IND vs PAK: ಲೀಕ್ ಆಯ್ತು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI: ಯಾರಿಗೆಲ್ಲ ಸ್ಥಾನ ನೋಡಿ
India Playing XI vs Pakistan, Asia Cup 2022: ಆಗಸ್ಟ್ 28 ರಂದು ಗ್ರೂಪ್ ಎ ನಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಹೀಗಿರುವಾಗ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಸೋರಿಕೆಯಾಗಿದೆ.
ಹದಿನೈದನೆ ಆವೃತ್ತಿಯ ಏಷ್ಯಾಕಪ್ (Asia Cup 2022) ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ರೂಪ್ ಬಿ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ (Sri Lanka vs Afghanistan) ತಂಡ ಮುಖಾಮುಖಿ ಆಗಲಿದೆ. ಆಗಸ್ಟ್ 28 ರಂದು ಗ್ರೂಪ್ ಎ ನಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇಡೀ ವಿಶ್ವವೇ ಈ ಕಾದಾಟ ವೀಕ್ಷಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಅನೇಕ ಕಾರಣಗಳಿಂದ ಭಾರತ–ಪಾಕ್ ಕದನ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಸ್ಟಾರ್ ಆಟಗಾರರಿಂದಲೇ ತುಂಬಿರುವ ಟೀಮ್ ಇಂಡಿಯಾದಲ್ಲಿ ಪಾಕ್ ವಿರುದ್ಧದ ಪಂದ್ಯಕ್ಕೆ ಯಾರೆಲ್ಲ ಆಡುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹೀಗಿರುವಾಗ ಭಾರತದ ಪ್ಲೇಯಿಂಗ್ ಇಲೆವೆನ್ ಸೋರಿಕೆಯಾಗಿದೆ.
ನಾಳೆ (ಆ. 28) ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಪರ ಕಣಕ್ಕಿಳಿಯುವ 11 ಆಟಗಾರರು ಯಾರು ಎಂಬುದು ಬಹಿರಂಗವಾಗಿದೆ. ಈ ಬಗ್ಗೆ ಸ್ವತಃ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೇ ಹಿಂಟ್ ಒಂದನ್ನ ನೀಡಿದೆ. ಇಂಡಿಯನ್ ಕ್ರಿಕೆಟ್ ಟೀಮ್ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಟ್ಟು 11 ಆಟಗಾರರ ಫೋಟೋವನ್ನು ಸ್ಲೈಡ್ ಮೂಲಕ ಹಂಚಿಕೊಳ್ಳಲಾಗಿದೆ. ಜೊತೆಗೆ ”ಇದು ಟೀಮ್ ಇಂಡಿಯಾ ಅಭ್ಯಾಸದ ಸಮಯ, ನಮ್ಮ ಕ್ಯಾಮೆರಾ ಫೋಟೋ ತೆಗೆದ ಕ್ಷಣ,” ಎಂಬಂತೆ ಅಡಿ ಬರಹವನ್ನು ನೀಡಿದೆ.
ಬಿಸಿಸಿಐ ಹಂಚಿಕೊಂಡಿರುವ ಫೋಟೋದ ಮೊದಲ ಸ್ಲೈಡ್ನಲ್ಲಿ ಓಪನರ್ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಇದ್ದಾರೆ. ನಂತರ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಆವೇಶ್ ಖಾನ್ ಹಾಗೂ ಅರ್ಶ್ದೀಪ್ ಸಿಂಗ್ ಹೀಗೆ 11 ಆಟಗಾರರು ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಕ್ಕೆ ಅನೇಕರು ಕಮೆಂಟ್ ಕೂಡ ಮಾಡುತ್ತಿದ್ದು ಬಿಸಿಸಿಐ ಪಾಕಿಸ್ತಾನ ವಿರುದ್ಧದ ಪಂದ್ಯದಕ್ಕೆ ಭಾರತ ಪ್ಲೇಯಿಂಗ್ ಇಲೆವೆನ್ ಕುರಿತು ನೀಡಿರುವ ಸುಳಿವು ಇದಾಗಿದೆ ಎಂದು ಹೇಳುತ್ತಿದ್ದಾರೆ.
View this post on Instagram
ಈ ಪ್ಲೇಯಿಂಗ್ ಇಲೆವೆನ್ ನಿಜವೇ ಆದಲ್ಲಿ ದೀಪಕ್ ಹೂಡ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಹಾಗೂ ರವಿ ಬಿಷ್ಟೋಯಿ ಆಡುವ ಬಳಗದಿಂದ ಹೊರಗುಳಿಯಲಿದ್ದಾರೆ. ಜೊತೆಗೆ ಸ್ಟ್ಯಾಂಡ್ಬೈ ಪ್ಲೇಯರ್ಗಳಾಗಿ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಹೂಡ ಮತ್ತು ಕುಲ್ದೀಪ್ ಸೇನ್ ಕೂಡ ಕಾಣಿಸಿಕೊಳ್ಳುವುದಿಲ್ಲ. ಆದರೆ, ಗಾಯಗೊಂಡಿದ್ದ ದೀಪಕ್ ಚಹರ್ ಸುದೀರ್ಘ ವಿಶ್ರಾಂತಿ ಬಳಿಕ ಕಳೆದ ಜಿಂಬಾಬ್ವೆ ಪ್ರವಾಸದ ವೇಳೆ ಭಾರತ ತಂಡಕ್ಕೆ ಮರಳಿದ್ದರು. ಈ ಸರಣಿಯ ವೇಳೆ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರು ಕಣಕ್ಕಿಳಿದರೆ ಅಚ್ಚರಿ ಪಡಬೇಕಿಲ್ಲ.
ಭಾರತ ಹಾಗೂ ಪಾಕಿಸ್ತಾನ ನಡುವೆ ಆಗಸ್ಟ್ 28 ರಂದು ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನದೆದುರು ಸೋತಿತ್ತು. ಹೀಗಾಗಿ ಟೀಮ್ ಇಂಡಿಯಾಕ್ಕೆ ಇದೊಂದು ಸೇಡಿನ ಪಂದ್ಯ ಕೂಡ ಹೌದು, ಅಲ್ಲದೆ ಸಾಕಷ್ಟು ವಿಶ್ರಾಂತಿಯ ಬಳಿಕ ಭಾರತ ತಂಡ ಕೂಡಿಕೊಂಡಿರುವ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಈಗಾಗಲೇ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಕೊಹ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ. ಇದಕ್ಕಾಗಿ ಭರ್ಜರಿ ಅಭ್ಯಾಸದಲ್ಲಿ ಕೂಡ ನಿರತರಾಗಿದ್ದಾರೆ.
Published On - 8:53 am, Sat, 27 August 22