IND vs PAK: ಪಾಕ್ ವೇಗಿ ಶಾಹೀನ್ ಅಫ್ರಿದಿಯನ್ನು ಭೇಟಿಯಾದ ಟೀಮ್ ಇಂಡಿಯಾ ಆಟಗಾರರು
India vs Pakistan Asia Cup 202: ಭಾರತ-ಪಾಕಿಸ್ತಾನ್ ತಂಡಗಳು ಆಗಸ್ಟ್ 28 ರಂದು ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿದೆ.
Asia Cup 2022: ಒಂದೆಡೆ ಏಷ್ಯಾಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮತ್ತೊಂದೆಡೆ ಭಾರತ-ಪಾಕಿಸ್ತಾನ್ (India vs Pakistan) ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ಉಭಯ ತಂಡಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿಸಿಕೊಂಡಿದೆ. ಇದರ ನಡುವೆ ಟೀಮ್ ಇಂಡಿಯಾ (Team India) ಆಟಗಾರರು ಪಾಕಿಸ್ತಾನ್ ವೇಗಿ ಶಾಹೀನ್ ಅಫ್ರಿದಿಯನ್ನು ಭೇಟಿಯಾಗಿ ಕುಶಲೋಪರಿ ನಡೆಸಿದರು. ಪಾಕ್ ತಂಡದ ಎಡಗೈ ವೇಗಿ ಅಫ್ರಿದಿ ಮೊಣಕಾಲಿನ ಗಾಯದ ಕಾರಣ ಏಷ್ಯಾಕಪ್ನಿಂದ ಹೊರಗುಳಿದಿದ್ದಾರೆ. ಇದಾಗ್ಯೂ ಅವರ ತಂಡದೊಂದಿಗೆ ಯುಎಇಗೆ ಆಗಮಿಸಿದ್ದರು.
ಇತ್ತ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಮುಗಿಸಿ ತೆರಳುತ್ತಿದ್ದ ವೇಳೆ ಶಾಹೀನ್ ಅಫ್ರಿದಿ ಮೈದಾನದ ಬಳಿ ಕೂತಿರುವುದನ್ನು ಗಮನಿಸಿದ್ದಾರೆ. ಸಾಂಪ್ರದಾಯಿಕ ಎದುರಾಳಿ ತಂಡದ ಆಟಗಾರನನ್ನು ನೋಡಿದ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಬಂದು ಹಾಸ್ಯಚಟಾಕಿ ಹಾರಿಸುತ್ತಾ ಗಾಯದ ಬಗ್ಗೆ ವಿಚಾರಿಸಿದರು. ಇದರ ಬೆನ್ನಲ್ಲೇ ಬಂದ ವಿರಾಟ್ ಕೊಹ್ಲಿ ಕೂಡ ಗಾಯಗೊಂಡಿರುವ ಬಗ್ಗೆ ಹಾಗೂ ಗುಣಮುಖರಾಗುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಅಲ್ಲದೆ ಗಾಯದ ಬಗ್ಗೆ ಕಾಳಜಿವಹಿಸುವಂತೆ ಸಲಹೆ ನೀಡಿದರು.
ಆ ಬಳಿಕ ಬಂದ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್, ತುಂಬಾ ದಿನಗಳ ಬಳಿಕ ಹಳೆಯ ಗೆಳೆಯನನ್ನು ಭೇಟಿ ಮಾಡಿದಂತೆ ಸಂಭಾಷಣೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಇನ್ನು ಶಾಹೀನ್ ಅಫ್ರಿದಿ ಮೈದಾನದಿಂದ ತೆರಳುತ್ತಿದ್ದ ವೇಳೆ ಕೆಎಲ್ ರಾಹುಲ್ ಅವರನ್ನು ಭೇಟಿಯಾದರು.
ಈ ಮೂಲಕ ಟೀಮ್ ಇಂಡಿಯಾ ಆಟಗಾರರು ಪಾಕ್ ವೇಗಿಯನ್ನು ಭೇಟಿಯಾಗಿ ಶೀಘ್ರದಲ್ಲೇ ಗಾಯ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ. ಈ ಅಪೂರ್ವ ಕ್ಷಣಗಳ ವಿಡಿಯೋವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಟೀಮ್ ಇಂಡಿಯಾ ಆಟಗಾರರ ಕ್ರೀಡಾ ಸ್ಪೂರ್ತಿಯ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Stars align ahead of the #AsiaCup2022 ?
A high-profile meet and greet on the sidelines ? pic.twitter.com/c5vsNCi6xw
— Pakistan Cricket (@TheRealPCB) August 25, 2022
ಇನ್ನು ಭಾರತ-ಪಾಕಿಸ್ತಾನ್ ತಂಡಗಳು ಆಗಸ್ಟ್ 28 ರಂದು ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿದೆ. ಟಿ20 ವಿಶ್ವಕಪ್ ಬಳಿಕ ಉಭಯ ತಂಡಗಳು ಇದೇ ಮೊದಲ ಬಾರಿಗೆ ಎದುರು ಬದುರಾಗುತ್ತಿದ್ದು, ಹೀಗಾಗಿ ಬದ್ಧವೈರಿಗಳ ಕ್ರಿಕೆಟ್ ಕದನವನ್ನು ವೀಕ್ಷಿಸಲು ಇಡೀ ವಿಶ್ವವೇ ಕಾದು ಕುಳಿತಿದೆ.
ಪಾಕಿಸ್ತಾನ ತಂಡ ಹೀಗಿದೆ: ಬಾಬರ್ ಆಜಂ (ನಾಯಕ), ಶದಾಬ್ ಖಾನ್, ಆಸಿಫ್ ಅಲಿ, ಫಖರ್ ಝಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕಾರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಝ್ವಾನ್ (ವಿಕೆಟ್‌ಕೀಪರ್), ಹಸನ್ ಅಲಿ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್, ಶಹನವಾಝ್ ದಹಾನಿ, ಉಸ್ಮಾನ್ ಖಾದಿರ್.
ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್. ಮೀಸಲು ಆಟಗಾರರು: ಅಕ್ಷರ್ ಪಟೇಲ್, ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.