Virat Kohli: ಪ್ರ್ಯಾಕ್ಟೀಸ್ ಸೆಷನ್ನಲ್ಲಿ ಮನಬಂದಂತೆ ಬ್ಯಾಟ್ ಬೀಸುತ್ತಿರುವ ಕೊಹ್ಲಿ: ಆಟಗಾರರಿಗೆ ಶಾಕ್ ಮೇಲೆ ಶಾಕ್
Asia Cup 2022, India vs Pakistan: ಆ. 28 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ ಇಡೀ ವಿಶ್ವವೇ ಕಾದಕುಳಿತಿದೆ. ಟೀಮ್ ಇಂಡಿಯಾ ಪ್ಲೇಯರ್ಸ್ ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಕಳೆದ ಮೂರು ದಿನಗಳಿಂದ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ.
ಬಹುನಿರೀಕ್ಷಿತ 15ನೇ ಆವೃತ್ತಿಯ ಏಷ್ಯಾಕಪ್ (Asia Cup 2022) ಟೂರ್ನಿಗೆ ಯುಎಇನಲ್ಲಿ ಇಂದು ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಲಿದೆ. ಆದರೆ, ಎಲ್ಲರೂ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವುದು ಆ. 28 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯಕ್ಕೆ. ಇಡೀ ವಿಶ್ವವೇ ಈ ರೋಚಕ ಕಾದಾಟದ ವೀಕ್ಷಣೆಗೆ ಕಾದು ಕುಳಿತಿದೆ. ಇದು ಹೈವೋಲ್ಟೇಜ್ ಪಂದ್ಯ ಆಗಿರುವುದರಿಂದ ಆಟಗಾರರ ಮೇಲೂ ಸಾಕಷ್ಟು ಒತ್ತಡವಿದೆ. ಇದಕ್ಕಾಗಿ ಟೀಮ್ ಇಂಡಿಯಾ ಪ್ಲೇಯರ್ಸ್ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಕಳೆದ ಮೂರು ದಿನಗಳಿಂದ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಇದೀಗ ಕೊಹ್ಲಿಯ ಅಭ್ಯಾಸದ ಹೊಸ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.
ಹೌದು, ಸಾಕಷ್ಟು ವಿಶ್ರಾಂತಿಯ ಬಳಿಕ ಭಾರತ ತಂಡ ಕೂಡಿಕೊಂಡಿರುವ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಈಗಾಗಲೇ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಕೊಹ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ. ಇದಕ್ಕಾಗಿ ಭರ್ಜರಿ ಅಭ್ಯಾಸ ಕೂಡ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ಮೊದಲ ಟ್ರೈನಿಂಗ್ ಸೆಷನ್ನಲ್ಲಿ ಕೊಹ್ಲಿ ಅವರು ಯುಜ್ವೇಂದ್ರ ಚಹಲ್, ರವೀಂದ್ರ ಜಡೇಜಾ, ಅಶ್ವಿನ್ ಅವರ ಬೌಲಿಂಗ್ಗೆ ಮುಂದೆ ಬಂದು ಭರ್ಜರಿ ಶಾಟ್ ಹೊಡೆದಿದ್ದು ಚೆಂಡು ಬೌಂಡರಿ ಗೆರೆ ದಾಟಿತ್ತು.
ಇದೀಗ ವಿರಾಟ್ ಮ್ಯಾಕ್ಸ್ವೆಲ್ ಅವರ ಶಾಟ್ ಮೂಲಕ ಸುದ್ದಿಯಾಗಿದ್ದಾರೆ. ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಹಾಗೂ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವ ಮ್ಯಾಕ್ಸ್ವೆಲ್ ಅವರ ಸ್ವಿಚ್ ಶಾಟ್ ಕ್ರಿಕೆಟ್ ಜಗತ್ತಿನಲ್ಲಿ ತುಂಬಾ ಫೇಮಸ್. ಇದೀಗ ಕೊಹ್ಲಿ ಇದೇ ಶಾಟ್ ಅನ್ನು ಅಭ್ಯಾಸ ಮಾಡುತ್ತಿದ್ದಾರೆ. ಚಹಲ್ ಬೌಲಿಂಗ್ನಲ್ಲಿ ಕೊಹ್ಲಿ ಸ್ವಿಚ್ ಹಿಟ್ ಶಾಟ್ ಹೊಡೆಯುವ ಮೂಲಕ ಟೀಮ್ ಇಂಡಿಯಾ ಆಟಗಾರರನ್ನು ದಂಗಾಗಿಸಿದ್ದಾರೆ. ಕೊಹ್ಲಿ ಅವರ ಈ ಬ್ಯಾಟಿಂಗ್ ಅಭ್ಯಾಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Reverse sweep from Kohli making everyone smile?? @imVkohli #ViratKohli? pic.twitter.com/A40m4a2vDS
— iᴍ_Aʀʏᴀɴ18 (@crickohli18) August 26, 2022
ಯುಎಇಗೆ ತೆರಳುವ ಮುನ್ನ ಕೂಡ ಕೊಹ್ಲಿ ಭಾರತದಲ್ಲಿ ಸಾಕಷ್ಟು ಬೆವರಿಳಿಸಿದ್ದರು. ಜಿಮ್ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ತಯಾರಿ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ವೇಟ್‌ಲಿಫ್ಟಿಂಗ್ ಕೌಶಲ್ಯ ಪ್ರದರ್ಶಿಸಿ ಎಲ್ಲರನ್ನೂ ದಂಗಾಗಿಸಿದ್ದರು. ಇದರ ನಡುವೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೊಹ್ಲಿ 100ನೇ ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿರುವ ಸಾಧನೆ ಮಾಡುವರು. ಜೊತೆಗೆ ಈ ರೆಕಾರ್ಡ್ ನಿರ್ಮಿಸುವ ಎರಡನೇ ಭಾರತೀಯ ಆಟಗಾರನಾಗಲಿದ್ದಾರೆ.
ಇನ್ನು ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಕೊಹ್ಲಿ ಪ್ರದರ್ಶನ ಅದ್ಭುತವಾಗಿದೆ. 10 ಪಂದ್ಯಗಳಲ್ಲಿ 61.30ರ ಸರಾಸರಿಯಲ್ಲಿ 613 ರನ್ ಸಿಡಿಸಿದ್ದಾರೆ. 3 ಶತಕ, 1 ಅರ್ಧಶತಕ ಬಾರಿಸಿದ್ದಾರೆ. ಏಷ್ಯಾಕಪ್ T20ಯಲ್ಲಿ ಆಡಿದ್ದು ಕಡಿಮೆ ಪಂದ್ಯಗಳಾದರೂ, ಭರ್ಜರಿ ಸರಾಸರಿ ಹೊಂದಿದ್ದಾರೆ. ಕೊಹ್ಲಿ 4 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, 76.50ರ ಸರಾಸರಿಯಲ್ಲಿ 153 ರನ್ ಕಲೆ ಹಾಕಿದ್ದಾರೆ. ಅಜೇಯ 56 ರನ್, ಕೊಹ್ಲಿಯ ಬೆಸ್ಟ್ ಸ್ಕೋರ್ ಆಗಿದೆ.