South Africa vs India: ನಾನೀಗ ನಾಯಕನಲ್ಲ, ನಿನ್ನ ಮಿತಿಯಲ್ಲಿರು: ಆಫ್ರಿಕಾ ನಾಯಕನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ

| Updated By: Vinay Bhat

Updated on: Jan 20, 2022 | 10:06 AM

Virat Kohli - Temba Bavuma Fight: ಅದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯದ 36ನೇ ಓವರ್​. ಯುಜ್ವೇಂದ್ರ ಚಹಾಲ್ ಅವರ 4ನೇ ಎಸೆತದಲ್ಲಿ ತೆಂಬಾ ಬವುಮಾ ಸಿಂಗಲ್ ರನ್​ಗೆಂದು ಬ್ಯಾಟ್ ಬೀಸಿದರು. ಆದರೆ, ಚೆಂಡು ವಿರಾಟ್ ಕೊಹ್ಲಿ ಕೈ ಸೇರಿತು. ಆ ಸಂದರ್ಭದಲ್ಲಿ ಚೆಂಡನ್ನು ರಭಸವಾಗಿ ಸ್ಟಂಪ್ ಕಡೆಗೆ ಕೊಹ್ಲಿ ಎಸೆದರು. ಆಗ ಏನಾಯಿತು? ನೋಡಿ.

South Africa vs India: ನಾನೀಗ ನಾಯಕನಲ್ಲ, ನಿನ್ನ ಮಿತಿಯಲ್ಲಿರು: ಆಫ್ರಿಕಾ ನಾಯಕನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ
Virat Kohli and Temba Bavuma Fight
Follow us on

ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa vs India) ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಹರಿಣಗಳು ಮೇಲುಗೈ ಸಾಧಿಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದ ಟೀಮ್ ಇಂಡಿಯಾ ಕೆಎಲ್ ರಾಹುಲ್ (KL Rahul) ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಸೋಲಿಗೆ ಶರಣಾಯಿತು. ಬ್ಯಾಟಿಂಗ್- ಬೌಲಿಂಗ್​ನಲ್ಲಿ ಕಳಪೆ ಪ್ರದರ್ಶನ ತೋರಿದರೂ ಭಾರತದ ಫೀಲ್ಡಿಂಗ್ ಮಾತ್ರ ಅದ್ಭುತವಾಗಿತ್ತು. ಪದಾರ್ಪಣೆ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಅವರು ಆ್ಯಡಂ ಮರ್ಕ್ರಮ್​ರನ್ನು ರನೌಟ್ ಮಾಡಿ ಗಮನ ಸೆಳೆದರು. ಇದರ ನಡುವೆ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ಫೀಲ್ಡಿಂಗ್​ನಲ್ಲಿ ಎದುರಾಳಿಯ ಮೈ ನಡುಗಿಸಿದರು. ಕೊಹ್ಲಿಯ ವಿರಾಟ ರೂಪ ಕಂಡು ಆಫ್ರಿಕಾ ನಾಯಕ ತೆಂಬಾ ಬವುಮಾ ಒಂದು ಕ್ಷಣ ಸ್ತಬ್ಧವಾಗಿದ್ದು ಸುಳ್ಳಲ್ಲ. ಹಾಗಾದ್ರೆ ಏನಿದು ಘಟನೆ?, ದಕ್ಷಿಣ ಆಫ್ರಿಕಾ ನಾಯಕನಿಗಿ ಮಾಜಿ ನಾಯಕ ವಿರಾಟ್ ಕೊಹ್ಲಿ ಫೀಲ್ಡ್​ನಲ್ಲಿ ಏನು ಮಾಡಿದರು?. ಇಲ್ಲಿದೆ ನೋಡಿ ಸ್ಟೋರಿ.

ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭದಲ್ಲಿ ಭಾರತೀಯ ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿ ಪವರ್ ಪ್ಲೇನಲ್ಲೇ ಮೊದಲ ವಿಕೆಟ್ ಕಿತ್ತರು. 18 ಓವರ್ ಆಗುವಷ್ಟರಲ್ಲಿ ತಂಡ ಮೂರು ವಿಕೆಟ್ ಕಳೆದುಕೊಂಡಿತು. ಆಗ ಸ್ಕೋರ್‌ ಕಾರ್ಡ್‌ನಲ್ಲಿದ್ದ ಮೊತ್ತ 68 ಮಾತ್ರ. ಈ ಹಂತದಲ್ಲಿ ದಕ್ಷಿಣ ಆಫ್ರಿಕಾಕ್ಕೆ 200 ರನ್ ಗಳಿಸುವುದು ಕಷ್ಟ ಎನಿಸಿತ್ತು. ಆದರೆ ನಾಯಕ ತೆಂಬಾ ಬವುಮಾ ಮತ್ತು ಡುಸೆನ್‌ ಪಂದ್ಯದ ಗತಿಯನ್ನೇ ಬದಲಿಸಿದರು. ಭರ್ಜರಿ ಹೊಡೆತಗಳ ಮೂಲಕ ಇವರಿಬ್ಬರು ಭಾರತೀಯ ವೇಗಿಗಳನ್ನು ದಂಡಿಸಿದರು.

