Virat Kohli: ವಿವಾದದ ಸುಳಿಗೆ ಸಿಲುಕಿಕೊಂಡ ವಿರಾಟ್ ಕೊಹ್ಲಿ: ಅಹಂಕಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ ಎಂದ ಕಪಿಲ್ ದೇವ್

| Updated By: Vinay Bhat

Updated on: Dec 17, 2021 | 7:21 AM

Kapil Dev: ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಕಪಿಲ್‌ ದೇವ್‌ ಕಟುವಾಗಿ ಟೀಕಿಸಿದ್ದಾರೆ. ಸೌರವ್ ಮತ್ತು ಕೊಹ್ಲಿಗೆ ಇದು ಶೋಭೆ ತರುವಂಥದ್ದಲ್ಲ. ಇಬ್ಬರೂ ಅಹಂಕಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ ಎಂದು ಹೇಳಿದ್ದಾರೆ.

Virat Kohli: ವಿವಾದದ ಸುಳಿಗೆ ಸಿಲುಕಿಕೊಂಡ ವಿರಾಟ್ ಕೊಹ್ಲಿ: ಅಹಂಕಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ ಎಂದ ಕಪಿಲ್ ದೇವ್
Kapil Dev and Virat Kohli
Follow us on

ವಿರಾಟ್ ಕೊಹ್ಲಿ (Virat Kohli) ಸಮಯ ಸರಿಯಿಲ್ಲದಂತೆ ಗೋಚರಿಸುತ್ತದೆ. ಟಿ20 ವಿಶ್ವಕಪ್​​ಗೂ (T20 World Cup) ಮುನ್ನ ನಾಯಕತ್ವ ಬಿಡುವುದಾಗಿ ಹೇಳಿದ್ದೇ ತಡ ಸದಾ ಒಂದಲ್ಲ ಒಂದು ವಿಚಾರದಲ್ಲಿ ಕೊಹ್ಲಿ ಸಿಲುಕಿ ಹಾಕಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಹೀನಾಯವಾಗಿ ಸೋಲುವುದರ ಮೂಲಕ ವಿಶ್ವಕಪ್ ಇತಿಹಾಸದಲ್ಲಿಯೇ ಚೊಚ್ಚಲ ಬಾರಿಗೆ ಪಾಕ್ ವಿರುದ್ಧ ಸೋಲನ್ನು ಅನುಭವಿಸಿದ ಭಾರತದ ಏಕೈಕ ನಾಯಕ ಎಂಬ ಕೆಟ್ಟ ದಾಖಲೆ ಬರೆದರು. ಜೊತೆಗೆ ಲೀಗ್ ಹಂತದಲ್ಲಿಯೇ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬೀಳುವ ಮೂಲಕ ವಿರಾಟ್ ಮುಂದಾಳತ್ವದ ಟೀಮ್ ಇಂಡಿಯಾ (Team India) ಮುಖಭಂಗಕ್ಕೆ ಒಳಗಾಯಿತು. ಅಲ್ಲಿಗೆ ಅವರ ಟಿ20 ನಾಯಕತ್ವ ಅಂತ್ಯಕಂಡಿತು. ಈಗ ಏಕದಿನ ನಾಯಕತ್ವದ ಸುಳಿಗೆ ಸಿಲುಕಿಕೊಂಡಿದ್ದಾರೆ. ಬಿಸಿಸಿಐ ವಿರುದ್ಧ ಬೇಸರ ಹೊರಹಾಕುವ ಮೂಲಕ ಭಾರತೀಯ ಕ್ರಿಕೆಟ್ (Indian Cricket) ವಲಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗತ್ತಿಗೆ ಗೊತ್ತು ಮಾಡಿದ್ದಾರೆ. ಸದ್ಯ ಇದೇ ವಿಚಾರವಾಗಿ ಕ್ರಿಕೆಟ ದಿಗ್ಗಜ ಕಪಿಲ್ ದೇವ್ (Kapil Dev) ಮಾತನಾಡಿದ್ದಾರೆ.

