವರೆಗೆ ಕಾಯಲೇಬೇಕು. ಅಂದರೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂಲಕ ಕಂಬ್ಯಾಕ್ ಮಾಡಬಹುದು. ಆದರೆ ಈ ಕಂಬ್ಯಾಕ್ ಬಗ್ಗೆ ಇನ್ನೂ ಸಹ ಖಚಿತತೆ ಇಲ್ಲ. ಏಕೆಂದರೆ ದೇಶೀಯ ಅಂಗಳದಲ್ಲಿ ಕಣಕ್ಕಿಳಿದು ತಮ್ಮ ಸಾಮರ್ಥ್ಯ ತೆರೆದಿಟ್ಟರೆ ಮಾತ್ರ ಹಿರಿಯ ಆಟಗಾರರಿಗೆ ಚಾನ್ಸ್ ನೀಡಲು ಬಿಸಿಸಿಐ ನಿರ್ಧರಿಸಿದೆ.

ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇನ್ನು ಇವರಿಬ್ಬರ ಮುಂದಿರುವುದು ಏಕದಿನ ಕ್ರಿಕೆಟ್ ಮಾತ್ರ. 2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿಕೊಂಡು ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 50 ಓವರ್ಗಳ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿಲ್ಲ.
ಇತ್ತ ನಿವೃತ್ತಿ ಘೋಷಿಸದಿದ್ದರೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಚಾನ್ಸ್ ಸಿಗುವುದು ಡೌಟ್ ಎನ್ನಲಾಗುತ್ತಿದೆ. 2027ರ ವೇಳೆಗೆ ರೋಹಿತ್ ಶರ್ಮಾ ಅವರ ವಯಸ್ಸು 40 ಆಗಿರಲಿದೆ. ಅತ್ತ ವಿರಾಟ್ ಕೊಹ್ಲಿಗೆ 38 ವರ್ಷ ತುಂಬಿರಲಿದೆ. ಹೀಗಾಗಿ ಇಬ್ಬರನ್ನು ಏಕದಿನ ವಿಶ್ವಕಪ್ಗೆ ಪರಿಗಣಿಸುವ ಸಾಧ್ಯತೆಯಿಲ್ಲ.
ಇದಾಗ್ಯೂ ಇನ್ನೊಂದು ವರ್ಷ ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯಬೇಕೆಂದು ಬಯಸಿದರೆ, ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯಬೇಕೆಂದು ಸೂಚಿಸಲಾಗಿದೆ. ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿ ಬಳಿಕ ಯಾವುದೇ ಪಂದ್ಯವಾಡಿಲ್ಲ. ಹೀಗಾಗಿ ಅವರು ಏಕದಿನ ಸರಣಿಗೂ ಮುನ್ನ ವಿಜಯ ಹಝಾರೆ ಟೂರ್ನಿ ಆಡಬೇಕಾಗುತ್ತದೆ.
ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿದರೆ ಮಾತ್ರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ಆಯ್ಕೆಗೆ ಪರಿಗಣಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹಾಗಾಗಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಮುನ್ನ ಹಿಟ್ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ದೇಶೀಯ ಅಂಗಳದ ಏಕದಿನ ಟೂರ್ನಿ ಆಡಬೇಕಾಗುತ್ತದೆ.
ಒಂದು ವೇಳೆ ವಿಜಯ ಹಝಾರೆ ಟೂರ್ನಿಯಲ್ಲಿ ಟೀಮ್ ಇಂಡಿಯಾ ದಿಗ್ಗಜರು ವಿಫಲರಾದರೆ ಏಕದಿನ ತಂಡದಲ್ಲಿ ಚಾನ್ಸ್ ಸಿಗುವುದು ಸಹ ಅನುಮಾನ. ಏಕೆಂದರೆ ಭಾರತ ತಂಡದಲ್ಲಿ ಅವಕಾಶ ಪಡೆಯಲು ಯುವ ದಾಂಡಿಗರ ದಂಡೇ ಕಾದು ಕುಳಿತಿದೆ. ಅತ್ತ 2027ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿಕೊಂಡು ಯುವ ಪಡೆಯನ್ನೊಳಗೊಂಡ ತಂಡ ರೂಪಿಸಲು ಬಿಸಿಸಿಐ ಆಯ್ಕೆ ಸಮಿತಿ ಕೂಡ ನಿರ್ಧರಿಸಿದೆ.
ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದೇಶೀಯ ಅಂಗಳದಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟರೆ ಮಾತ್ರ ಭಾರತ ಏಕದಿನ ತಂಡದಲ್ಲಿ ಚಾನ್ಸ್ ಸಿಗಬಹುದು. ಅದರಂತೆ ಮುಂಬರುವ ಏಕದಿನ ಸರಣಿಗೆ ಆಯ್ಕೆಯಾಗಬಹುದು.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ ತ್ರಿಮೂರ್ತಿಗಳು
ಒಟ್ಟಿನಲ್ಲಿ 2027ರ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಆಶಾಭಾವನೆ ಹೊಂದಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಹೊಸ ಟಾಸ್ಕ್ಗಳನ್ನು ನೀಡಲು ಬಿಸಿಸಿಐ ನಿರ್ಧರಿಸಿದ್ದು, ಈ ಮೂಲಕ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದರೆ ಮಾತ್ರ ತಂಡದಲ್ಲಿ ಚಾನ್ಸ್ ಸಿಗಲಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಲು ಮುಂದಾಗಿದೆ.
Published On - 9:23 am, Sun, 10 August 25