ಅದು 36ನೇ ಓವರ್​. ಯುಜ್ವೇಂದ್ರ ಚಹಾಲ್ ಅವರ 4ನೇ ಎಸೆತದಲ್ಲಿ ಬವುಮಾ ಸಿಂಗಲ್ ರನ್​ಗೆಂದು ಬ್ಯಾಟ್ ಬೀಸಿದರು. ಆದರೆ, ಚೆಂಡು ಅಲ್ಲೆ ಇದ್ದ ವಿರಾಟ್ ಕೊಹ್ಲಿ ಕೈ ಸೇರಿತು. ರನ್ ಕಲೆಹಾಕಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ಚೆಂಡನ್ನು ರಭಸವಾಗಿ ಸ್ಟಂಪ್ ಕಡೆಗೆ ಕೊಹ್ಲಿ ಎಸೆದರು. ಕೊಹ್ಲಿ ಎಸೆದ ಚೆಂಡು ಸ್ಟಂಪ್ ಬಳಿ ಇದ್ದ ಬವುಮಾಗೆ ಬೀಳುವುದರಲ್ಲಿತ್ತು. ಆದರೆ ತಕ್ಷಣವೇ ತೆಂಬಾ ಬವುಮಾ ನೆಲಕ್ಕೆ ಬಾಗುವುದರ ಮೂಲಕ ತಪ್ಪಿಸಿಕೊಂಡರು. ಇಲ್ಲಿ ಶುರುವಾಗಿದ್ದು ಬವುಮಾ ಮತ್ತು ಕೊಹ್ಲಿ ನಡುವೆ ಮಾತಿನ ಚಕಮಕಿ.

ಕೊಹ್ಲಿ ಚೆಂಡನ್ನು ಎಸೆದಿದ್ದರಿಂದ ಪಾರಾದ ಬವುಮಾ ಅಂಪೈರ್ ಕಡೆ ತಿರುಗಿ ಏನಿದು ಎಂಬಂತೆ ಪ್ರಶ್ನಿಸಿದರು. ಇದನ್ನು ಕಂಡ ಕೊಹ್ಲಿ, “ಏನು? ನೀನು ರನ್​ ಗಳಿಸಲೆಂದು ಸ್ಟಂಪ್ ಗೆರೆ ಬಿಟ್ಟು ಮುಂದೆ ಬಂದಿದ್ದೆ, ಹಾಗಾಗಿ ನಾನು ಚೆಂಡನ್ನು ಎಸೆದೆ. ನಾನೇನು ಈಗ ನಾಯಕನಲ್ಲ, ಹೀಗಾಗಿ ನಾನು ಪಂದ್ಯ ಮುಗಿದ ನಂತರ ಯಾರಿಗೂ ಉತ್ತರವನ್ನು ನೀಡಬೇಕಾಗಿಲ್ಲ. ಆದ್ದರಿಂದ ನೀನು ನಿನ್ನ ಮಿತಿಯಲ್ಲಿರುವುದು ಒಳಿತು,” ಎಂದು ಖಡಕ್ ಆಗಿ ಹೇಳಿದರು. ವಿರಾಟ್ ಈ ರೀತಿಯ ಹೇಳಿಕೆ ಸ್ಟಂಪ್ ಪೈಕ್​ನಲ್ಲಿ ಸೆರೆಯಾಗಿದೆ. ಅಲ್ಲದೆ ಈ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಕೂಡ ಆಗುತ್ತಿದೆ.

 

ಈ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ರಾಸೀ ವಾನ್ ಡರ್ ಡುಸೆನ್ (129*ರನ್, 96 ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಗೂ ನಾಯಕ ತೆಂಬಾ ಬವುಮಾ (110 ರನ್, 143 ಎಸೆತ, 8 ಬೌಂಡರಿ) ಜೋಡಿಯ ಅಬ್ಬರದ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ದಾಳಿ ಎದುರು ಸಂಪೂರ್ಣ ಮಂಕಾದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ 31 ರನ್‌ಗಳಿಂದ ಮಣಿಯಿತು. ಸದ್ಯ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 0-1 ರಿಂದ ಹಿನ್ನಡೆಯಲ್ಲಿದೆ.

KL Rahul: ಪಂದ್ಯದ ಬಳಿಕ ಭಾರತದ ಸೋಲಿಗೆ ಕೆಎಲ್ ರಾಹುಲ್ ನೀಡಿದ ಕಾರಣ ಏನು ಗೊತ್ತೇ?

South Africa vs India: ಸ್ಟಾರ್ ಆಟಗಾರರ ದಂಡೇ ಇದ್ದರೂ ಸೋಲುತ್ತಿದೆ ಭಾರತ: ಎಡವುತ್ತಿರುವುದು ಎಲ್ಲಿ?

Published On - 9:52 am, Thu, 20 January 22