ಮೊನ್ನೆಯಷ್ಟೆ ದಕ್ಷಿಣ ಆಫ್ರಿಕಾ ಪ್ರವಾಸ ತೆರಳುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ, ಟಿ20 ತಂಡದ ನಾಯಕತ್ವ ಬಿಡುವಾಗ ಬಿಸಿಸಿಐನಿಂದ ಯಾರೊಬ್ಬರೂ ತಮ್ಮನ್ನು ಸಂಪರ್ಕಿಸಿ ನಿರ್ಧಾರ ಮರು ಪರಿಗಣಿಸುವಂತೆ ಹೇಳಿಲ್ಲ ಎಂದು ಹೇಳಿದ್ದರು. ಕೊಹ್ಲಿ ಅವರ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಏಕೆಂದರೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಾವೇ ಖುದ್ದಾಗಿ ಕೊಹ್ಲಿ ಬಳಿ ಟಿ20 ನಾಯಕತ್ವ ಬಿಡದಂತೆ ಮಾತೂಕತೆ ನಡೆಸಿದ್ದಾಗಿ ಹೇಳಿಕೊಂಡಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಕಪಿಲ್‌ ದೇವ್‌ ಕಟುವಾಗಿ ಟೀಕಿಸಿದ್ದಾರೆ. “ಬೇರೆಯವರ ಕಡೆಗೆ ಬೊಟ್ಟು ಮಾಡುವುದು ಅಷ್ಟು ಒಳ್ಳೆಯದ್ದಲ್ಲ. ದಕ್ಷಿಣ ಆಫ್ರಿಕಾ ಪ್ರವಾಸ ಮುಂದಿದೆ. ಕ್ರಿಕೆಟ್‌ ಕಡೆಗಹೆ ಗಮನ ನೀಡುವುದು ಉತ್ತಮ. ಬಿಸಿಸಿಐನ ಅಧ್ಯಕ್ಷ ಸ್ಥಾನ ಅತ್ಯಂತ ಮಹತ್ವದ ಸ್ಥಾನ, ಹಾಗೆಯೇ ತಂಡದ ನಾಯಕನ ಸ್ಥಾನವೂ ಮಹತ್ವದ್ದು. ಹೀಗಾಗಿ ಸಾರ್ವಜನಿಕವಾಗಿ ಇಬ್ಬರೂ ಕಿತ್ತಡುವುದು ಅಷ್ಟು ಸರಿಯಲ್ಲ. ಸೌರವ್ ಮತ್ತು ಕೊಹ್ಲಿಗೆ ಇದು ಶೋಭೆ ತರುವಂಥದ್ದಲ್ಲ. ಇಬ್ಬರೂ ಅಹಂಕಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ ” ಎಂದು ಕಪಿಲ್‌ ಹೇಳಿದ್ದಾರೆ.

“ದಯವಿಟ್ಟು ನೀವು ಪರಿಸ್ಥಿತಿಯನ್ನು ನಿಯಂತ್ರಿಸಿ. ಮೊದಲು ದೇಶದ ಬಗ್ಗೆ ಯೋಚಿಸಿ. ಯಾವುದು ತಪ್ಪಿದೆಯೋ ಅದು ಇಂದಲ್ಲಾ ನಾಳೆ ಹೊರಗೆ ಬಂದೇ ಬರುತ್ತದೆ. ಆಗ ಆ ಕುರಿತು ಮಾತನಾಡಬಹುದು. ಆದರೆ, ಈ ವಿಚಾರವಾಗಿ ಸಾರ್ವಜನಿಕವಾಗಿ ಮಾತನಾಡುವುದು ಅಷ್ಟು ಸರಿಯಲ್ಲ. ಈ ಮಹತ್ವದ ಪ್ರವಾಸಕ್ಕೂ ಮುನ್ನ ಯಾವುದೇ ವಿವಾದ ಕಾಣಲು ನಾನು ಇಷ್ಟ ಪಡುವುದಿಲ್ಲ” ಎಂಬುದು ಕಪಿಲ್ ದೇವ್ ಅಭಿಪ್ರಾಯ.

ವಿರಾಟ್ ಕೊಹ್ಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತ ಟೆಸ್ಟ್ ತಂಡ ಗುರುವಾರ ಸಂಜೆ ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್‌ಗೆ ತಲುಪಿದೆ. ಡಿಸೆಂಬರ್ 26ರಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣೆಸಾಡಲಿದೆ.

PKL 8: ಪ್ರೋ ಕಬಡ್ಡಿ ಲೀಗ್ ತಂಡಗಳ ನಾಯಕರುಗಳ ಪಟ್ಟಿ ಹೀಗಿದೆ

(Virat Kohli and Sourav Ganguly to control the situation and think about the country first says Kapil Dev)